ಬೆಂಗಳೂರು: ಕೃಷಿ ವಿವಿಯಲ್ಲಿರುವ ಅಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಕಾಲೇಜಿನ ಕಾಂಪೌಂಡ್ ಒಳಗಿನ ಕಲಿಕೆಗಷ್ಟೇ ಸೀಮಿತವಾಗದೆ ರೈತರ ಹೊಲಗಳ ಭೇಟಿ ನೀಡಿ, ಅನ್ನದಾತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ಸಾಧಕ ರೈತರ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಕೃಷಿಯಿಂದ ಆಗುತ್ತಿರುವ ಲಾಭಗಳ ಬಗ್ಗೆ ವಿವಿಯಗಳ ಪ್ರಾಧ್ಯಾಪಕರು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಆದಾಯ ದ್ವಿಗುಣಗೊ ಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ರಾಜ್ಯದ ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗಾಗಿಯೇ ಸರಕಾರ ಶೇ.50ರಷ್ಟು ಸೀಟುಗಳನ್ನು ಕಾದಿರಿಸಿದೆ. ಆದರೆ ಇಲ್ಲಿ ಕಲಿಕೆ ಮಾಡಿದ ವಿದ್ಯಾರ್ಥಿಗಳು ಮರಳಿ ಕೃಷಿಯತ್ತ ತೊಡಗದೆ ಬೇರೆ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಮಾತನಾಡಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಾಗೂ ಅವರನ್ನು ಮತ್ತಷ್ಟು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕೃಷಿ ಸಂಶೋಧನೆಗಳು ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಕೃಷಿ ವಿವಿಗಳು ಚಿಂತನೆ ನಡೆಸಬೇಕಾಗಿದೆ ಎಂದರು.
ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಾಜಿ ಸಚಿವ ಡಾ| ಎಚ್.ಏಕಾಂತಯ್ಯ , ಡಾ| ಸಿ.ಎನ್.ಪಾಟೀಲ್ ಅವರನ್ನು ಸಮ್ಮಾನಿಸಲಾಯಿತು. ಕೃಷಿ ಇಲಾಖೆ ಆಯುಕ್ತ ಬಿ.ಶರತ್, ಕೃಷಿ ಇಲಾಖೆ ನಿರ್ದೇಶಕಿ ನಂದಿನಿ ಕುಮಾರಿ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಒ ದಿವಾಕರ್ ಇದ್ದರು.