ದಾವಣಗೆರೆ : ಸಣ್ಣ ವಯಸ್ಸಿನ ಮಕ್ಕಳಿಗೆ ಟಿವಿ, ಮಾಧ್ಯಮಗಳಲ್ಲಿ ಬರುವ ಕೆಲ ದೃಶ್ಯಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ದುರಂತ ಸಾಕ್ಷಿ. ಧಾರಾವಾಹಿಯೊಂದರಲ್ಲಿ ಬೆಂಕಿ ಹಚ್ಚಿಕೊಳ್ಳುವ ದೃಶ್ಯ ನೋಡಿ 7 ವರ್ಷ ದ ಬಾಲಕಿಯೊಬ್ಬಳು ಬಟ್ಟೆಗೆ ಬೆಂಕಿ ಹಚ್ಚಿಕೊಂಡು ಬೆಂದು ನರಳಿ ನರಳಿ ದಾರುಣ ಅಂತ್ಯಕಂಡ ಘಟನೆ ಹರಿಹರದಲ್ಲಿ ನವೆಂಬರ್ 11 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹರಿಹರದ ಆಶ್ರಯ ಕಾಲೋನಿಯ ಮಂಜುನಾಥ ಮತ್ತು ಚೈತ್ರಾ ದಂಪತಿ ಯ ಪುತ್ರಿ ಪ್ರಾರ್ಥನಾ ಎಂಬಾಕೆ ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಯಾನಕ ದೃಶ್ಯಗಳುಳ್ಳ ಧಾರಾವಾಹಿಯನ್ನು ನೋಡಿ ದೃಶ್ಯವನ್ನು ಅನುಕರಿಸಿ ಬೆಂಕಿ ಹಚ್ಚಿಕೊಂಡಿದ್ದಾಳೆ. ತಂಗಿಯನ್ನು ಬೆಂಕಿಯಲ್ಲಿ ಆಡುವ ಬಾ ಎಂದೂ ಕರೆದಿದ್ದಾಳೆ. ಆದರೆ ಹೆದರಿದ 5 ವರ್ಷ ಪ್ರಾಯದ ತಂಗಿ ಮನೆಯಿಂದ ಹೊರಗೆ ಹೋಗಿದ್ದಾಳೆ.
ಬೆಂಕಿ ಹಚ್ಚಿಕೊಂಡ ವಿಚಾರ ತಿಳಿದ ತಕ್ಷಣ ಮನೆಯೊಳಗೆ ದೌಡಾಯಿಸಿದ ಅಜ್ಜಿ ಮತ್ತು ಸ್ಥಳೀಯರು ಪ್ರಾರ್ಥನಾಳನ್ನು ರಕ್ಷಿಸಿ ಹರಿಹರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದಾಳೆ.
ಘಟನೆ ನಡೆಯುವ ವೇಳೆ ತಂದೆ ತಾಯಿಯಿಬ್ಬರೂ ಮನೆಯಲ್ಲಿರಲಿಲ್ಲ. ಅಜ್ಜಿ ಮಾತ್ರ ಇದ್ದರು ಎಂದು ವರದಿಯಾಗಿದೆ.
ಪ್ರಾರ್ಥನಾ ಪೋಷಕರು ‘ಮುಂದೆ ಯಾವ ಮಕ್ಕಳು ಈ ರೀತಿ ಮಾಡಿಕೊಳ್ಳಬಾರದು, ಈ ಬಗ್ಗೆ ಅರಿವು ಮೂಡಬೇಕು, ಪೋಷಕರು ಎಚ್ಚರಿಕೆ ವಹಿಸಬೇಕು’ ಎನ್ನುವ ಸದುದ್ದೇಶದೊಂದಿಗೆ ಈ ವಿಚಾರವನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದಾರೆ.
ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8 ರಿಂದ 9 ರ ವರೆಗೆ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು ಮೃತ ಬಾಲಕಿ ನಿತ್ಯವೂ ತಪ್ಪದೇ ವೀಕ್ಷಿಸುತ್ತಿದ್ದಳು ಎಂದು ತಿಳಿದು ಬಂದಿದೆ.