Advertisement

ಹಳ್ಳಿಗಳೀಗ ಸೋಂಕು ಮುಕ್ತದ ಕಡೆಗೆ

09:06 PM Jun 23, 2021 | Team Udayavani |

ಕಾರ್ಕಳ: ಅಧಿಕಾರಿಗಳು, ವಾರಿಯರ್ಸ್‌ ಹಾಗೂ ಗ್ರಾಮೀಣ ಕಾರ್ಯಪಡೆಗಳ ಅಹೋರಾತ್ರಿ ಪರಿಶ್ರಮದ ಫ‌ಲವೆಂಬಂತೆ ಕಾರ್ಕಳ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ.

Advertisement

2ನೇ ಅಲೆಯಲ್ಲಿ ಕೋವಿಡ್ ತಾಲೂಕಿನ ಹಳ್ಳಿಹಳ್ಳಿಗಳಿಗೂ ನುಸುಳಿ ಆತಂಕವನ್ನು ಸೃಷ್ಟಿಸಿತ್ತು. ಅಪಾರ ಸಾವು-ನೋವುಗಳಿಗೂ ಅದು ಕಾರಣವಾಗಿತ್ತು. ಆರೋಗ್ಯ ಇಲಾಖೆ ಸಹಿತ ಎಲ್ಲ  ಇಲಾಖೆಗಳ  ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದ  ಕಾರ್ಯಪಡೆಗಳ ದಕ್ಷತೆ ಮತ್ತು ಪರಿಶ್ರಮದಿಂದ ಸೋಂಕಿನ ಆರ್ಭಟ ತಗ್ಗುತ್ತಿದೆ. 2ನೇ ಅಲೆಯ ಮುನ್ಸೂಚನೆ  ದೊರೆತಾಗ  ಸ್ಥಳೀಯ ಶಾಸಕರು ಎಲ್ಲ  ಇಲಾಖೆ ಅಧಿಕಾರಿಗಳ ಜತೆ  ಸಭೆ  ನಡೆಸಿದ್ದರು. ಗ್ರಾಮಗಳಿಗೂ ತೆರಳಿ ಮಾರ್ಗದರ್ಶನ ನೀಡಿದ್ದರು.  ಇವೆಲ್ಲವೂ ಸೋಂಕು ನಿಯಂತ್ರಿಸುವಲ್ಲಿ ಫ‌ಲಪ್ರದವಾಗಿದೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ  ಬಹುತೇಕ  ಗ್ರಾಮಗಳು  ಕೊರೊನಾನ  ಸೋಂಕಿಗೆ ಸಿಲುಕಿ ಸಂಕಷ್ಟ ಅನುಭವಿಸಿತ್ತು. 2ನೇ ಅಲೆಯಲ್ಲಿ  ಮಾರ್ಚ್‌ನಲ್ಲಿ  125, ಎಪ್ರಿಲ್‌ನಲ್ಲಿ 816, ಮೇ 5,378, ಜೂನ್‌ 16ರ  ತನಕ 1,532 ಸೇರಿ ಒಟ್ಟು 7,852 ಪಾಸಿಟಿವ್‌ ಪ್ರಕರಣಗಳು ದಾಖಲಾಗಿತ್ತು. ಅವುಗಳಲ್ಲಿ 7,439 ಮಂದಿ ಗುಣಮುಖರಾಗಿದ್ದರು. ಅನಂತರದ ಒಂದು ವಾರದಲ್ಲಿ  ಪಾಸಿಟಿವ್‌ ಪ್ರಕರಣ ಇಳಿಕೆಯಾಗುತ್ತ ಬಂದಿದೆ. ದಾಖಲಾದ ಸೋಂಕಿತರಲ್ಲಿ ಹೆಚ್ಚಿನವರು ಗುಣಮುಖರಾಗುತ್ತಿದ್ದಾರೆ. 393ರ ಆಸುಪಾಸಿನಲ್ಲಿ  ಈಗ  ಸಕ್ರಿಯ ಪ್ರಕರಣಗಳಿವೆ. ಹೆಮುಂಡೆ, ಸೂಡ, ಎಳ್ಳಾರೆ, ಜಾರ್ಕಳ, ಪಳ್ಳಿ ಮುಳ್ಳಡ್ಕ, ಕೆರ್ವಾಶೆ, ಕೆರೆಬೆಟ್ಟು  ಮೊದಲಾದ  ಗ್ರಾಮಗಳಲ್ಲಿ  ಸಕ್ರಿಯ ಪ್ರಕರಣಗಳು  ಇರುವುದಿಲ್ಲ.

ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ,  ಪಳ್ಳಿ, ನಿಟ್ಟೆ, ಮಿಯ್ನಾರು, ಬೆಳ್ಮಣ್‌, ಬೆಳ್ವೆ, ಮುದ್ರಾಡಿ, ವರಂಗ  ಈ  ಗ್ರಾಮಗಳಲ್ಲಿ   50ಕ್ಕಿಂತ  ಅಧಿಕ  ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿದ್ದರಿಂದ  ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿತ್ತು. ಅನಂತರದಲ್ಲಿ ಈ ಗ್ರಾಮಗಳಲ್ಲೂ ಸೋಂಕು ನಿಯಂತ್ರಣಕ್ಕೆ  ಬರುತ್ತಿರುವುದು ಆತಂಕ ಕಡಿಮೆ ಮಾಡಿದೆ.  ಕಳೆದ ವರ್ಷ  ಮೊದಲ  ಕೋವಿಡ್‌ ಅಲೆಯಲ್ಲಿ  1,035 ಪ್ರಕರಣಗಳು   ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ  ಕಂಡು ಬಂದಿತ್ತು. ಮೊದಲ ಅಲೆಯಲ್ಲಿ 36 ಮಂದಿ, 2ನೇ ಅಲೆಯಲ್ಲಿ  19 ಮಂದಿ  ಸಾವನಪ್ಪಿದ್ದರು.  ಇದುವರೆಗೆ ತಾಲೂಕಿನಲ್ಲಿ ಒಟ್ಟು 55 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಲವು  ಕ್ರಮ  ಫ‌ಲ  ನೀಡಿತು  : ಗ್ರಾಮಮಟ್ಟದಲ್ಲಿ ಕಾರ್ಯಪಡೆ, ಆಶಾ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಜಾಗೃತಿ, ಮನೆಗಳಿಗೆ ತೆರಳಿ ಸಮೀಕ್ಷೆ, ಕಡ್ಡಾಯ ಪರೀಕ್ಷೆ, ಪರವೂರಿನಿಂದ ಬಂದವರ ಬಗ್ಗೆ  ನಿಗಾ,  ಅಚ್ಚುಕಟ್ಟಿನ ಕೋವಿಡ್‌ ಕೇರ್‌ ಕೇಂದ್ರ,  ಸೋಂಕು ಹರಡದಂತೆ ಕಠಿನ  ಕ್ರಮಗಳು,  ಬಿಗಿ ಲಾಕ್‌ಡೌನ್‌, ಇದೆಲ್ಲದರ ಪರಿಣಾಮ ತಾಲೂಕಿನಲ್ಲಿ  ಕೋವಿಡ್‌ ನಿಯಂತ್ರಣದ ಕಡೆಗೆ ಸಾಗಿದ್ದು, ಪರಿಣಾಮ ಹಳ್ಳಿಗಳಿಗೆ ನುಸುಳಿದ್ದ  ಸೋಂಕು  ಮುಕ್ತವಾಗುವ ಕಡೆಗೆ ಹೆಚ್ಚು ಪರಿಣಾಮ ಬೀರಿದೆ.

Advertisement

ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ, ಆದಷ್ಟು ಬೇಗ ಪರೀಕ್ಷೆ ಒಳಪಡಿಸಿರುವುದು ಸಹಕಾರಿಯಾಯಿತು. ಗ್ರಾಮೀಣ ಕಾರ್ಯಪಡೆ ನೆರವು  ಸಾಕಷ್ಟು  ಫ‌ಲ ಕೊಟ್ಟಿತು. ಸೋಂಕಿತರನ್ನು  ಮನೆಯಿಂದ ಕೋವಿಡ್‌ ಕೇರ್‌ಗೆ ಸ್ಥಳಾಂತರಿಸಿದ್ದು ಕೂಡ  ನಿಯಂತ್ರಣಕ್ಕೆ ಬರಲು ಕಾರಣವಾಗಿದೆ.-ಡಾ| ಕೃಷ್ಣಾನಂದ ಶೆಟ್ಟಿ , ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next