ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಬೇಕೆಂಬ ಜಾರಕಿಹೊಳಿ ಸಹೋದರರ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಮಣಿದರೆ ಈಗಾಗಲೇ ಉಪ ಮುಖ್ಯಮಂತ್ರಿಯಾಗಿರುವ ಜಿ.ಪರಮೇಶ್ವರ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ.
ನಾಯಕ(ಎಸ್ಟಿ) ಸಮುದಾಯಕ್ಕೆ ಸೇರಿರುವ ಜಾರಕಿಹೊಳಿ ಸಹೋದರರು ಬಂಡಾಯವೆದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಿರುವುದರಿಂದ ಡಿಸಿಎಂ ಪರಮೇಶ್ವರ್ ಸ್ಥಾನಕ್ಕೆ ಕುತ್ತು ಬರುತ್ತದೆಂಬ ಆತಂಕದಿಂದ ಪರಿಶಿಷ್ಟ ಜಾತಿ ಸಮುದಾಯದ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ.
ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಚಿವ ರಮೇಶ್ ಜಾರಕಿಹೊಳಿ ನಡೆಸಿದ ಮಾತುಕತೆ ಸಂದರ್ಭದಲ್ಲಿ ತಮ್ಮ ಸಹೋದರನಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ರಮೇಶ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಈಗಾಗಲೇ ದಲಿತ ಸಮುದಾಯದ ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಅದನ್ನು ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ತಳ್ಳಿ ಹಾಕುವ ಬದಲು ಮೌನ ವಹಿಸಿದ್ದರು ಎನ್ನಲಾಗಿದೆ.
ಹೈಕಮಾಂಡ್ ಜತೆಗಿನ ಮಾತುಕತೆ ಸಂದರ್ಭದಲ್ಲಿಯೂ ಜಾರಕಿಹೊಳಿ ಸಹೋದರರು ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟರೆ, ಪರಮೇಶ್ವರ್ ಅಧಿಕಾರಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ ಎಂಬ ಲೆಕ್ಕಾಚಾರದಲ್ಲಿ ಮಾಜಿ ಸಂಸದ ಎಚ್.ಹನುಮಂತಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ನ ಕೆಲವು ಮುಖಂಡರು ಪರಮೇಶ್ವರ್ ಹಾಗೂ ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದಿದ್ದಾರೆ. ಬುಧವಾರವೂ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ ಶಾಸಕರು ಸಭೆ ಸೇರಿ ತಮ್ಮ ಕ್ಷೇತ್ರಗಳಿಗೆ ಆಗಬೇಕಾದ ಕೆಲಸಗಳು ಹಾಗೂ ಪರಿಶಿಷ್ಟ ಜಾತಿಯ ಶಾಸಕರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ರಾಜ್ಯ ಮುಖಂಡರು ಹೈಕಮಾಂಡ್ ಭೇಟಿ ಮಾಡುವ ಕುರಿತಂತೆ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.
ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆ ಜತೆಗೆ ಸಮುದಾಯದ ಶಾಸಕರು ಹಾಗೂ ಮುಖಂಡರಿಗೆ ಸರ್ಕಾರ ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನ ಕೊಡಿಸುವ ಮೂಲಕ ಹೆಚ್ಚಿನ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದ್ದು, ಜನಸಂಖ್ಯೆಯ ಶೇ.7ರಷ್ಟಿರುವ ಪರಿಶಿಷ್ಟ ಪಂಗಡದ ಸಮುದಾಯ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಪ್ರಬಲವಾಗಲಿದ್ದು, ದಲಿತ ಸಿಎಂ ಬೇಡಿಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪರಿಶಿಷ್ಟ ಜಾತಿಯ (ಎಸ್ಸಿ) ಮುಖಂಡರು ಎಚ್ಚೆತ್ತುಕೊಂಡು ಸಮುದಾಯದ ಶಕ್ತಿ ಮತ್ತು ಪಕ್ಷದಲ್ಲಿ ಸಿಗಬೇಕಾದ ಮಾನ್ಯತೆಗೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
ಜಾರಕಿಹೊಳಿ ಸಹೋದರರು ತಮ್ಮ ಪ್ರಭಾವ ಬಳಸಿ ಉನ್ನತ ಹುದ್ದೆಗಳನ್ನು ಪಡೆಯುವುದಲ್ಲದೇ ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯ ನಾಯಕರಿಗೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಂಗೆಸ್‌ನಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿದ 12 ಶಾಸಕರಿದ್ದಾರೆ. ಎಸ್ಟಿ ಸಮುದಾಯಕ್ಕೆ ಸೇರಿದ 9 ಶಾಸಕರಿದ್ದು, ಜಾರಕಿಹೊಳಿ ಸಹೋದರರು ಬಂಡಾಯದ ಮೂಲಕ ಸಂಪುಟ ಹಾಗೂ ನಿಗಮ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ ಬೇಡಿಕೆ ಇಟ್ಟಿದ್ದು, ಅಧಿಕ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿಯವರಿಗೂ ಅದೇ ರೀತಿಯ ಪ್ರಾತಿನಿಧ್ಯ ಪಡೆಯಲು ಹೈಕಮಾಂಡ್ ಮೇಲೆ ಒತ್ತಡ ಹೇರಬೇಕೆಂದು ದಲಿತ ನಾಯಕರು ಹಾಗೂ ಶಾಸಕರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
ದಲಿತರಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಅಲ್ಲದೇ ನಮ್ಮ ಸಮುದಾಯದ ಶಾಸಕರಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿಲ್ಲ. ಈ ಕುರಿತು ಚರ್ಚೆ ನಡೆಸಿದ್ದೇವೆ. ಎಸ್ಸಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಕುಮಾರಸ್ವಾಮಿ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಲು ನಿರ್ಧರಿಸಿದ್ದೇವೆ.
– ಎಸ್.ಎನ್. ನಾರಾಯಣ ಸ್ವಾಮಿ, ಬಂಗಾರಪೇಟೆ ಶಾಸಕ
– ಶಂಕರ ಪಾಗೋಜಿ