ಚಿಂತಾಮಣಿ: ಬಂಜೆತನ ನಿವಾರಣೆಗೆ ತಪಾಸಣೆ ಮತ್ತು ಚಿಕಿತ್ಸೆಗೆ ಅಪೋಲೋ ವತಿಯಿಂದ ಚಿಂತಾಮಣಿ ನಗರದ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಬಂಜೆತನಕ್ಕೆ ಸಂಬಂಧಿಸಿದ ಎಲ್ಲಾ ತರಹದ ತಪಾಸಣೆ ಮತ್ತು ಚಿಕಿತ್ಸೆಯ ಲ್ಯಾಬ್‌ನ್ನು ಪ್ರಾರಂಭಿಸಲಾಗಿದೆ ಎಂದು ಲಕ್ಷ್ಮೀ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಿ.ಎನ್.ನರಸಿಂಹರೆಡ್ಡಿ ತಿಳಿಸಿದ್ದಾರೆ. ನಗರದ ಎನ್.ಆರ್.ಬಡಾವಣೆ ವರದಾ ಮಿಲ್ ರಸ್ತೆಯಲ್ಲಿರುವ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಬಂಜೆತನ ಸಂಬಂಧಿತ (ಐಯುಐ ಸೆಂಟರ್) ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಚಿಂತಾಮಣಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ಜನತೆಯು ಬಂಜೆತನಕ್ಕೆ ಸಂಬಂಧಿಸಿದಂತೆ ತಪಾಸಣೆ ಮತ್ತು ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದರ ಬೇಡಿಕೆಯ ಕುರಿತು ಅಪೋಲೋ ಸಂಸ್ಥೆಯೊಂದಿಗೆ ಮಾತನಾಡಿ ಚಿಂತಾಮಣಿ ನಗರದಲ್ಲಿ ಲ್ಯಾಬ್ ಆರಂಭಿಸಿದಲ್ಲಿ ಈ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆ ಮತ್ತು ಬಂಜೆತನದ ಸಮಸ್ಯೆಯ ನಿವಾರಣೆ ಮಾಡಬಹುದೆಂದು ಚಿಂತನೆ ನಡೆಸಿ ಇಲ್ಲಿ ಲ್ಯಾಬ್ ಆರಂಭಿಸುತ್ತಿರುವುದು ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದರು. ಡಾ. ವಿಕ್ರಮ್ ಮಾತನಾಡಿದರು. ಅಪೋಲೋ ಹೆಲ್ತ್ ಆ್ಯಂಡ್ ಲೈಫ್ಸ್ಟೈಲ್ ಲಿಮಿಟೆಡ್‌ನ ಗ್ರೂಪ್ ಸಿಇಒ ಚಂದ್ರಶೇಖರ್ ಸಿ, ಅಪೋಲೋ ಸಂಸ್ಥೆಯ ಸಿಒಒ ಅನುಭವ್ ಪ್ರಶಾಂತ್, ಡಾ. ಜಯಂತಿ, ಡಾ.ಎಂ.ವಿ.ಅಪರ್ಣಾರೆಡ್ಡಿ, ಡಾ.ಬಿ.ಎನ್.ಬೈರಾ ರೆಡ್ಡಿ, ಡಾ.ಕೈಸರ್ ಬೇಗಂ, ಡಾ.ಆರತಿ ರಾಮಾರಾವ್, ಡಾ.ವಿ.ಎಸ್.ಕಾತ್ಯಾಯಿನಿ, ಡಾ.ಯಲ್ಲಪ್ಪಗೌಡ ಇದ್ದರು.