ಕಲಬುರಗಿ: ಮನುಷ್ಯ ಧಾರ್ಮಿಕವಾಗಿ, ಆಧ್ಯಾತ್ಮಕವಾಗಿ ನೆಲೆಯೂರಬೇಕಾದರೆ ಮನಸ್ಸಿನಲ್ಲಿ ಕೃತಜ್ಞತೆ ಭಾವ ಹೊಂದಿರಬೇಕು ಎನ್ನುವುದನ್ನು ಮಹಾಭಾರತ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನುಡಿದರು.
ಚಾತುರ್ಮಾಸ್ಯ ನಿಮಿತ್ತ ನೂತನ ವಿದ್ಯಾಲಯ ಆವರಣದಲ್ಲಿ ಹಾಕಲಾಗಿರುವ ಪ್ರಧಾನ ವೇದಿಕೆಯಲ್ಲಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು ಜೀವನದಲ್ಲಿ ಕೃತಜ್ಞತೆ ಮಹತ್ವ ಮತ್ತು ಅದರ ಅನರ್ಥ ಎರಡನ್ನು ತಿಳಿಯಬೇಕು. ನಮಗೆ ಉಪಕಾರ ಮಾಡಿದವರಿಗೆ ದ್ರೋಹ ಮಾಡಿದರೆ ಬ್ರಹ್ಮಹತ್ಯೆ ದೋಷಕ್ಕಿಂತ ಹೆಚ್ಚಿನ ಪಾಪ ಬರುತ್ತದೆ. ಆದ್ದರಿಂದ ಕೃತಜ್ಞತೆ ಸಲ್ಲಿಸುವ ಭಾವನೆ ಹೊಂದಿರಬೇಕು.
ಭೀಷ್ಮಾಚಾರ್ಯರು ಧರ್ಮರಾಜನಿಗೆ ನೀತಿ ಪಾಠ ಹೇಳುವ ಮೂಲಕ ಮಾನವರು ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿಕೊಡುತ್ತಾರೆ ಎಂದರು. ಗೌತಮ ಎನ್ನುವ ದರಿದ್ರ ಬ್ರಾಹ್ಮಣ ಮತ್ತು ರಾಯಧರ್ಮ ಎನ್ನುವ ಪಕ್ಷಿಯ ಕಥೆ ಹೇಳುವ ಮೂಲಕ ಕೃತಜ್ಞತೆ ಮರೆತರೆ ಏನಾಗುತ್ತದೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಉಪಕಾರ ಮಾಡಿದ ಪಕ್ಷಿಗೆ ದ್ರೋಹ ಮಾಡಿದ ಬ್ರಾಹ್ಮಣನಿಗೆ ನರಕಪ್ರಾಪ್ತಿ ಆಯಿತು. ಆ ಪಕ್ಷಿಗೆ ಸತ್ಯಲೋಕದಲ್ಲಿ ವಾಸವಾಗುವ ಅವಕಾಶ ಸಿಕ್ಕಿತು. ನಮ್ಮ ನಿಜ ಜೀವನದಲ್ಲೂ ಪಕ್ಷೀವಾಹನನಾದ ಭಗವಂತನು ನಮಗೆ ಮಾಡಿದ ಉಪಕಾರದ ಸ್ಮರಣೆ ಮರೆತರೆ ನಾವೂ ಕೂಡ ಆ ಬ್ರಾಹ್ಮಣ ಅನುಭವಿಸಿದ ನರಕಯಾತನೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದರು.
ಕೃಷ್ಣಾಮೃತ ಮಹಾರ್ಣವ ಗ್ರಂಥದ ಪಾಠ: ನಗರದಲ್ಲಿ ನಡೆದು ಬರುತ್ತಿರುವ 23 ನೇ ಚಾತುರ್ಮಾಸ್ಯದ ವ್ರತಾಚರಣೆಯ ಅಂಗವಾಗಿ ನಿತ್ಯ ಬೆಳಗ್ಗೆ 7 ರಿಂದ 8 ಗಂಟೆ ವರೆಗೆ ಅವಧಿ ಮಧ್ವಾಚಾರ್ಯರು ರಚಿಸಿರುವ ಕೃಷ್ಣಾಮೃತ ಮಹಾರ್ಣವ ಗ್ರಂಥದ ಪಾಠ ಮುಂದುವರಿದಿದೆ.ಉತ್ತರಾದಿ ಮಠದ ಮೂಲದ ಪುರುಷ ಹಂಸನಾಮಕ ಶ್ರೀಮನ್ಮಹಾವಿಷ್ಣು ಜಗತ್ತಿನಲ್ಲಿ ಧರ್ಮದ ವಿಸ್ತಾರಕ್ಕೋಸ್ಕರ ಚತುರ್ಮುಖ ಬ್ರಹ್ಮದೇವರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಂಚರಾತ್ರದ ರಹಸ್ಯವನ್ನು ಜಗತ್ತಿನಲ್ಲಿ ಪ್ರಚುರಪಡಿಸಿದ ಕಾರಣ ಹಂಸನಾಮಕ ಭಗವಂತನನ್ನು ಉತ್ತರ ಎನ್ನುವ ನಾಮಧೇಯದಿಂದ ಸಂಬೋಧಿಸಲಾಗಿದೆ ಎಂದು ವಿವರಿಸಿದರು.
ವಿಷ್ಣು ಸಹಸ್ರನಾಮದಲ್ಲಿಯೂ ಉತ್ತರಗೋಪತಿಃ ಗೋಪ್ತಾ ಎಂದು ಕರೆಯಲಾಗಿದೆ. ಸನಾತನ ವೈಷ್ಣವ ಸಿದ್ಧಾಂತದ ಪ್ರಚಾರ ಪ್ರಸಾರಕ್ಕಾಗಿ ಉತ್ತರನಾಮಕ ಹಂಸರೂಪಿ ಭಗವಂತನು ಸ್ಥಾಪಿಸಿದ ಪೀಠವೇ ಉತ್ತರಾದಿ ಮಠ. ಉತ್ತರನೇ ಆದಿ ಅಂದರೆ ಮೊದಲಗೊಂಡ ಮಠ. ಇದೇ ನಮ್ಮ ಉತ್ತರಾದಿ ಮಠ ಎಂದಾಗ ಭಕ್ತರು ಕರತಾಡನ ಮಾಡುವ ಮೂಲಕ ಸಂತಸಪಟ್ಟರು.