Advertisement
ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಚರಂಡಿ ನೀರು ಸೇರುವಿಕೆ, ಪರಿಸರದಲ್ಲಿ ಸ್ವಚ್ಛತೆ ಕೊರತೆ, ತಾಜ್ಯ ನಿರ್ವಹಣೆ ಕೊರತೆ, ಗ್ರಾಮೀಣ ಪ್ರದೇಶದಲ್ಲಿನ ಬಯಲು ಶೌಚಾಲಯ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗುತ್ತಿದೆ.
ಮಲೇರಿಯಾ-ಡೆಂಘೀ ಆತಂಕ:
2010ರಲ್ಲಿ 309 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ 2018ರಲ್ಲಿ 25 ಜನರಲ್ಲಿ ಕಾಣಿಸಿಕೊಂಡಿತ್ತು. ಈ ವರ್ಷದ ಐದು ತಿಂಗಳಲ್ಲಿ ಹುಬ್ಬಳ್ಳಿ ನಗರದಲ್ಲಿ 1 ಹಾಗೂ ನವಲಗುಂದದಲ್ಲಿ 3 ಜನರಲ್ಲಿ ಕಾಣಸಿಕೊಂಡಿದೆ. 2017ರಲ್ಲಿ 172 ಜನರಲ್ಲಿ ಕಾಣಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ಡೆಂಘೀ ಆಗ 3 ಜನರನ್ನು ಬಲಿ ಪಡೆದಿತ್ತು. ಈ ಪೈಕಿ ಧಾರವಾಡ ನಗರದಲ್ಲಿ ಇಬ್ಬರು ಹಾಗೂ ಕುಂದಗೋಳದಲ್ಲಿ ಒಬ್ಬ ವ್ಯಕ್ತಿ ಡೆಂಘೀಗೆ ಮೃತಪಟ್ಟಿದ್ದರು. 2018ರಲ್ಲಿ 112 ಜನರಲ್ಲಿ ಕಾಣಸಿಕೊಂಡಿದ್ದ ಡೆಂಘೀ ಹುಬ್ಬಳ್ಳಿ ನಗರದಲ್ಲಿ 55 ಹಾಗೂ ಧಾರವಾಡ ನಗರದಲ್ಲಿ 21 ಜನರಲ್ಲಿ ಕಾಣಿಸಿಕೊಂಡಿತ್ತು. ಈ ವರ್ಷದ ಐದು ತಿಂಗಳಲ್ಲಿ ಹುಬ್ಬಳ್ಳಿ ನಗರದಲ್ಲಿಯೇ ಆರು ಜನರು ಡೆಂಘೀಗೆ ತುತ್ತಾಗಿದ್ದರೆ ಧಾರವಾಡ ನಗರದಲ್ಲಿ ಒಬ್ಬರಲ್ಲಿ ಕಾಣಿಸಿಕೊಂಡಿದೆ.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಾ ಇದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಮ್ಮ ವ್ಯಾಪ್ತಿಗೆ ಬರದು. ಆದರೆ ಪಾಲಿಕೆಯೊಂದಿಗೆ ಸಮನ್ವತೆ ಇದ್ದು, ಅವಳಿ ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯ ಕೈಗೊಳ್ಳುವಂತೆ ಪಾಲಿಕೆಗೆ ಪತ್ರ ಬರೆಯಲಾಗುವುದು.•ಆರ್.ಎನ್. ದೊಡ್ಡಮನಿ, ಜಿಲ್ಲಾ ಆರೋಗ್ಯಾಧಿಕಾರಿ
ಆರ್ಭಟಿಸಿ ತಣ್ಣಗಾದ ಚಿಕೂನ್‌ಗುನ್ಯಾ:
2009ರಲ್ಲಿ 308 ಜನರಲ್ಲಿ ಕಾಣಿಸಿಕೊಂಡು ಆರ್ಭಟಿಸಿದ್ದ ಚಿಕೂನಗುನ್ಯಾ 2017ರಲ್ಲಿ 11ಜನರಲ್ಲಿ ಕಾಣಿಸಿಕೊಂಡು ತಣ್ಣಗಾಗಿತ್ತು. ಆದರೆ 2018ರಲ್ಲಿ ವಿಧಾನಸಭಾ ಚುನಾವಣೆಯ ಗುಂಗಿನಲ್ಲಿ ಜಿಲ್ಲಾಡಳಿತ ಮಗ್ನರಾಗಿದ್ದರಿಂದ 85 ಜನರಲ್ಲಿ ಕಾಣಿಸಿಕೊಂಡಿತ್ತು. ಈ ಪೈಕಿ ಹುಬ್ಬಳ್ಳಿ ನಗರದಲ್ಲಿ 30, ಧಾರವಾಡ ನಗರದಲ್ಲಿಯೇ 21 ಜನರು ತುತ್ತಾಗಿದ್ದರು. ಈಗ ಐದು ತಿಂಗಳಲ್ಲಿ 8 ಜನರಲ್ಲಿ ಚಿಕೂನ್‌ಗುನ್ಯಾ ಕಂಡುಬಂದಿದೆ. ಧಾರವಾಡ, ಹುಬ್ಬಳ್ಳಿ, ಕಲಘಟಗಿಯಲ್ಲಿ ತಲಾ 2, ನವಲಗುಂದ ಹಾಗೂ ಹುಬ್ಬಳ್ಳಿ ನಗರದಲ್ಲಿ ತಲಾ ಒಬ್ಬರಲ್ಲಿ ಕಾಣಿಸಿಕೊಂಡಿದೆ. ಇನ್ನೂ ಮೆದುಳು ಜ್ವರಕ್ಕೆ 2018ರಲ್ಲಿ ಒಬ್ಬ ಬಲಿಯಾಗಿದ್ದು, ಈ ವರ್ಷದಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿಲ್ಲ.
ಹೆಚ್ಚಾಗುತ್ತಾ ಇದೆ ಕಜ್ಜಿಯ ಕಿರಿಕಿರಿ:
ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಫೋಗಲ್, ಕಜ್ಜಿಯಂತಹ ಚರ್ಮ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಪೈಕಿ ಕಜ್ಜಿ ರೋಗಕ್ಕೆ ತುತ್ತಾದ ಜನರೇ ಹೆಚ್ಚು. ತುರಿಕೆ ಶಮನಕ್ಕಾಗಿ ಆಸ್ಪತ್ರೆಗಳ ಬಾಗಿಲು ತಟ್ಟುವಂತಾಗಿದೆ. ಇದಕ್ಕೆ ಈಗ ನೀಡುತ್ತಿರುವ ಔಷಧಿಯೂ ಕೆಲ ರೋಗಿಗಳಿಗೆ ನಾಟುತ್ತಿಲ್ಲ. ಔಷಧಿಗಳ ನಿಯಂತ್ರಣಕ್ಕೂ ಬಾರದ ಕಜ್ಜಿ ವೈರಾಣು ತನ್ನ ಹರಡುವಿಕೆ ಸಾಮರ್ಥಯ ಹೆಚ್ಚಿಸಿಕೊಂಡಿರುವ ಕಾರಣ ರೋಗಿಗಳು ಪರದಾಡುವಂತಾಗಿದೆ.
•ಶಶಿಧರ ಬುದ್ನಿ