ಶ್ವಾಸಕೋಶವಷ್ಟೇ ಅಲ್ಲದೆ; ಪ್ರಮುಖ ಅಂಗಾಂಗಗಳಿಗೂ ಅಪಾಯ
ಹೃದಯ, ಪಿತ್ತ ಜನಕಾಂಗ, ಮೆದುಳು, ಕಿಡ್ನಿಗಳ ಮೇಲೂ ಮಾರಣಾಂತಿಕ ದಾಳಿ
ಹೊಸದಿಲ್ಲಿ: ಕೋವಿಡ್ ಪ್ರಕರಣಗಳು ಕಂಡು ಬಂದ ಹೊಸತರಲ್ಲಿ ಅದು ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಎಂದು ಗುರುತಿಸಲಾಗಿತ್ತು. ಆದರೆ, ಹಲವಾರು ದೇಶಗಳಲ್ಲಿ ನಡೆಸಿದ ಅಧ್ಯಯನ ವರದಿಗಳನ್ನು ಒಂದೆಡೆ ಸೇರಿಸಿ ನೋಡಿದಾಗ, ಕೋವಿಡ್ ವೈರಸ್‌ನಿಂದಾಗಿ ಹೃದಯ, ಕಿಡ್ನಿ, ಮೆದುಳು, ಪಿತ್ತಕೋಶ ಹಾಗೂ ಇನ್ನಿತರ ಪ್ರಮುಖ ಅಂಗಾಂಗಗಳಿಗೂ ಹಾನಿಯಾಗುತ್ತದೆ ಎಂಬುದು ತಿಳಿದುಬಂದಿದೆ. ಅಂದರೆ, ದಿನಗಳೆದಂತೆ ವೈರಾಣು ಗಳು ಶಕ್ತಿಶಾಲಿಯಾಗಿ ಮಾರ್ಪಾಟಾಗುತ್ತಿದ್ದು, ಅದರ ಪರಿಣಾಮ ಕಾಯಿಲೆಯ ಗುಣಲಕ್ಷಣಗಳೂ ಬದಲಾಗುತ್ತಿವೆ ಎಂದು ಹೇಳಲಾಗಿದೆ.
ಅಮೆರಿಕದ ಉಟಾ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಸಂಶೋಧನೆಗಳಲ್ಲಿ, ಕೋವಿಡ್ ಸೋಂಕಿತರಲ್ಲಿ ಇನ್ ಫ್ಲಮೇಟರಿ ಪ್ರೊಟೀನ್‌ಗಳು ಉತ್ಪತ್ತಿಯಾಗುವುದರಿಂದ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಗುಣ ಲಕ್ಷಣಗಳನ್ನು ಬದಲಾಯಿಸುತ್ತದೆ. ಇದರಿಂದಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯ ಸ್ತಂಭನ, ಪಾರ್ಶ್ವವಾಯು ಅಥವಾ ಇನ್ನಿತರ ಗಂಭೀರ ಸಮಸ್ಯೆಗಳಿಗೆ ರೋಗಿಗಳು ಗುರಿಯಾಗುತ್ತಾರೆ ಎಂಬುದು ತಿಳಿದು ಬಂದಿದೆ. “ನಿಗದಿತ ಕಾಲಘಟ್ಟದಲ್ಲಿ ಕೊರೊನಾದಿಂದ ಉಂಟಾಗುವ ಹೊಸ ಸಮಸ್ಯೆಗಳನ್ನು ಪತ್ತೆ ಹಚ್ಚಬೇಕು. ಇದರಿಂದ, ಔಷಧಿಗಳ ಸಂಶೋಧನೆಗೆ ಸಹಾಯವಾಗುತ್ತದೆ. ಬದಲಾಗುವ ಲಕ್ಷಣಗಳಿಗೆ ಚಿಕಿತ್ಸೆಯನ್ನು ರೂಪಿಸುವ ತಂತ್ರಗಾರಿಕೆಯನ್ನೂ ರೂಪಿಸಬಹುದಾಗಿದೆ’ ಎಂದು ತಜ್ಞರು ತಿಳಿಸಿದ್ದಾರೆ.