Advertisement

ಪಾಲಿಕೆಯ ಅಧಿಕಾರಿಗಳಲ್ಲಿ ಸೋಂಕು: ಆತಂಕ

06:28 AM Jun 02, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ಹಾಗೂ ಸೋಂಕಿತರ ಸಂಪರ್ಕಿತರು, ಕ್ವಾರಂಟೈನ್‌ ವ್ಯವಸ್ಥೆ ಹಾಗೂ ಕಂಟೈನ್ಮೆಂಟ್‌ ಸೇರಿದಂತೆ ಸೋಂಕು ಕಡಿವಾಣದಲ್ಲಿ ಫ್ರಂಟ್‌ಲೈನ್‌ನಲ್ಲಿರುವ  ಪಾಲಿಕೆಯ ಅಧಿಕಾರಿಗಳಲ್ಲೂ ಸೋಂಕು ದೃಢಪಡುತ್ತಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಪರೋಕ್ಷವಾಗಿ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರಲಿದೆ.

Advertisement

ಇತ್ತೀಚೆಗೆ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ಅವರಿಗೆ  ಸೋಂಕು ದೃಢಪಟ್ಟ ಬೆನ್ನಲ್ಲೇ ಪಾಲಿಕೆಯ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಸೇರಿದಂತೆ ಒಟ್ಟು ಮೂರು ಮಂದಿಯಲ್ಲಿ ಕೋವಿಡ್‌ 19 ವೈರಸ್‌ ಕಾಣಿಸಿಕೊಂಡಿದೆ. ಇನ್ನಿಬ್ಬರು ಅಧಿಕಾರಿಗಳ ಪರೀಕ್ಷಾ ವರದಿಯಲ್ಲಿ ಗೊಂದಲವಿದ್ದು,  ಮರುಪರಿಶೀಲನಗೆ ಕಳುಹಿಸಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹೊರರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್‌ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆಪರಿಶೀಲನೆ ಮಾಡುವ ತಂಡದಲ್ಲಿ  ಬಿಬಿಎಂಪಿ ಸಹಾಯಕ ಆಯುಕ್ತರು ಇದ್ದರು.

ಅಲ್ಲದೆ, ಬಿಬಿಎಂಪಿಯ ವಾರ್‌ ರೂಮ್‌ನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸದ್ಯ ಅವರಿಗೆ ಸೋಂಕು ದೃಢಪಟ್ಟಿರುವುದರಿಂದ ಇವರ ಪ್ರಾಥಮಿಕ ಹಾಗೂ ದ್ವಿತೀಯ  ಸಂಪರ್ಕದಲ್ಲಿದ್ದ ಅಧಿಕಾರಿಗಳನ್ನೂ ಕ್ವಾರಂಟೈನ್‌ ಮಾಡಲು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಸಿದಟಛಿತೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ವಲಯದಲ್ಲೂ ಕೋವಿಡ್‌ 19 ಕಾಣಿಸಿಕೊಳ್ಳುತ್ತಿರುವುದು ಉಳಿದ ಅಧಿಕಾರಿಗಳಲ್ಲೂ ಸಹಜವಾಗಿ ಆತಂಕ ಹೆಚ್ಚಿಸಿದೆ. ಇದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಒಂದು ರೀತಿಯ ಬಿಗುವಿನ ವಾತಾವರಣಕ್ಕೂ ಕಾರಣವಾಗಿದೆ.

ಫ್ರಂಟ್‌ಲೈನ್‌ ಅಧಿಕಾರಿಗಳು: ನಗರದಲ್ಲಿ ಸೋಂಕು ತಡೆಯುವಲ್ಲಿ ಪಾಲಿಕೆಯ ಅಧಿಕಾರಿಗಳು ಫ್ರಂಟ್‌ಲೈನ್‌ ಯೋಧರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿತರು ಹಾಗೂ ಅವರ ಸಂಪರ್ಕಿತರ ಪತ್ತೆ, ಕ್ವಾರಂಟೈನ್‌, ಕಂಟೈನ್ಮೆಂಟ್‌  ಝೊàನ್‌ಗಳ ಪರಿಶೀಲನೆ, ಆರೋಗ್ಯ ತಪಾಸಣೆ, ದಿನಸಿ ವಿತರಣೆ, ಸ್ಥಳ ಪರಿಶೀಲನೆ ಹಾಗೂ ಕೋವಿಡ್‌ 19 ತಡೆಗೆ ಕಾರ್ಯತಂತ್ರ ರೂಪಿಸುವುದರಲ್ಲಿ ಪಾಲಿಕೆಯ ಅಧಿಕಾರಿಗಳು ಮುಂದಾಳತ್ವ ವಹಿಸುತ್ತಿದ್ದಾರೆ. ಈಗ ಪಾಲಿಕೆಯ  ಅಧಿಕಾರಿಗಳಿಗೆ ಸೋಂಕು ದೃಢಪಡುತ್ತಿರುವ ಬೆನ್ನಲ್ಲೇ ಇತರ ಅಧಿಕಾರಿಗಳೂ ಅನಿರ್ವಾಯವಾಗಿ ಕ್ವಾರಂಟೈನ್‌ಗೆ ಒಳಪಡಬೇಕಿದೆ.

ಸೋಂಕು ತಗುಲಿದರೆ ಹೇಗೆ ?: ಒಂದು ವೇಳೆ ಆಡಳಿತ ವಲಯದಲ್ಲಿ ಮುಖ್ಯ ಹುದ್ದೆಗಳಲ್ಲಿ ಇರುವ ಅಧಿಕಾರಿಗಳಿಗೆ ಸೋಂಕು ಬಂದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದಕ್ಕೂ ರಾಜ್ಯ ಸರ್ಕಾರ ಈಗಾಗಲೇ ಮಾರ್ಗಸೂಚಿ  ರೂಪಿಸಿದೆ. ನಗರ ಪೊಲೀಸ್‌ ಆಯುಕ್ತರು, ಉಪ ಪೊಲೀಸ್‌ ಆಯುಕ್ತರು, ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಮುಖ್ಯ ಅಧಿಕಾರಿಗಳು ಕ್ವಾರಂಟೈನ್‌ ಆಗಬೇಕಾದರೆ ಅವರನ್ನು ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್‌  ಮಾಡಲಾಗುತ್ತದೆ. ಅವರ ಸ್ಥಾನಕ್ಕೆ ಹೊಸ ಅಧಿಕಾರಿ ನೇಮಕ ಮಾಡಲಾಗುತ್ತದೆ.

Advertisement

ಈ ಹೊಸ ಅಧಿಕಾರಿ ಕ್ವಾರಂಟೈನ್‌ನಲ್ಲಿರುವ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಅವರ ನಿರ್ದೇಶನದ ಮೇಲೆ ಕೆಲಸ ಮಾಡುತ್ತಾರೆ. ಒಂದೊಮ್ಮೆ  ಮುಖ್ಯ ಹುದ್ದೆಯಲ್ಲಿರುವ ಅಧಿಕಾರಿಗಳು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಬೇಕಾದರೆ, ನೂತನ ಅಧಿಕಾರಿಯೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಇನ್ನು ಪ್ರಥಮ ಸಂಪರ್ಕಿತ ಅಧಿಕಾರಿಗಳನ್ನು ಕ್ವಾರಂಟೈನ್‌  ಮಾಡಬೇಕು. ಆದರೆ, ಈ ಅಧಿಕಾರಿಗಳಿಗೆ ಪೋನ್‌, ಲ್ಯಾಪ್‌ಟಾಪ್‌ ವ್ಯವಸ್ಥೆ ಮಾಡುವ ಮೂಲಕ ಆಡಳಿತಾತ್ಮಕ ನೆರವು ಪಡೆದುಕೊಳ್ಳಬಹುದು. ಈ ರೀತಿ ಕ್ವಾರಂಟೈನ್‌ ನಲ್ಲಿರುವವರು ಯಾವುದೇ ಕಾರಣಕ್ಕೂ ಇತರೆ ಅಧಿಕಾರಿಗಳೊಂದಿಗೆ  ಸಂಪರ್ಕ ಸಾಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ನಿರ್ಲಕ್ಷ್ಯ: ಪಾಲಿಕೆ ಸದಸ್ಯರೊಬ್ಬರಿಗೆ ಸೋಂಕು ದೃಢಪಟ್ಟರೂ ಪಾಲಿಕೆಯ ಬಹುತೇಕ ಸದಸ್ಯರು ಬೆಂಬಲಿಗರೊಂದಿಗೆ ಗುಂಪು ಸೇರುವುದು ಹಾಗೂ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವ ಕೆಲಸ  ಮಾಡುತ್ತಿದ್ದಾರೆ. ಇದುವರೆಗೆ ಯಾವೊಬ್ಬ ಪಾಲಿಕೆ ಸದಸ್ಯರೂ ಈ ನಿಟ್ಟಿನಲ್ಲಿ ಸ್ಪಷ್ಟ ಸಂದೇಶ ರವಾನೆ ಮಾಡಿಲ್ಲ. ಸ್ವಯಂಪ್ರೇರಿತರಾಗಿ ಕ್ವಾರಂಟೈನ್‌ ಆಗಿರುವುದು ವರದಿಯಾಗಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ  ಮುನೀಂದ್ರ ಕುಮಾರ್‌, ಕೋವಿಡ್‌ 19 ತಡೆಯುವಲ್ಲಿ ಪಾಲಿಕೆ ಸದಸ್ಯರ ಪಾತ್ರವೂ ದೊಡ್ಡದಿದೆ. ಈ ನಿಟ್ಟಿನಲ್ಲಿ ಮೇಯರ್‌ ಅವರೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಾತ್ರೆ ತೆಗೆದುಕೊಳ್ಳಲು ಸೂಚನೆ: ಕಂಟೈನ್ಮೆಂಟ್‌ ವಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಮನೆ-ಮನೆ ಆರೋಗ್ಯ ತಪಾಸಣೆ ಮಾಡುವ ಆರೋಗ್ಯ ಕಾರ್ಯಕರ್ತರು. ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ನಿಯಮಿತವಾಗಿ  ಸ್ವೀಕರಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಸೋಂಕು ತಡೆಯಲು ಇದು ಸಹಕಾರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ಇದನ್ನು ಬಹುತೇಕ ಅಧಿಕಾರಿಗಳು ಪಾಲನೆ  ಮಾಡಿಲ್ಲ ಎಂಬ ದೂರು ಕೇಳಿಬಂದಿದೆ.

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next