ಕೋಲಾರ: ತಾಲೂಕಿನ ಬೆಟ್ಟಹೊಸಪುರದಲ್ಲಿ ಎಂಟು ತಿಂಗಳ ಗರ್ಭಿಣಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 31 ಕ್ಕೇರಿದಂತಾಗಿದೆ. ಸೋಂಕಿತರ ಪೈಕಿ ಎಂಟು ಮಂದಿ ಬುಧವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 5ಕ್ಕೆ ಇಳಿದಿದೆ.
ಬುಧವಾರ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಕೋಲಾರ ತಾಲೂಕಿನ ಪಿ.2418, ಪಿ.3007, ಪಿ.3927 ಮಾಲೂರು ತಾಲೂಕಿನ ಪಿ.3661, ಕೆಜಿಎಫ್ ತಾಲೂಕಿನ ಪಿ.2851, ಮುಳ ಬಾ ಗಿಲು ತಾಲೂಕಿನ ಪಿ.2849, ಪಿ.2850, ಬಂಗಾರಪೇಟೆ ತಾಲೂಕಿನ ಪಿ.3186, ಸಂಖ್ಯೆ ರೋಗಿಗಳು ಬಿಡುಗಡೆ ಯಾಗಿದ್ದಾರೆ. ಡಿ.ಸಿ. ಸತ್ಯಭಾಮಾ, ವೈದ್ಯಾಧಿಕಾರಿಗಳು ಗುಣಮುಖರಾದವರಿಗೆ ಹಣ್ಣಿನ ಬುಟ್ಟಿ ನೀಡಿ ಪುಷ್ಪಾರ್ಚನೆ ಮಾಡಿ ಬೀಳ್ಕೊಟ್ಟರು.
ಈವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 31 ಆಗಿದ್ದು, ಈ ಪೈಕಿ 26 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ 19 ಸೋಂಕಿತರ ಸಕ್ರಿಯ ಪ್ರಕರಣಗಳ ಸಂಖ್ಯೆ ಐದಕ್ಕಿಳಿದಿದೆ. ಈವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಸಾವನ್ನಪ್ಪಿಲ್ಲ.
ಗರ್ಭಿಣಿಗೆ ಸೋಂಕು: ಕೋಲಾರ ತಾಲೂಕಿನ ಬೆಟ್ಟಹೊಸಪುರದ 24 ವರ್ಷದ ಗರ್ಭಿಣಿಗೆ ಸೋಂಕು ತಗುಲಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಮಂದಿಯನ್ನು ಅವರ ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.
ವಿಕೋಟದಲ್ಲಿ ಸೋಂಕಿತ ಪತ್ತೆ: ಜಿಲ್ಲೆಯಿಂದ ನಾಪತ್ತೆಯಾಗಿದ್ದ ಕೋವಿಡ್ 19 ಪಾಸಿಟಿವ್ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕೆಜಿಎಫ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರದ ವಿಕೋಟದಲ್ಲಿ ಅವಿತು ಕೊಂಡಿದ್ದ ವ್ಯಕ್ತಿಯನ್ನು ಬೇತಮಂಗಲ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು, ಕೋಲಾರದ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾರದ ಹಿಂದೆ ಈ ವ್ಯಕ್ತಿ ತಪ್ಪು ವಿಳಾಸ ನೀಡಿ ಕೋಲಾರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಪಾಸಿಟಿವ್ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು.
ಮತ್ತೇ ಐವರಿಗೆ ಸೋಂಕು!: ಜಿಲ್ಲೆಯಲ್ಲಿ ಬುಧವಾರ ಎಂಟು ಮಂದಿ ಸೋಂಕಿತರು ಗುಣಮುಖ ರಾಗು ತ್ತಿದ್ದಂತೆಯೇ ಮತ್ತೆ ಐವರಿಗೆ ಸೋಂಕು ತಗುಲಿರುವ ಸೂಚನೆ ದೊರೆತಿದೆ. ಬಂಗಾರಪೇಟೆಗೆ ಮಹಾರಾಷ್ಟ್ರದಿಂದ ಆಗಮಿ ಸಿದ್ದ ಒಂದೇ ಕುಟುಂಬದ 2 ವರ್ಷದ ಮಗು, ತಂದೆ, ತಾಯಿ ಮೂವರಿಗೂ ಸೋಂಕು ತಗುಲಿರುವ ಶಂಕೆ ಇದೆ. ಕೆಜಿಎಫ್ ಒಬ್ಬ ಪೊಲೀಸ್‌ಗೆ, ಶ್ರೀನಿವಾಸಪುರದಲ್ಲಿ ಆಂಧ್ರಕ್ಕೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿವೆ. ಅಧಿಕೃತ ಪ್ರಕಟಣೆಗೆ ಕಾಯಲಾಗುತ್ತಿದೆ.