Advertisement

BJP ಯಲ್ಲಿ ಮೋದಿ ಉತ್ತರಾಧಿಕಾರಿ ಆಯ್ಕೆ ಒಳಸಮರ: ಕೇಜ್ರಿವಾಲ್‌

01:13 AM May 25, 2024 | Team Udayavani |

ಹೊಸದಿಲ್ಲಿ: “ನಾಯಕತ್ವಕ್ಕಾಗಿ ಬಿಜೆಪಿಯೊಳಗೇ ಹೋರಾಟ ಆರಂಭವಾಗಿದೆ. ಪ್ರಧಾನಿ ಮೋದಿಯವರ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಪಕ್ಷದೊಳಗೆ ಪೈಪೋಟಿ ನಡೆದಿದೆ.’ ಹೀಗೆಂದು ಹೇಳಿದ್ದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌.

Advertisement

ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್‌, “ಈ ಲೋಕಸಭೆ ಚುನಾವಣೆಯನ್ನು ಬಿಜೆಪಿ ಒಂದೇ ತಂಡವಾಗಿ ಎದುರಿಸುತ್ತಿಲ್ಲ. ಈ ವರ್ಷದ ಸೆ. 25ರ ವೇಳೆಗೆ ಪ್ರಧಾನಿ ಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಬರಲಿದ್ದಾರೆ. ಮೋದಿ ಉತ್ತರಾಧಿಕಾರಿ ಪಟ್ಟಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಮೋದಿಯವರು ತಮ್ಮ ಉತ್ತರಾಧಿಕಾರಿ ಪಟ್ಟಕ್ಕೆ ಅಮಿತ್‌ ಶಾ ಅವರನ್ನು ನೇಮಕ ಮಾಡಲು ಉತ್ಸುಕರಾಗಿದ್ದಾರೆ’ ಎಂದಿದ್ದಾರೆ. ಆದರೆ ಈ ಪ್ರಸ್ತಾವಕ್ಕೆ ಬಿಜೆಪಿಯಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

75 ವರ್ಷ ಪೂರ್ತಿಗೊಂಡವರಿಗೆ ಅಧಿಕಾರ ಇಲ್ಲ ಎಂಬ ನಿಲುವನ್ನು ಅಮಿತ್‌ ಶಾ 2019ರಲ್ಲಿ ಹೇಳಿದ್ದರು. ಈ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಮಾಹಿತಿ ಸಿಗುತ್ತದೆ. 2014ರಲ್ಲಿ ಪ್ರಧಾನಿ ಮೋದಿಯವರು ಯುವಕರಿಗೆ ಅಧಿಕಾರ ಸಿಗುವುದಕ್ಕಾಗಿ ಈ ನಿಯಮ ಜಾರಿಗೊಳಿಸಿದ್ದರು ಎಂದು ದಿಲ್ಲಿ ಸಿಎಂ ನೆನಪಿಸಿದ್ದಾರೆ. ಶಿವರಾಜ್‌ ಸಿಂಗ್‌ ಚೌಹಾಣ್‌, ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ ಜೋಶಿ, ಎಂ.ಎಲ್‌. ಖಟ್ಟರ್‌ ಅವರನ್ನು ವಯೋಮಿತಿಯ ಕಾರಣಕ್ಕಾಗಿಯೇ ಬಲವಂತವಾಗಿ ನಿವೃತ್ತಿಗೊಳಿಸಲಾಯಿತು ಎಂದೂ ಕೇಜ್ರಿ ಆರೋಪಿಸಿದ್ದಾರೆ.

ಜೈಲಲ್ಲಿದ್ದರೆ 70 ಸ್ಥಾನ
ಮುಂದಿನ ದಿಲ್ಲಿ ವಿಧಾನಸಭೆ ಚುನಾವಣೆ ವೇಳೆ ನೀವು ಜೈಲಲ್ಲಿದ್ದರೆ ನಿಮ್ಮ ಪತ್ನಿ ಸುನೀತಾ ಅವರು ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್‌, ನಾನು ಜೈಲಿನಲ್ಲೇ ಇದ್ದರೆ ದಿಲ್ಲಿ ವಿಧಾನಸಭೆಗೆ 2025ರಲ್ಲಿ ನಡೆಯುವ ಚುನಾವಣೆಯಲ್ಲಿ 70ರಲ್ಲಿ 70 ಸ್ಥಾನಗಳನ್ನೂ ಆಪ್‌ ಗೆಲ್ಲಲಿದೆ ಎಂದಿದ್ದಾರೆ. ಪತ್ನಿ ಸುನೀತಾ ರಾಜಕೀಯ ಪ್ರವೇಶ ಮಾಡುವುದಿಲ್ಲ. ಒಂದು ವೇಳೆ ನಾನು ಜೈಲಲ್ಲಿಯೇ ಇದ್ದರೆ ಅಲ್ಲಿಂದಲೇ ಸ್ಪರ್ಧಿಸಿ ಜಯ ಗಳಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next