Advertisement

6 ತಿಂಗಳ ಕನಿಷ್ಠಕ್ಕೆ ಸೋಂಕು: ಕೇಂದ್ರದ ಘೋಷಣೆ ; ಸಕ್ರಿಯ ಕೇಸು 3 ಲಕ್ಷಕ್ಕಿಂತ ಕಡಿಮೆ

01:22 AM Dec 23, 2020 | mahesh |

ಹೊಸದಿಲ್ಲಿ: ಹೊಸ ಸ್ವರೂಪದ ಕೋವಿಡ್ ಸೋಂಕು ದೇಶದಲ್ಲಿ ಪತ್ತೆಯಾಗಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಹೇಳಿರುವಂತೆಯೇ ಮತ್ತೂಂದು ಸಮಾಧಾನಕರ ಅಂಶ ಹೊರಬಿದ್ದಿದೆ. ಸೋಮವಾರ ದಿಂದ ಮಂಗಳವಾರದ ಅವಧಿಯಲ್ಲಿ 19,556 ಹೊಸ ಪ್ರಕರಣಗಳು ಮತ್ತು 301 ಹೊಸ ಸಾವಿನ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಆರು ತಿಂಗಳುಗಳ ಬಳಿಕ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಸೋಂಕಿನ ಪ್ರಕರಣಗಳ ಸಂಖ್ಯೆ ಕೂಡ 3 ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ 96,36, 487 ಮಂದಿ ಇದುವರೆಗೆ ಚೇತರಿಕೆಯಾಗಿದ್ದಾರೆ. ಈ ಮೂಲಕ ಶೇ.95.65ರಷ್ಟು ಚೇತರಿಸಿಕೊಂಡಿದ್ದಾರೆ. ಆಗಸ್ಟ್‌ನಲ್ಲಿ 20 ಲಕ್ಷ, ಸೆ.5ರಂದು 50 ಲಕ್ಷ, ಡಿ.19ರಂದು ಸೋಂಕಿನ ಸಂಖ್ಯೆ 1 ಕೋಟಿಗೆ ಏರಿಕೆಯಾಗಿತ್ತು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಕೂಡ ಇದೇ ಅಂಶ ಪುಷ್ಟೀಕರಿಸಿದ್ದಾರೆ. 24 ಗಂಟೆಗಳಲ್ಲಿ ಮಧ್ಯಪ್ರದೇಶ, ತಮಿಳುನಾಡು, ಛತ್ತೀಸ್‌ಗಢ‌, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಕೇರಳಗಳಲ್ಲಿ ಶೇ.57ರಷ್ಟು ಕೇಸುಗಳು ದೃಢಪಟ್ಟಿವೆ. . ಶೇ.61ರಷ್ಟು ಸಾವಿನ ಪ್ರಕರಣಗಳು ಇದೇ ಅವಧಿಯಲ್ಲಿ ಉ.ಪ್ರ., ದಿಲ್ಲಿ, ಕೇರಳ, ಪಶ್ಚಿಮ ಬಂಗಾಲ ಮತ್ತು ಮಹಾರಾಷ್ಟ್ರಗಳಿಂದ ವರದಿಯಾಗಿದೆ. ಏಳು ವಾರಗಳ ಅವಧಿಯಲ್ಲಿ ದೈನಂದಿನ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದಿದ್ದಾರೆ ಆರೋಗ್ಯ ಕಾರ್ಯದರ್ಶಿ. ಸೆಪ್ಟಂಬರ್‌ನಿಂದ ಈಚೆಗೆ ಸಕ್ರಿಯ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಾ ಬಂದಿವೆ. 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 10 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ ಎಂದರು ಭೂಷಣ್‌.

ಪ್ಯಾಕೇಜ್‌ಗೆ ಅಸ್ತು: ಅಮೆರಿಕದ ಕಾಂಗ್ರೆಸ್‌ ಕೊನೆಗೂ 900 ಶತಕೋಟಿ ಡಾಲರ್‌ (66.47 ಲಕ್ಷ ಕೋಟಿ ರೂ.) ಮೊತ್ತದ ಕೊರೊನಾ ರಿಲೀಫ್ ಪ್ಯಾಕೇಜ್‌ಗೆ ಅಂಗೀಕಾರ ನೀಡಿದೆ. ದೇಶವಾಸಿಗಳಿಗೆ ಲಸಿಕೆ ವಿತರಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾದ ವ್ಯಕ್ತಿಗಳು ಹಾಗೂ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಒದಗಿಸಲು ಈ ಪ್ಯಾಕೇಜ್‌ ನೆರವಾಗಲಿದೆ.

ಪರಿಣಾಮಕಾರಿ: ಕೊರೊನಾ ಸೋಂಕಿನ ಹೊಸ ಸ್ವರೂಪದ ವಿರುದ್ಧವೂ ಹೋರಾಡಲು ತಮ್ಮ ಸಂಸ್ಥೆಗಳ ಲಸಿಕೆಗಳು ಪರಿಣಾಮಕಾರಿಯಾಗಿದೆ ಎಂದು ಫೈಜರ್‌, ಮೊಡೆರ್ನಾ ಸಂಸ್ಥೆಗಳು ಮಂಗಳವಾರ ಹೇಳಿಕೊಂಡಿವೆ. ಫೈಜರ್‌ ಲಸಿಕೆ ಸಮರ್ಥವಾಗಿರುವ ಬಗ್ಗೆ ಹೇಳಬೇಕೆಂದರೆ ಇನ್ನಷ್ಟು ಅಧ್ಯಯನಗಳನ್ನು ನಡೆಸಲೇಬೇಕಾಗುತ್ತದೆ ಎಂದು ಕಂಪೆನಿ ಬಯಾನ್‌ಟೆಕ್‌ ಸಿಇಒ ಉಗುರ್‌ ಸಾಹಿನ್‌ಪ್ರತಿಪಾದಿಸಿದ್ದಾರೆ.

ಪಾವತಿಗೆ ಶೇ.41 ಮಂದಿ ಗ್ರಾಮೀಣರ ಒಪ್ಪಿಗೆ
ದೇಶದ ಗ್ರಾಮೀಣ ಪ್ರದೇಶದ ಶೇ.41 ಮಂದಿ ಲಸಿಕೆಗೆ ಪಾವತಿ ಮಾಡಲು ಸಮ್ಮತಿ ಸೂಚಿಸಿದ್ದರೆ, ಶೇ.51 ಮಂದಿ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಅರ್ಧದಷ್ಟು ಮಂದಿ ಕೊರೊನಾ ಸಮಸ್ಯೆ ಚೀನದ ಸಂಚು ಎಂದು ಆರೋಪಿಸಿದ್ದಾರೆ. ಗಯಾನ್‌ ಕನೆಕ್ಷನ್‌ ಎಂಬ ಸಂಸ್ಥೆ ದೇಶದ 16 ರಾಜ್ಯಗಳ 60 ಜಿಲ್ಲೆಗಳ 6,040 ಗ್ರಾಮಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಶೇ.36 ಮಂದಿ ಲಸಿಕೆಗೆ ಪಾವತಿ ಮಾಡಲು ಬಯಸಿದ್ದಾರೆ. ಶೇ.20 ಮಂದಿ ನೋಡೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮೂರನೇ ಒಂದರಷ್ಟು ಮಂದಿ 500 ರೂ. ವರೆಗೆ ಲಸಿಕೆಗೆ ಪಾವತಿ ಮಾಡಲು ಸಾಧ್ಯವೆಂದು ಹೇಳಿದ್ದಾರೆ.

Advertisement

ಶೇ.51- ಕೊರೊನಾಕ್ಕೆ ಚೀನ ಕಾರಣ
ಶೇ.20- ದೇವರ ಪ್ರಭಾವ
ಶೇ.22- ಹೆಚ್ಚಳಕ್ಕೆ ನಿರ್ಲಕ್ಷ್ಯ ಕಾರಣ
ಶೇ.18- ಸರಕಾರದ ವೈಫ‌ಲ್ಯ ಕಾರಣ
ಶೇ.18- ಅಭಿಪ್ರಾಯ ನೀಡದವರು

ಯು.ಕೆ. ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ
ಯು.ಕೆ.ಯಿಂದ ಆಗಮಿಸಿದವರಿಗೆ ಹೊಸ ಮಾರ್ಗ ಸೂಚಿಯನ್ನು ಕೇಂದ್ರ ಪ್ರಕಟಿಸಿದೆ. ಆ ದೇಶದಿಂದ ಆಗಮಿಸಿದವರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇದರ ಜತೆಗೆ ಹೊಸ ಮಾದರಿಯ ಸೋಂಕು ಖಚಿತಪಟ್ಟರೆ ಅವರಿಗೆ ಪ್ರತ್ಯೇಕ ಐಸೊಲೇಷನ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನ.23ರಿಂದ ಡಿ.25ರ ವರೆಗೆ ಯು.ಕೆ. ಪ್ರವಾಸ ಕೈಗೊಂಡವರು ಸ್ವಯಂ ಪ್ರೇರಿತವಾಗಿ ಪ್ರಯಾಣದ ಮಾಹಿತಿ ದೃಢೀಕರಿಸಬೇಕು. ಎಲ್ಲ ವಿಮಾನ ನಿಲ್ದಾಣಗಳಿಗೆ ಆ ದೇಶದಿಂದ ಆಗಮಿಸಿದ ಪ್ರಯಾಣಿಕರ ವಿವರಗಳನ್ನು ವಲಸೆ ಕಚೇರಿಗೆ ಸಲ್ಲಿಕೆ ಮಾಡಬೇಕು. ಡಿ.21-23ರ ವರೆಗೆ ಬಂದ ಪ್ರಯಾಣಿಕರಿಗೆ ಆರ್‌ಟಿ-ಪಿಪಿಆರ್‌ ಅನ್ನು ಕಡ್ಡಾಯವಾಗಿ ನಡೆಸಬೇಕು. ಅದರಲ್ಲಿ ನೆಗೆಟಿವ್‌ ಬಂದರೆ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next