Advertisement

ಮಲೇಷ್ಯಾದಲ್ಲಿ ಸೋಂಕು ಇಳಿಮುಖ

12:51 AM May 03, 2020 | Sriram |

ಉಡುಪಿ: ಆಗ್ನೇಯ ಏಷ್ಯಾದಲ್ಲಿ ನೆಲೆಗೊಂಡ ಫೆಡರಲ್‌ ಸಾಂವಿಧಾನಿಕ ರಾಜಪ್ರಭುತ್ವ ಹೊಂದಿರುವ ಮಲೇಷ್ಯಾಕ್ಕೂ ಕೋವಿಡ್‌ 19 ಸೋಂಕು ಹರಡಿದೆ. ಇಲ್ಲಿನ ವೈದ್ಯಕೀಯ ರಂಗ ಕ್ಷಿಪ್ರಗತಿಯ ಕಾರ್ಯಾಚರಣೆಯಿಂದ ನಿಯಂತ್ರಣದಲ್ಲಿದೆ. ಕಳೆದೊಂದು ವಾರದಿಂದ ಸೋಂಕು ಪ್ರಕರಣಗಳು ಇಳಿಮುಖಗೊಳ್ಳುತ್ತಿವೆ ಎಂದು ಕೌಲಾಲಂಪುರದಲ್ಲಿ ಐಟಿ ಉದ್ಯಮಿಯಾಗಿರುವ ಉಡುಪಿ ಮೂಲದ ರಾಮಕೃಷ್ಣ ಪ್ರಭು ಹೇಳುತ್ತಾರೆ.

Advertisement

ಮನೆಯ ಯಜಮಾನನಿಗೆ ಅವಕಾಶ
ದೂರವಾಣಿ ಮೂಲಕ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ನಿರ್ಬಂಧ, ಹೊರಗಡೆ ಚಲಿಸದಂತೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಿಎಂಒ ಮಲೇಷ್ಯಾ ಲಾಕ್‌ಡೌನ್‌ ಆದೇಶ ಹೊರಡಿಸಿದೆ. ಲಾಕ್‌ಡೌನ್‌ ಅವಧಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮನೆಯ ಯಜಮಾನ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳಿಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಕಚೇರಿಗಳು, ಕೈಗಾರಿಕೆ ಇತ್ಯಾದಿಗಳು ಮುಚ್ಚಿವೆ.

ನಿಯಂತ್ರಣ ಉಲ್ಲಂಘಿಸುವಂತಿಲ್ಲ
ವಿದೇಶಿಯರಿಗೂ ಮನೆಯೊಳಗೆ ಇರುವಂತೆ ಷರತ್ತು ವಿಧಿಸಿದೆ. ಹೊರಗೆ ಬಂದವರಿಗೆ ದಂಡ ವಿಧಿಸಲಾಗುತ್ತದೆ. ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಬಿಟ್ಟು ಬೇರೆ ಯಾವುದಕ್ಕೂ ನಾವು ಹೊರಗೆ ಹೋಗಲು ಸಾಧ್ಯವಿಲ್ಲ. ಯಾರಾದರೂ ಆದೇಶವನ್ನು ಉಲ್ಲಂಘಿಸಿದರೆ ಪೊಲೀಸರು ಬಂಧಿಸಿ ದಂಡ ವಿಧಿಸುತ್ತಾರೆ.

ಸೋಂಕು ಇಳಿಮುಖ
ಜನರು ಸ್ವಯಂ ಜಾಗೃತಿ ಮೂಲಕ ಜನರು ಆರೋಗ್ಯ ಇಲಾಖೆ ಜತೆ ಕೈ ಜೋಡಿಸುತ್ತಿದ್ದಾರೆ. ಆರಂಭದಲ್ಲಿ ದಿನವೊಂದಕ್ಕೆ 500-600 ಪ್ರಕರಣಗಳು ಕಂಡುಬರುತ್ತಿದ್ದರೆ ವಾರದಿಂದ 200ರ ಆಸುಪಾಸಿಗೆ ಇಳಿದಿದೆ.

ಸಮಾವೇಶ ಇಲ್ಲಿಯೂ ನಡೆದಿತ್ತು
ದಿಲ್ಲಿ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದಿದ್ದ ತಬ್ಲಿ ಜಮಾಅತ್‌ ಸಮಾವೇಶ ಮಾದರಿಯಲ್ಲೇ ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿಯೂ ಫೆ. 27ರಿಂದ ಮಾರ್ಚ್‌1ರ ವರೆಗೆ ತಬ್ಲಿ ಜಮಾತ್‌ ಸಮಾವೇಶ ನಡೆದಿತ್ತು. 1,500 ವಿದೇಶಿಯರ ಸಹಿತ 16,000 ಅನುಯಾಯಿಗಳು ಭಾಗವಹಿಸಿದ್ದರು. ಅನಂತರ ದೇಶದಲ್ಲಿ ಕೋವಿಡ್‌ 19 ಹೆಚ್ಚಳವಾಗಿದೆ ಅನ್ನುವುದನ್ನು ಜನ ಆಡಿಕೊಳ್ಳುತ್ತಿದ್ದರು. ಆದರೇ ಅದಕ್ಕೆ ಯಾವುದೇ ಪುರಾವೆಗಳಿಲ್ಲ.

Advertisement

ಕೆಟ್ಟ ಮೇಲೆ ಬುದ್ಧಿ
ಭಾರತದ ಬೃಹತ್‌ ಭೌಗೋಳಿಕ ಪ್ರದೇಶವನ್ನು ಗಮನಿಸಿದರೆ ನಾವು ಈ ಯುದ್ಧದಲ್ಲಿ ಉಳಿಯಲು ಭಾರೀ ಹೋರಾಟ ನಡೆಸಬೇಕಾಗುತ್ತದೆ. ಸೋಂಕು ಅಥವಾ ಸಾವು-ನೋವುಗಳ ವಿಷಯದಲ್ಲಿ ನಮ್ಮ ದೇಶದ ಮೇಲೆ ಇತರ ದೇಶಗಳಂತೆ ಪರಿಣಾಮ ಬೀರದ ಕಾರಣ ನಾವು ಅದೃಷ್ಟವಂತರು. ಜನಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ವ್ಯವಸ್ಥೆಗೊಳಿಸುವುದು ಕಷ್ಟ. ಜನರೇ ಸ್ವಯಂ ಜಾಗೃತರಾಗಬೇಕು. ಅರಿವು ಮೂಡಿಲ್ಲ ಎಂದಾದರೆ “ಕೆಟ್ಟ ಮೇಲೆ ಬುದ್ಧಿ’ ಅನ್ನುತ್ತಾರಲ್ಲ. ಹಾಗಾಗಲಿದೆ ನಮ್ಮ ಜನರ ಸ್ಥಿತಿ.
– ರಾಮಕೃಷ್ಣ ಪ್ರಭು,
ಮಲೇಷ್ಯಾ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next