ನ್ಯೂಯಾರ್ಕ್: ಈಗಿನ ಮಕ್ಕಳಿಗೆ ಕುರುಕಲು ತಿಂಡಿಗಳೇ ಇಷ್ಟ. ಮನೆ ಆಹಾರ ರುಚಿಸುವುದೇ ಇಲ್ಲ ಎಂದು ತಾಯಂದಿರು ಹೇಳುವುದು ಕೇಳಿಸಿರಬಹುದು. ಮಕ್ಕಳ ಇಂತಹ ಪ್ರತಿಕ್ರಿಯೆಗೆ ಅವರ ಶಾಲೆ, ಮನೆ ಪಕ್ಕದ ತಿಂಡಿ ಅಂಗಡಿಗಳು, ಹೋಟೆಲ್‌ಗಳಲ್ಲಿರುವ ಆಹಾರಗಳೇ ಕಾರಣ ಎಂದು ಸಮೀಕ್ಷೆಯೊಂದು ಹೇಳಿದೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಎನ್‌ವೈಯು ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಈ ಸಮೀಕ್ಷೆಯನ್ನು ನಡೆಸಿದ್ದು, ಮಕ್ಕಳ ಆಹಾರ ಶೈಲಿಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪತ್ತೆ ಮಾಡಿದ್ದಾರೆ. ಈ ಸಂಶೋಧನೆಯನ್ನು “ಒಬೆಸಿಟಿ’ ಹೆಸರಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಸಂಶೋಧಕರ ಪ್ರಕಾರ, 5-18 ವಯಸ್ಸಿನ ಮಕ್ಕಳು ವಿಶೇಷವಾಗಿ ನಗರ ಪ್ರದೇಶಕ್ಕೆ ತಾಗಿದಂತೆ ವಾಸಿಸುವವರು ಫಾಸ್ಟ್‌ಫುಡ್‌ಗಳನ್ನು ತಿನ್ನುತ್ತಾರಂತೆ ಇವರಲ್ಲಿ ಶೇ.20ರಷ್ಟು ಮಂದಿಗೆ ಸ್ಥೂಲಕಾಯದ ಸಮಸ್ಯೆಯಿದ್ದು, ಶೇ.38ರಷ್ಟು ಮಂದಿ ಹೆಚ್ಚು ತೂಕ ಹೊಂದಿರುತ್ತಾರಂತೆ. ಇದೇ ರೀತಿ ನಗರಗಳ ಒಳಗೇ ವಾಸಿಸುವ ಮಕ್ಕಳಲ್ಲಿ ಶೇ.21ರಷ್ಟು ಮಂದಿಗೆ ಸ್ಥೂಲಕಾಯ ಮತ್ತು ಶೇ.40ರಷ್ಟು ಮಂದಿಗೆ ಅತಿ ತೂಕದ ಸಮಸ್ಯೆಯಿದೆ ಎಂದು ಪತ್ತೆ ಮಾಡಲಾಗಿದೆ.
ಇದರೊಂದಿಗೆ ಹೋಟೆಲ್, ತಿಂಡಿ ಅಂಗಡಿಗಳ ಪಕ್ಕದಲ್ಲಿರುವ ಮನೆಗಳಲ್ಲಿ ವಾಸಿಸುವ ಮಕ್ಕಳು ಹೆಚ್ಚಾಗಿ ಅನಾರೋಗ್ಯಕರವಾದ ಆಹಾರಗಳನ್ನು ತಿನ್ನುತ್ತಾರೆ. ಇವರು ಹೆಚ್ಚಾಗಿ ಫಾಸ್ಟ್‌ಫುಡ್‌ಗಳನ್ನು ಅತಿಯಯಾಗಿ ಸೇವಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಹೀಗೆ ಆರೋಗ್ಯಕರವಾದ ಆಹಾರಕ್ಕಿಂತ ಭಿನ್ನವಾದ ಆಹಾರ ಕ್ರಮವನ್ನು ಅನುಸರಿಸುವುದರಿಂದ ಆರೋಗ್ಯದ ಸಮಸ್ಯೆ, ಹೃದಯದ ಸಮಸ್ಯೆ, ಸಕ್ಕರೆ ಕಾಯಿಲೆ, ಬೇಗನೆ ಸಾವು ಕಾಡಬಹುದು ಎಂದು ಸಮೀಕ್ಷೆ ಎಚ್ಚರಿಸಿದೆ. ಈಗಿನ ಮಕ್ಕಳು ಹೆಚ್ಚಾಗಿ ಅನಾರೋಗ್ಯಕರವಾದ ಆಹಾರವನ್ನು ಹೆಚ್ಚು ಇಷ್ಟ ಪಡುತ್ತಿರುವುದು ಒಳ್ಳೆಯದಲ್ಲ ಎಂದು ಸಮೀಕ್ಷೆ ಎಚ್ಚರಿಸಿದೆ.