Advertisement
ರಾಜ್ಯದ ಸುಮಾರು 230 ತಾಲೂಕುಗಳ 15,977 ಗ್ರಾಮಗಳಲ್ಲಿ ಈವರೆಗೆ 2,37,194 ರಾಸುಗಳಿಗೆ ಚರ್ಮಗಂಟು ರೋಗ ಬಾಧಿಸಿದ್ದು, ಈ ಪೈಕಿ 1.64 ಲಕ್ಷ ರಾಸುಗಳು ಚೇತರಿಕೆಯಾಗಿವೆ. ಇನ್ನುಳಿದ ರಾಸುಗಳಿಗೆ ಸರಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸಿಬಂದಿ ಇಲ್ಲದೆ ಲಸಿಕೆ ತಲುಪುತ್ತಿಲ್ಲ ಎಂಬ ಸಂಗತಿ “ಉದಯವಾಣಿ’ ನಡೆಸಿದ ಜಿಲ್ಲಾವಾರು ಮಾಹಿತಿ ಸಂಗ್ರಹದಿಂದ ಬೆಳಕಿಗೆ ಬಂದಿದೆ.
Related Articles
ಇಡೀ ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ 5,120 ಜಾನುವಾರುಗಳು ಸಾವನ್ನಪ್ಪಿವೆ. ಜಿಲ್ಲೆಯ 1,077 ಗ್ರಾಮಗಳಲ್ಲಿ 42,225 ಜಾನುವಾರುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ. ಹಾಗೆಯೇ ಈ ಜಿಲ್ಲೆಯಲ್ಲಿ 7.42 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.
Advertisement
ಇನ್ನು ಹಾವೇರಿ ಜಿಲ್ಲೆಯಲ್ಲಿ 2,322, ದಾವಣಗೆರೆಯಲ್ಲಿ 1,188, ಬಳ್ಳಾರಿ-ವಿಜಯನಗರದಲ್ಲಿ 2,878, ಚಿತ್ರದುರ್ಗದಲ್ಲಿ 1,225, ಬಾಗಲಕೋಟೆಯಲ್ಲಿ 1,093 ಪ್ರಕರಣಗಳು ಕಾಣಿಸಿಕೊಂಡಿವೆ.
ದಕ್ಷಿಣ ಕನ್ನಡ-ಉಡುಪಿಯಲ್ಲಿ ಕಡಿಮೆಇಡೀ ರಾಜ್ಯಕ್ಕೆ ಹೋಲಿಸಿದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ. ಸದ್ಯ ದಕ್ಷಿಣ ಕನ್ನಡದಲ್ಲಿ 1,226 ಸೋಂಕು, 32 ಸಾವು, ಉಡುಪಿಯಲ್ಲಿ 798 ಕೇಸು, ಮೂರು ಜಾನುವಾರುಗಳ ಸಾವಿನ ಪ್ರಕರಣ ಪತ್ತೆಯಾಗಿದೆ. ಗ್ರಾಪಂಗಳಿಗೆ ಸೂಚನೆ
ರೋಗ ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಸೂಚಿಸಲಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚರ್ಮಗಂಟು ರೋಗವು ಮುಖ್ಯವಾಗಿ ಸೊಳ್ಳೆ, ಕಚ್ಚುವ ನೊಣ, ಉಣ್ಣೆ ಇತ್ಯಾದಿಗಳಿಂದ ಹರಡುತ್ತದೆ. ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದರ ಜತೆಗೆ ಸೊಳ್ಳೆ, ಕೀಟಗಳ ಹಾಗೂ ನೊಣಗಳ ನಿಯಂತ್ರಣ ಮಾಡುವುದು ತೀರಾ ಆವಶ್ಯಕವಾಗಿದೆ. ಆದ್ದರಿಂದ ಜಾನುವಾರುಗಳಲ್ಲಿ ಚರ್ಮಗಂಟು ರೋಗವನ್ನು ತಡೆಗಟ್ಟಲು ನೊಣ, ಸೊಳ್ಳೆಗಳ ಮತ್ತು ಕಚ್ಚುವ ಕೀಟಗಳ ನಿಯಂತ್ರಣಕ್ಕಾಗಿ ಗ್ರಾಮಗಳಲ್ಲಿನ ಚೌಗು ಪ್ರದೇಶಗಳಲ್ಲಿ, ರೈತರ ಜಾನುವಾರುಗಳ ಕೊಟ್ಟಿಗೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕೀಟ ನಾಶಕಗಳನ್ನು ಸಿಂಪಡಿಸುವುದು ಸೇರಿದಂತೆ ಅಗತ್ಯ ಎಲ್ಲ ಕ್ರಮಗಳನ್ನು ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳಲ್ಲಿ ತುರ್ತಾಗಿ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಚರ್ಮಗಂಟು ರೋಗ ಲಕ್ಷಣ
ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶ್ಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು, ಜಾನುವಾರು ಚರ್ಮದ ಮೇಲೆ 2-5 ಸೆಂಮೀ ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳು ಬಿದ್ದು ಹುಣ್ಣಾಗುತ್ತದೆ. ಇದರಿಂದ ಹಸುಗಳಲ್ಲಿ ಹಾಲು ಕೊಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಎತ್ತುಗಳಲ್ಲಿ ಶಕ್ತಿ ಕುಂದುತ್ತದೆ. ಲಸಿಕೆಗೆ ಸಿಗದ ವೇಗ
ಕೆಲವು ಜಿಲ್ಲೆಗಳಲ್ಲಿ ಮಾತ್ರ ಲಸಿಕೆಗೆ ವೇಗ ಸಿಕ್ಕಿದೆ. ರಾಮನಗರದಲ್ಲಿ ಶೇ.89ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಬೆಳಗಾವಿಯಲ್ಲಿ 7 ಲಕ್ಷಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ನೀಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸರಿಯಾದ ಪ್ರಮಾಣದಲ್ಲಿ ಲಸಿಕೆ ನೀಡಲಾಗಿಲ್ಲ. ಬೀದರ್, ಶಿವಮೊಗ್ಗ, ಗದಗ, ಮೈಸೂರು ಜಿಲ್ಲೆಗಳಲ್ಲಿ ಪಶು ವೈದ್ಯಕೀಯ ಸಿಬಂದಿ ಕೊರತೆ ಇದೆ.