ನಾಗಮಂಗಲ: ತಾಲೂಕಿನ ಅಣೆ ಚನ್ನಾಪುರ ಗ್ರಾಮಕ್ಕೆ ಸಾಂಕ್ರಾಮಿಕ ರೋಗಗಳು ಮುತ್ತಿಕೊಂಡು ಗ್ರಾಮಸ್ಥರು ನರಕ ವೇದನೆ ಅನುಭವಿಸುವಂತಾಗಿದೆ. ಕಳೆದ 2 ವಾರದಿಂದ ಗ್ರಾಮದ ಶೇ.90ರಷ್ಟು ಜನ ಮೈ ಕೈ ನೋವು, ವೈರಲ್ ಜ್ವರದಿಂದ ಬಳಲಿ ಹಾಸಿಗೆ ಹಿಡಿದಿದ್ದಾರೆ. ಡೆಂಘೀ ಜ್ವರದ ಸೂಚನೆಗಳು ಗೋಚರಿಸುತ್ತಿವೆ.
ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವುದಕ್ಕೆ ಕಾರಣವೇನು ಎಂಬುದಕ್ಕೆ ವೈದ್ಯಾಧಿಕಾರಿಗಳಿಗೆ ನಿಖರ ಕಾರಣ ತಿಳಿದಿಲ್ಲ. ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು. ಅದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿ ರೋಗ ಹರಡಲು ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಣೆಚನ್ನಾಪುರದ ಪ್ರತಿ ಮನೆಯಲ್ಲೂ ಜನರು ರೋಗಪೀಡಿತರಿದ್ದಾರೆ. ಜ್ವರ, ಮೈ-ಕೈನೋವಿನಿಂದ ಕೆಲವರು ಚಿಕಿತ್ಸೆಗಾಗಿ ದೂರದ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾತ್ಕಾಲಿಕ ಶಿಬಿರದಲ್ಲಿ ಚಿಕಿತ್ಸೆ: ಗ್ರಾಮಸ್ಥರ ಆತಂಕ ನಿವಾರಿಸುವ ಉದ್ದೇಶದಿಂದ ಶಾಸಕ ಸುರೇಶ್‌ಗೌಡ ವೈದ್ಯರ ತಂಡದೊಂದಿಗೆ ಗ್ರಾಮದಲ್ಲಿಯೇ ತಪಾಸಣೆ ನಡೆಸುವ ಸಲುವಾಗಿ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆದು ರೋಗಸ್ಥರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಜ್ವರದ ತಾಪ ಹೆಚ್ಚಾಗಿ ಹಲವು ಮಂದಿ ಗ್ರಾಮಸ್ಥರು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಾಗಿದ್ದರು. ಆಸ್ಪತ್ರೆಗೂ ಭೇಟಿ ನೀಡಿದ ಶಾಸಕರು ಗ್ರಾಮಸ್ಥರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಗ್ರಾಮದಲ್ಲಿ ಸುಮಾರು 80ಕ್ಕಿಂತ ಹೆಚ್ಚು ಮಂದಿ ಜ್ವರಕ್ಕೆ ತುತ್ತಾಗಿರುವ ಬಗ್ಗೆ ತಿಳಿದು ಬಂದಿದೆ.
ಸಾಂಕ್ರಾಮಿಕ ರೋಗಕ್ಕೆ ಕಾರಣವೇನು? ಶಾಸಕ ಸುರೇಶ್‌ಗೌಡ ಸಮಸ್ಯೆಗೆ ನಿಖರ ಕಾರಣ ಏನೆಂದು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಉತ್ತರಿಸಿದರು.
ಗ್ರಾಮಸ್ಥರು ನೀರು ಶೇಖರಿಸುತ್ತಿರುವ ಪಾತ್ರೆಗಳನ್ನು ಸರಿಯಾಗಿ ಶುಚಿ ಮಾಡದಿರುವುದು ಕೂಡ ಕಾರಣವಿರಬಹುದು. ಮನೆಯ ಯಾವುದೋ ಮೂಲೆಯಲ್ಲಿ ಇಟ್ಟಿರುವ ಟೈರುಗಳು ಮತ್ತಿತರೆ ಹಳೆಯ ವಸ್ತುಗಳಲ್ಲಿ ಶೇಖರಣೆಯಾದ ನೀರಿನಿಂದ ಹೆಚ್ಚು ಸೊಳ್ಳೆ ಉತ್ಪತ್ತಿಯಾಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಗ್ರಾಮದ ಪ್ರತಿ ಮನೆಗಳಲ್ಲಿ ಶುಚಿತ್ವ ಕಾಪಾಡಿ ಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ವೈದ್ಯರ ತಂಡ ಗ್ರಾಮದಲ್ಲೇ ವಾಸ್ತವ್ಯ: ಗ್ರಾಮಸ್ಥರ ಆರೋಗ್ಯ ಒಂದು ಹಂತಕ್ಕೆ ಬರುವ ತನಕ ವೈದ್ಯರ ತಂಡ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಬೇಕು. ಅದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು. ಗ್ರಾಮಸ್ಥರ ದೂರಿಗೆ ಸ್ಪಂದಿಸುತ್ತಾ ಕೂಡಲೇ ಗ್ರಾಮದ ಎಲ್ಲಾ ಚರಂಡಿಗಳ ಸ್ವಚ್ಛತೆ ಆಗಬೇಕು. ಎಲ್ಲಾದರೂ ಗುಂಡಿಗಳು ಇದ್ದು ನೀರು ನಿಂತಿರುವ ಸನ್ನಿವೇಶ ಇದ್ದರೆ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವುದು. ಗ್ರಾಮಸ್ಥರ ಆರೋಗ್ಯ ಸುಧಾರಿಸಲು ತುರ್ತಾಗಿ ಆಗಬೇಕಾದ ಕೆಲಸಗಳ ಬಗ್ಗೆ ನಿಗಾ ವಹಿಸುವಂತೆ ಪಿಡಿಒ ಮತ್ತು ವೈದ್ಯಾಧಿಕಾರಿಗಳಿಗೆ ಶಾಸಕ ಸುರೇಶ್‌ಗೌಡ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ನಾರಾಯಣ್, ಪಿಡಿಒ ಸುರೇಶ್, ಆರೋಗ್ಯ ಪರೀಕ್ಷಕ ಶ್ರೀನಿವಾಸಮೂರ್ತಿ ಮುಂತಾದವರು ಉಪಸ್ಥಿತರಿದ್ದರು.