ಹುಣಸೂರು: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿರುವ ವ್ಯಕ್ತಿ ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತದ ನಿರ್ದೇಶನದಂತೆ ಹುಣಸೂರಿನ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.
ಹುಣಸೂರು ಮಿನಿ ವಿಧಾನಸೌಧ, ತಾಲೂಕು ಪಂಚಾಯ್ತಿ, ನ್ಯಾಯಾಲಯ, ನಗರಸಭೆ, ಸಾರಿಗೆ ಪ್ರಾದೇಶಿಕ ಕಚೇರಿ ಸೇರಿದಂತೆ ಎಲ್ಲಡೆ ಪ್ರವೇಶ ನಿರ್ಬಂಧಿಸಲಾಗಿತ್ತು. ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ತಾಲೂಕು ಕಚೇರಿಯ ಮುಖ್ಯದ್ವಾರವನ್ನು ಮುಚ್ಚಲಾಗಿತ್ತು.
ಅತಿ ತುರ್ತು ಕೆಲಸಗಳಿಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿತ್ತು. ಉಪ ವಿಭಾಗಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಬಸವರಾಜ್ ಹಾಗೂ ಸಿಬ್ಬಂದಿ ಕಚೇರಿಯಲ್ಲೇ ಕುಳಿತು ಕೆಲಸ ನಿರ್ವಹಿಸಿದರು. ಕೆಲ ಸಾರ್ವಜನಿಕರು, ರೈತರು ಪ್ರವೇಶ ನಿರ್ಬಂಧದ ಮಾಹಿತಿ ಇಲ್ಲದ ಕಾರಣ ಬಂದು ವಾಪಸ್ ತೆರಳಿದರು. ಇನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಯಾವುದೇ ನೋಂದಣಿ ಪ್ರಕ್ರಿಯೆ ನಡೆಯಲಿಲ್ಲ.
ನ್ಯಾಯಾಲಯ ಕಲಾಪವಿಲ್ಲ: ಹುಣಸೂರಿನ ಐದು ನ್ಯಾಯಾಲಯಗಳಲ್ಲೂ ಯಾವುದೇ ಕಲಾಪ ನಡೆಯಲಿಲ್ಲ. ಕೆಲ ಕಕ್ಷಿದಾರರು ಹಾಗೂ ವಕೀಲರು ಸಹ ವಾಪಸ್ ತೆರಳಿದರು. ಆದರೆ, ನ್ಯಾಯಾಲಯದೊಳಗೆ ನ್ಯಾಯಾಧೀಶರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದರು.
ಎಂದಿನಂತೆ ಕೆಲಸ: ನಗರಸಭೆಯಲ್ಲಿ ಮಾತ್ರ ಹೊರಭಾಗದಲ್ಲಿ ಪ್ರವೇಶ ನಿರ್ಬಂಧ ಬೋರ್ಡ್ ಹಾಕಿದ್ದರೂ ತಮ್ಮ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿ ಒಳಗೆ ಸೇರಿಕೊಂಡು ತಮ್ಮ ಕೆಲಸ ಕಾರ್ಯ ಮಾಡಿಸಿಕೊಂಡು ನಿಟ್ಟುಸಿರು ಬಿಟ್ಟರು. ಉಳಿದಂತೆ ಸಾರಿಗೆ ಇಲಾಖೆ, ತಾಲೂಕು ಪಂಚಾಯ್ತಿ ಸೇರಿದಂತೆ ಎಲ್ಲ ಕಚೇರಿಗಳಲ್ಲೂ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸಿದರು. ಬೆರಳೆಣಿಕೆಯಷ್ಟು ಮಂದಿ ಸಾರ್ವಜನಿಕರು ಕಾಣಿಸಿಕೊಂಡರು.
ಬಿಕೋ ಎಂದ ಬಸ್ ನಿಲ್ದಾಣ: ಪ್ರತಿದಿನ 800ಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುವ ಹುಣಸೂರು ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿಲ್ಲದೆ ಬಣಗುಡುತ್ತಿತ್ತು. ಪಿಯುಸಿ ಪರೀಕ್ಷೆ ಇದ್ದುದ್ದರಿಂದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಯಾವಾಗಲೂ ಮೈಸೂರಿಗೆ ತೆರಳುವ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಶುಕ್ರವಾರ ಪ್ರಯಾಣಿಕರಿಲ್ಲದೆ ಖಾಲಿ ಬಸ್ ಸಂಚರಿಸಿದವು.
ನಗರ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದ ಸಾರ್ವಜನಿಕರಿಗೆ ಇಲಾಖೆ ವತಿಯಿಂದ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೈ ಶುಚಿಗೊಳಿಸಿಕೊಂಡ ನಂತರವಷ್ಟೇ ಪ್ರವೇಶ ನೀಡಲಾಯಿತು. ಎಸ್‌ಐ ಮಹೇಶ್ ಸೇರಿದಂತೆ ಕೆಲ ಸಿಬ್ಬಂದಿ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಿದರು.