ರಾಯಚೂರು: ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 88 ಪ್ರಕರಣಗಳಲ್ಲಿ ಬಹುತೇಕ ಕ್ವಾರಂಟೈನ್‌ನಲ್ಲಿರುವ ಕುಟುಂಬ ಸದಸ್ಯರಲ್ಲೇ ಹರಡಿವೆ. ಬಹುತೇಕ ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗದಲ್ಲಿ 75, ರಾಯಚೂರಿನಲ್ಲಿ 9, ಲಿಂಗಸುಗೂಗುರು ತಾಲೂಕಿನಲ್ಲಿ 2, ಮಾನ್ವಿ, ಸಿಂಧನೂರಿನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ನಗರದಲ್ಲಿ ಪಶ್ಚಿಮ ಠಾಣೆ ಮೂವರು ಪೇದೆಗಳು, ಅಸ್ಕಿಹಾಳನ ಆಶಾ ಕಾರ್ಯಕರ್ತೆ, ರಾಂಪುರದ ಪೋಸ್ಟ್‌ಮ್ಯಾನ್‌ಗೆ ಸೋಂಕು ತಗುಲಿದೆ. ಇನ್ನೂ ನಾಲ್ವರು ಕ್ವಾರಂಟೈನ್‌ನಲ್ಲಿದ್ದು, ಅವರಿಗೆ ಮಹಾರಾಷ್ಟ್ರದ ಹಿನ್ನೆಲೆಯಿದೆ. ಹೀಗಾಗಿ ಗೋಲ್ ಮಾರ್ಕೆಟ್, ರಾಂಪುರ, ಅಸ್ಕಿಹಾಳಗಳನ್ನು ಕಂಟೆನ್ಮೆಂಟ್ ಏರಿಯಾ ಎಂದು ಘೋಷಿಸಿರುವುದಾಗಿ ತಿಳಿಸಿದರು.
ಕೃಷಿ ವಿವಿಯಲ್ಲಿರುವ ಕ್ವಾರಂಟೈನ್‌ನಿಂದ ಪೊಲೀಸರು, ಪೋಸ್ಟ್ ಮ್ಯಾನ್‌ಗೆ ಸೋಂಕು ತಗುಲಿರಬಹುದು. ಆಶಾ ಕಾರ್ಯಕರ್ತೆಯ ಪ್ರಯಾಣ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ. ಅವರ ಸೋದರ ಬೆಂಗಳೂರಿಗೆ ಹೋಗಿ ಬಂದಿದ್ದರು. ಮಾನ್ವಿಯಲ್ಲಿ ಹೈದರಾಬಾದ್‌ನಿಂದ ಬಂದ ಸಾಫ್ಟವೇರ್ ಉದ್ಯೋಗಿಗೆ ಸೋಂಕು ತಗುಲಿದೆ. ಮತ್ತೂಬ್ಬ ವೃದ್ಧನಿಗೆ ಸೋಂಕು ತಗುಲಿದ್ದು, ಅವರ ಸ್ಥಿತಿ ತುಸು ಗಂಭೀರವಾಗಿದೆ. ಲಿಂಗಸುಗೂರು ತಾಲೂಕು ಕಡ್ಕಲ್, ಹಟ್ಟಿಯಲ್ಲಿ ಮಹಾರಾಷ್ಟ್ರದಿಂದ ಬಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ ದೇವದುರ್ಗದ ಕೊತ್ತದೊಡ್ಡಿ ಕ್ವಾರಂಟೈನ್ ನಲ್ಲಿ 46, ನಾಗರಗುಂಡಾ ಕ್ವಾರಂಟೈನ್‌ನಲ್ಲಿ 29 ಪ್ರಕರಣ ದೃಢಪಟ್ಟಿವೆ. ಅವರೆಲ್ಲ ಮುಂಬೈನಿಂದ ಬಂದಿದ್ದು, ಕುಟುಂಬದ ಸದಸ್ಯರಿಗೆ ಹೆಚ್ಚಾಗಿ ಸೋಂಕು ತಗುಲಿದೆ ಎಂದು ತಿಳಿಸಿದರು.
ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಕ್ವಾರಂಟೈನ್ ನಿಂದ ರೋಗಿಗಳು ತಪ್ಪಿಸಿಕೊಂಡು ಹೋಗಿಲ್ಲ. ಮಸ್ಕಿಯಿಂದ ಮೂವರು ತಪ್ಪಿಸಿಕೊಂಡು ಹೋಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಪೇದೆಗಳಿಗೆ ಸೋಂಕು ತಗುಲಿದ್ದು, ಅವರ ಸಂಪರ್ಕಿತರನ್ನು ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲ ಪೊಲೀಸರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು. ಎಡಿಸಿ ದುರುಗೇಶ, ಸಹಾಯಕ ಆಯುಕ್ತ ಸಂತೋಷ ಎಸ್. ಕಾಮಗೌಡ, ಆರೋಗ್ಯ ಇಲಾಖೆ ಡಾ| ರಾಮಕೃಷ್ಣ, ಡಾ| ನಾಗರಾಜ್ ಇದ್ದರು.
ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಕೆಲವೊಂದು ತಪ್ಪುಗಳಾಗಿದ್ದು, ಅಲ್ಲಿ ಉಲ್ಲೇಖೀಸಿದ ರೋಗಿಗಳ ಸಂಖ್ಯೆಗೂ ಸೋಂಕಿತರ ಸಂಖ್ಯೆಗೂ ತಾಳೆ ಆಗುತ್ತಿಲ್ಲ. ಸೋಂಕು ಹೆಚ್ಚಾಗಿ ಬಂದಿರುವ ಕ್ವಾರಂಟೈನ್‌ನಗಳಲ್ಲಿ ಆ ಸಂಖ್ಯೆಯ ರೋಗಿಗಳೇ ಇಲ್ಲ. ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಸರ್ಕಾರದ ಗಮನಕ್ಕೆ ತರಲಾಗಿದೆ.
-ಆರ್. ವೆಂಕಟೇಶಕುಮಾರ, ಜಿಲ್ಲಾಧಿಕಾರಿ