Advertisement
ಅದರಂತೆ, ಇನ್ಫೋಸಿಸ್ ಕಂಪೆನಿಯು ತನ್ನದೇ ಆದ 11.3 ಕೋಟಿ ಷೇರುಗಳನ್ನು ಹೂಡಿಕೆದಾರರಿಂದ ಖರೀದಿಸಲಿದೆ. ಇದಕ್ಕಾಗಿ ಕಂಪೆನಿ 13 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಒಂದು ಷೇರಿಗೆ 1,150 ರೂ.ಗಳ ಲೆಕ್ಕದಲ್ಲಿ ಖರೀದಿ ನಡೆಯಲಿದೆ. ಅಂದರೆ, ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಷೇರು ದರ ಏನಿತ್ತೋ ಅದರ ಶೇ.25ರಷ್ಟು ಹೆಚ್ಚು ಮೊತ್ತಕ್ಕೆ ಖರೀದಿಸುವ ಮೂಲಕ ಮಾರುಕಟ್ಟೆಯಲ್ಲಿ ಕಂಪೆನಿಯ ಷೇರು ದರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಡೆಯಲಾಗುತ್ತದೆ.
ಏತನ್ಮಧ್ಯೆ, ಸಿಕ್ಕಾ ರಾಜೀನಾಮೆಯಿಂದ ತೆರವಾದ ಸಿಇಒ ಸ್ಥಾನವನ್ನು ಭರ್ತಿ ಮಾಡುವುದೇ ಇದೀಗ ಇನ್ಫೋಸಿಸ್‌ಗೆ
ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕಂಪೆನಿಯ ಆಡಳಿತ ಮಂಡಳಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದೆ. ಹೀಗಿರುವಾಗ, ಸಿಇಒ ಸ್ಥಾನಕ್ಕೆ ಯಾರನ್ನು ನೇಮಕ ಮಾಡುವುದು, ಅದಕ್ಕೆ ಮಂಡಳಿಯ ಎಲ್ಲ ಸದಸ್ಯರು ಒಪ್ಪುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಅಂದು ಬಾಹ್ಯ ಅಭ್ಯರ್ಥಿಯಾದ ವಿಶಾಲ್ ಸಿಕ್ಕಾ ಅವರನ್ನು ನೇಮಕ ಮಾಡುವಾಗಲೇ ಹಲವು ಸವಾಲುಗಳು ಎದುರಾಗಿದ್ದವು. ಈಗ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟಕರವಾಗಿದೆ ಎಂದು ಕಂಪೆನಿ ಮೂಲಗಳು ಹೇಳಿವೆ. ಕಂಪೆನಿಯು ಇನ್ನೂ ಯಾವುದೇ ಬಾಹ್ಯ ಅಭ್ಯರ್ಥಿಯ ನೇಮಕದ ಕುರಿತು ಚಿಂತನೆ ನಡೆಸಿಲ್ಲ. ಇನ್ನು ಕಂಪೆನಿಯೊಳಗೇ ಇರುವವರ ಬಗ್ಗೆ ಹೇಳುವುದಾದರೆ ಮಧ್ಯಂತರ ಸಿಇಒ ಪ್ರವೀಣ್ ರಾವ್, ಸಿಎಫ್ಒ ರಂಗನಾಥ್ ಡಿ. ಮಾವಿನಕೆರೆ, ಉಪ ಸಿಒಒ ರವಿಕುಮಾರ್ ಎಸ್., ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಸೇವೆಗಳ ಮುಖ್ಯಸ್ಥ ಮೋಹಿತ್ ಜೋಷಿ ಮತ್ತಿತರರ ಹೆಸರುಗಳು ಸಿಇಒ ಹುದ್ದೆಗೆ ಕೇಳಿಬರುತ್ತಿವೆ.