Advertisement

ಬೆಂಗಳೂರಿನ ವೈದ್ಯನಿಗೆ ತಗುಲಿತು ಸೋಂಕು

11:03 AM Apr 12, 2020 | mahesh |

ಬೆಂಗಳೂರು: ಬೆಂಗಳೂರಿನ ವೈದ್ಯ ಸೇರಿ ರಾಜ್ಯದಲ್ಲಿ ಶನಿವಾರ ಹೊಸದಾಗಿ ಎಂಟು ಮಂದಿಯಲ್ಲಿ ಕೋವಿಡ್ -19 ವೈರಸ್‌ ಸೋಂಕು ದೃಢಪಟ್ಟಿದ್ದು, ಸೋಂಕಿಗೊಳಗಾದವರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.

Advertisement

ಒಟ್ಟು 216 ಮಂದಿಯಲ್ಲಿ ಆರು ಮಂದಿ ಸಾವಿಗೀಡಾಗಿದ್ದು, 39 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬಾಕಿ 171 ಮಂದಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಸೋಂಕಿತರ ಪೈಕಿ ಬೆಂಗಳೂರಿನ ನಾಲ್ಕು ಮಂದಿ ಹಿರಿಯ ನಾಗರಿಕರು ತುರ್ತು ನಿಗಾ ಘಟಕದಲ್ಲಿದ್ದಾರೆ.
ಒಬ್ಬರು ಗರ್ಭಿಣಿ ಪ್ರತ್ಯೇಕ ಆಸ್ಪತ್ರೆಯಲ್ಲಿ ನಿಗಾವಹಿಸಲಾಗಿದೆ. ಉಳಿದಂತೆ ಬಹುತೇಕರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಶನಿವಾರ ಸೋಂಕು ದೃಢಪಟ್ಟವರ ಪೈಕಿ ಐದು ಮಂದಿ ಮೈಸೂರಿನವರು, ಇಬ್ಬರು ಬೆಂಗಳೂರಿನವರು ಹಾಗೂ ಒಬ್ಬರು ಬೀದರ್‌ನವರಾಗಿದ್ದಾರೆ. ಈ ಎಲ್ಲಾ ಸೋಂಕು ದೃಢವಾದ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ, ಅವರೆಲ್ಲರನ್ನೂ ಶಂಕಿತರು ಎಂದು ಗುರುತಿಸಿ ಮನೆ ಹಾಗೂ ಆಸ್ಪತ್ರೆಯಲ್ಲಿ ನಿಗಾ ವಹಿಸಲಿದ್ದು ಕಡ್ಡಾಯವಾಗಿ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಲಿದೆ.

ವೈದ್ಯನಿಗೂ ಕೋವಿಡ್ -19 ಸೋಂಕು: ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 32 ವರ್ಷದ ವೈದ್ಯನಿಗೂ ಕೋವಿಡ್ -19 ಸೋಂಕು ತಗುಲಿದೆ. ಈ ಹಿಂದೆ ಯಾವುದೇ ವಿದೇಶ ಪ್ರವಾಸ ಹಿನ್ನೆಲೆ ಇಲ್ಲದ
ಬೆಂಗಳೂರು ಮೂಲದ ತೀವ್ರ ಉಸಿರಾಟದಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು
ದೃಢಪಟ್ಟಿತ್ತು. ಬಳಿಕ ಆ ವ್ಯಕ್ತಿಯ ಸೋಂಕು ದೃಢವಾಗುವುದಕ್ಕೂ ಮುಂಚೆ ಯಾವ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೊಳಗಾಗಿದ್ದ ಎಂದು ಪತ್ತೆ ಹಚ್ಚಿ ಆ ವೈದ್ಯರಿಗೂ ಪರೀಕ್ಷೆಗೊಳಪಡಿಸಿದ ಒಬ್ಬ ವೈದ್ಯನಲ್ಲಿ
ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಸಮಯದಲ್ಲಿ ಆ ವ್ಯಕ್ತಿಯೊಂದಿಗಿನ ನೇರ ಸಂಪರ್ಕವೇ ವೈದ್ಯನಿಗೆ ಸೋಂಕು ತಗುಲಿರುವುದಕ್ಕೆ ಕಾರಣ. ಸದ್ಯ ಆ ವೈದ್ಯನಿಗೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ
ಹಿಂದೆ ಕಲಬುರಗಿಯಲ್ಲಿಯೂ ತಪಾಸಣೆ ಮಾಡಿದ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು.
ಬಳಿಕ ಆ ವೈದ್ಯರ ಹೆಂಡತಿಗೂ ಸೋಂಕು ಹರಡಿತ್ತು.

ಮಾಲೀಕ ಗುಣಮುಖ, ಮನೆ ಕೆಲಸದವರ ಕುಟುಂಬ ಆಸ್ಪತ್ರೆಯಲಿ ಇತ್ತೀಚೆಗೆ ಲಂಡನ್‌ನಿಂದ ಬಂದ ಬೆಂಗಳೂರು ಮೂಲದ 52 ವರ್ಷದ ವ್ಯಕ್ತಿಗೆ ಮಾರ್ಚ್‌ 22 ರಂದು ಕೊರೊನಾ ತಗುಲಿತ್ತು. ಸದ್ಯ ಆತ ಗುಣಮುಖನಾಗಿ
ಮೂರ್‍ನಾಲ್ಕು ದಿನಗಳ ಹಿಂದೆಯೇ ಮನೆ ಸೇರಿದ್ದಾನೆ. ಆದರೆ, ಆತನಿಂದ ಸೋಂಕು ಹರಡಿದ್ದ ಆತನ ಮನೆ ಕೆಲಸದ 35 ವರ್ಷದ ಮಹಿಳೆ ಹಾಗೂ ಆಕೆಯ 40 ವರ್ಷದ ಗಂಡ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಶನಿವಾರ ಆ ಮನೆಕೆಲದ ಮಹಿಳೆಯ 10 ವರ್ಷದ ಮಗನಿಗೂ ಸೋಂಕು ದೃಢವಾಗಿದೆ. ಈ ಮೂಲಕ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿದೆ. ವಿದೇಶದಿಂದ ಬಂದ ವ್ಯಕ್ತಿ ಒಂದಿಷ್ಟು ಮುಂಜಾಗ್ರತೆ ವಹಿಸಿ ಮನೆ ಯಲ್ಲಿಯೇ ಪ್ರತ್ಯೇಕ ನಿಗಾ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರೆ ಕೆಲಸದವರ ಕುಟುಂಬ ಇಂದು ಸುರಕ್ಷಿತವಾಗಿರುತ್ತಿತ್ತು ಎಂಬ ಮಾತು ಕೇಳಿಬಂದಿದೆ. ಇಂತಹ ಪ್ರಕರಣಗಳಿಂದಾದರೂ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಹೋಮ್‌ ಕ್ವಾರೆಂಟೈನ್‌ ಪಾಲನೆ ಮಾಡಬೇಕಿದೆ.

Advertisement

ನಿನ್ನೆ ಸೋಂಕು ದೃಢಪಟ್ಟವರು
ಸೋಂಕಿತ ವ್ಯಕ್ತಿಯೊಂದಿಗೆ ಈ ಹಿಂದೆ ತಪಾಸಣೆ ವೇಳೆ ನೇರ ಸಂಪರ್ಕ ಹೊಂದಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯನಿಗೆ ಸೋಂಕು ದೃಢ.

ನಂಜನಗೂಡು ಔಷಧ ತಯಾರಿಕಾ ಕಂಪೆನಿಯ 46 ವರ್ಷ, 43 ವರ್ಷ, 27 ವರ್ಷ, 31 ವರ್ಷ, 26 ವರ್ಷದ
ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಸೋಂಕಿಗೊಳಗಾಗಿದ್ದ ಸೋಂಕಿತನ ಅಣ್ಣನ ಹೆಂಡತಿಗೆ ಸೋಂಕು ತಗುಲಿದೆ. ಇವರಿಗೆ 50 ವರ್ಷ ವಯಸ್ಸಾಗಿದ್ದು, ಬೀದರ್‌ನ ನಿಗದಿತ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಲಂಡನ್‌ನಿಂದ ಬಂದ ಬೆಂಗಳೂರು ಮೂಲಕ ವ್ಯಕ್ತಿಯಿಂದ ಆತನ ಮನೆ ಕೆಲಸದ ಮಹಿಳೆಗೆ ಬಂದಿತು. ಬಳಿಕ
ಆತನ ಗಂಡನಿಗೆ ಸೋಂಕು ತಗುಲಿತ್ತು. ಸದ್ಯ ಆಕೆಯ 10 ವರ್ಷದ ಮಗನಿಗೂ ಸೋಂಕು ಹರಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರಗಿಯಲ್ಲಿ ಮೃತಪಟ್ಟ ಸೋಂಕಿತ ಹಣ್ಣಿನ ವ್ಯಾಪಾರಿ ಚಿಕಿತ್ಸೆ ಪಡೆದ ಬಹಮನಿ ಖಾಸಗಿ ಆಸ್ಪತ್ರೆಯಲ್ಲಿ
ಕಾರ್ಯನಿರ್ವಹಿಸುತ್ತಿದ್ದ 38 ವರ್ಷದ ಆಯಾಗೆ ಸೋಂಕು ದೃಢ ಪಟ್ಟಿದೆ.

ಇತರೆ ಅಂಕಿ ಅಂಶ
ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ಅವಲೋಕನದಲ್ಲಿರುವ ವರು-20,997 ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು -2,175, ದ್ವಿತೀಯ ಸಂಪರ್ಕಿತರು – 7070.

ಆಸ್ಪತ್ರೆಗೆ ಶನಿವಾರ ದಾಖಲಾದ ಶಂಕಿತರು – 129, ಬಿಡುಗಡೆಯಾ ದವರು – 50, ಸದ್ಯ ಆಸ್ಪತ್ರೆಯಲ್ಲಿರುವ ಶಂಕಿತರು ಒಟ್ಟು – 571.

ಶನಿವಾರ ನೆಗೆಟಿವ್‌ ಬಂದ ವರದಿಗಳು – 558, ಪಾಸಿಟಿವ್‌ ಬಂದ ವರದಿಗಳು – 08 ( ಈವರೆಗೂ ಒಟ್ಟಾರೆ ನೆಗೆಟಿವ್‌ -8,231 , ಪಾಸಿಟಿವ್‌ – 215)

ಶಂಕಿತರ ಪೈಕಿ ಶನಿವಾರ ಸೋಂಕು ಪರೀಕ್ಷೆಗೆ ಸಂಗ್ರಹಿಸಿದ ಗಂಟಲು ದ್ರಾವಣ ಮಾದರಿಗಳು – 585

ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರು – 170

ದೆಹಲಿ ನಿಜಾಮುದ್ಧೀನ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಿಗಾಗಿ ಸಹಾಯವಾಣಿ – 080-2971117. ಕೊರೊನಾ ಕುರಿತ ಮಾಹಿತಿಗೆ ಆರೋಗ್ಯವಾಣಿ 104.

Advertisement

Udayavani is now on Telegram. Click here to join our channel and stay updated with the latest news.

Next