ಹೊಸದಿಲ್ಲಿ: ದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೋಂಕು ವ್ಯಾಪಿಸುತ್ತಿದ್ದು, ಒಂದೇ ದಿನ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ 34,956 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಅವಧಿಯಲ್ಲಿ 687 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ, ಗುಣಮುಖ ಪ್ರಮಾಣದಲ್ಲೂ ದಾಖಲೆ ನಿರ್ಮಾಣವಾಗಿದ್ದು, ಇದೇ ಮೊದಲ ಬಾರಿಗೆ 24 ಗಂಟೆಗಳ ಅವಧಿಯಲ್ಲಿ 22,942 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟಾರೆ ಈವರೆಗೆ 6.35 ಲಕ್ಷ ಮಂದಿ (ಶೇ.63.33) ಗುಣಮುಖರಾಗಿ ಮನೆಗೆ ಮರಳಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರಲು 110 ದಿನಗಳು ಬೇಕಾಗಿದ್ದವು. ಆದರೆ, ಕೇವಲ 59 ದಿನಗಳ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 9 ಲಕ್ಷದ ಗಡಿ ದಾಟಿದೆ. ಆದರೆ, ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಸೋಂಕಿತರ ಸಂಖ್ಯೆಯು ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ 4ರಿಂದ 8 ಪಟ್ಟು ಕಡಿಮೆಯಿದೆ ಎಂದೂ ಸಚಿವಾಲಯ ಹೇಳಿದೆ.
3 ರಾಜ್ಯಗಳಿಗೆ ಅಪಾಯ ಹೆಚ್ಚು: ಭಾರತದಲ್ಲಿ ಕೊರೊನಾ ಸೋಂಕಿಗೆ ಮಧ್ಯಪ್ರದೇಶದ ಜಿಲ್ಲೆಗಳು ಹೆಚ್ಚು ತುತ್ತಾಗುವ ಸಾಧ್ಯತೆಯಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನ ಅಧ್ಯಯನ ವರದಿ ಹೇಳಿದೆ. ವಿವಿಧ ರಾಜ್ಯಗಳಲ್ಲಿನ ನೈರ್ಮಲ್ಯ, ಗೃಹ, ಆರೋಗ್ಯ ವ್ಯವಸ್ಥೆಯನ್ನು ಮಾನದಂಡವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ. ಅದರಂತೆ, ಮಧ್ಯಪ್ರದೇಶ, ಬಿಹಾರ ಮತ್ತು ತೆಲಂಗಾಣ ರಾಜ್ಯಗಳ ಜಿಲ್ಲೆಗಳಲ್ಲಿ ಸೋಂಕಿನ ಪ್ರಭಾವ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಐಶ್ವರ್ಯ, ಆರಾಧ್ಯಾ ಆಸ್ಪತ್ರೆಗೆ ದಾಖಲು
ಮುಂಬಯಿ: ಇತ್ತೀಚೆಗಷ್ಟೇ ಕೋವಿಡ್ ಸೋಂಕು ದೃಢಪಟ್ಟಿದ್ದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಪುತ್ರಿ ಆರಾಧ್ಯಾ ಶುಕ್ರವಾರ
ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ ಇವರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದ ಕಾರಣ, ಇಬ್ಬರೂ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದರು. ಆದರೆ, ಶುಕ್ರವಾರ ಏಕಾಏಕಿ ಅಮ್ಮ-ಮಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.