Advertisement

ಸೋಂಕು ತಡೆ ದೊಡ್ಡ ಸವಾಲಿನ ಕೆಲಸ: ಬೊಮ್ಮನಹಳ್ಳಿ

03:58 PM Apr 17, 2020 | Suhan S |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸ. ತಕ್ಷಣದಿಂದಲೇ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಕೋವಿಡ್‌-19 ನಿಯಂತ್ರಣ ಹಿನ್ನೆಲೆಯಲ್ಲಿ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲೂಕುಗಳ ಅಧಿಕಾರಿಗಳ ಜತೆ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, ಕಂಟೈನ್ಮೆಂಟ್‌ ಝೋನ್‌ ನಿರ್ವಹಣೆ ಸೇರಿದಂತೆ ಕೋವಿಡ್‌ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಗತ್ಯ ಸಾಮಗ್ರಿಗಳ ಖರೀದಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರತ್ಯೇಕವಾಗಿ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಬೆಳಗಾವಿ ಈಗ ಕೆಂಪು ವಲಯದಲ್ಲಿ (ರೆಡ್‌ ಝೋನ್‌) ನಲ್ಲಿದೆ. ಪ್ರಕರಣಗಳ ಸಂಖ್ಯೆ ಅತೀ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ಉದಾಸೀನತೆ ತೋರಿಸಬಾರದು. ಕೆಲವು ಕಡೆ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಈಗಾಗಲೇ ಕೈಗೊಂಡಿರುವ ಮನೆ-ಮನೆ ಸಮೀಕ್ಷೆ ಕಾರ್ಯವನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ತಾಲೂಕು ಅಥವಾ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚನೆ ನೀಡಿದರು. ಗ್ರಾಪಂ ಮಟ್ಟದಲ್ಲಿ ಈಗಾಗಲೇ ಟಾಸ್ಕ್ ಫೋರ್ಸ್‌ ರಚನೆ ಮಾಡಲಾಗಿದ್ದು, ಈ ಎಲ್ಲ ಟಾಸ್ಕ್ಫೋರ್ಸ್‌ಗಳು ಕಾರ್ಯಪ್ರವೃತ್ತಗೊಳ್ಳಬೇಕು. ಪ್ರತಿಯೊಂದು ತಾಲೂಕು ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಹೋಟೆಲ್‌ಗ‌ಳನ್ನು ಗುರುತಿಸಿ ವರದಿ ನೀಡುವುದರ ಜತೆಗೆ ಅಗತ್ಯಬಿದ್ದರೆ ಅವುಗಳ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಯಾವುದೇ ಕಾರಣಕ್ಕೂ ಕಂಟೈನ್ಮೆಂಟ್‌ ಝೋನ್‌ನಲ್ಲಿ ಜನಸಂಚಾರ ತಡೆ ಮತ್ತು ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ನೋಡಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಎಲ್ಲರಿಗೂ ತಕ್ಷಣವೇ ಇನ್ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿ ಇರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ್‌ ಕುಮಾರ್‌, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಜಗದೀಶ್‌ ಕೆ.ಎಚ್‌., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್‌.ವಿ.ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಇದ್ದರು.

Advertisement

ತಾಲೂಕುವಾರು ಸಹಾಯವಾಣಿ ಆರಂಭಿಸಿ ಜ್ವರ, ಕೆಮ್ಮು ಮತ್ತಿತರ ಲಕ್ಷಣಗಳಿರುವ ವ್ಯಕ್ತಿಗಳನ್ನು ಗುರುತಿಸಿ ಇನ್ಸ್ಟಿಟ್ಯೂಷನಲ್‌ ಕ್ವಾರಂಟೈನ್‌ಗೆ ಕಳುಹಿಸಬೇಕು. ಅಗತ್ಯವಿರುವ ಪಿಪಿಇ ಖರೀದಿಸಲು ಈಗಾಗಲೇ ಹಣ ಕೂಡ ಬಿಡುಗಡೆ ಮಾಡಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಮುಂಚಿತವಾಗಿಯೇ ಖರೀದಿಸಿ ಇಟ್ಟುಕೊಳ್ಳಬೇಕು. – ಡಾ| ರಾಜೇಂದ್ರ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next