Advertisement

ಸೋಂಕಿತನ ಸುತ್ತಾಟ-ಸಂಪರ್ಕ ತಂದ ತಲ್ಲಣ

10:27 AM May 03, 2020 | Suhan S |

ಹುಬ್ಬಳ್ಳಿ: ಕೋವಿಡ್ 19 ಸೋಂಕಿತ ಪಿ-589 ವ್ಯಕ್ತಿಯ ಸುತ್ತಾಟ, ಭೇಟಿ ನೀಡಿದ ಸ್ಥಳಗಳು, ಅನೇಕ ಗಣ್ಯರೊಂದಿಗೆ ಸಂಪರ್ಕ ಗಮನಿಸಿದರೆ ವಾಣಿಜ್ಯನಗರಿಯಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಇನ್ನೇನು ಶಂಕಿತರ ಪ್ರಮಾಣ ಕುಗ್ಗುವತ್ತ ಮುಖ ಮಾಡಿದೆ ಎನ್ನುವಾಗಲೇ ಮತ್ತೂಂದು ಸಂಕಷ್ಟ ಎದುರಾಗುವಂತಾಗಿದೆ. ಸೋಂಕಿತ ಪಿ-589 ಹುಬ್ಬಳ್ಳಿಯ ಬಹುತೇಕ ಪ್ರದೇಶಕ್ಕೆ ಭೇಟಿ ನೀಡಿದ್ದು, ಅನೇಕ ಕಡೆಗಳಲ್ಲಿ ಆಹಾರಧಾನ್ಯ ವಿತರಣೆ ಮಾಡಿರುವುದು, ಹಲವರೊಂದಿಗೆ ಸೇರಿ ಸುತ್ತಾಟ ಕೈಗೊಂಡಿರುವುದು ನೋಡಿದರೆ ಶಂಕಿತ-ಸೋಂಕಿತ ವಿಚಾರದಲ್ಲಿ ದಿಗಿಲು ಮೂಡಿಸುವಂತೆ ಆಗಿದೆ.

Advertisement

ಸೋಂಕಿತ ತಂದ ತಲ್ಲಣ: ಧಾರವಾಡದಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾದಾಗ, ಆತಂಕದ ಜತೆಗೆ ಸದ್ಯಕ್ಕಂತು ನಮ್ಮಲ್ಲಿ ಸೋಂಕು ಪ್ರಕರಣ ವರದಿಯಾಗಿಲ್ಲ ಎಂಬ ನಿರಾಳ ಭಾವದಲ್ಲಿದ್ದ ಹುಬ್ಬಳ್ಳಿಗೆ ಏಕಾಏಕಿ ಸೋಂಕು ವಕ್ಕರಿಸಿ ಜನರನ್ನು ಕಂಗೆಡುವಂತೆ ಮಾಡಿತ್ತು. ಸೋಂಕಿತರ ಸಂಪರ್ಕ, ಸುತ್ತಾಟ ಹಲವು ರೀತಿಯ ಆತಂಕಕ್ಕೆ ಕಾರಣವಾಗಿತ್ತು. ಒಂದೇ ಒಂದು ಪ್ರಕರಣ ಇಲ್ಲದೆ ಹುಬ್ಬಳ್ಳಿಯಲ್ಲಿ ದಿಢೀರನೇ ಎಂಟು ಪ್ರಕರಣಗಳು ಕಾಣಿಸಿಕೊಂಡಿದ್ದು, ವಾಣಿಜ್ಯ ನಗರ ಅಕ್ಷರಶಃ ಕಂಪಿಸುವಂತೆ ಮಾಡಿತ್ತು. ಜಿಲ್ಲಾಡಳಿತದ ಸಕಾಲಿಕ ಕ್ರಮದಿಂದಾಗಿ ಶಂಕಿತರು, ಸೋಂಕಿತರ ಪತ್ತೆ, ಕ್ವಾರಂಟೈನ್‌ ಇತ್ಯಾದಿ ಕ್ರಮಗಳು ಪರಿಣಾಮಕಾರಿಯಾಗಿ ಅದರ ಫ‌ಲ ಗೋಚರಿಸುತ್ತಿದೆ ಎನ್ನುವಾಗಲೇ, ಇದೀಗ ಮತ್ತೂಂದು ಕಂಪನ ತಲ್ಲಣಕ್ಕೆ ಕಾರಣವಾಗಿದೆ. ಪಿ-589 ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆ ಹಾಗೂ ಸವಾಲು ಜಿಲ್ಲಾಡಳಿತವನ್ನು ಕಾಡುತ್ತಿದೆ. ಇನ್ನೊಂದೆಡೆ ಈ ವ್ಯಕ್ತಿಯ ಸುತ್ತಾಟದ ವಿವರ ಗಮನಿಸಿದರೆ ಯಾರಿಗಾದರೂ ಆತಂಕ ಮೂಡಿಸದೆ ಇರದು. ಕೇಶ್ವಾಪುರದ ಶಾಂತಿ ಕಾಲೋನಿಯಿಂದ ಹಿಡಿದು ಮಹಾವೀರ, ಮರಾಠಾಗಲ್ಲಿವರೆಗೂ, ಅದೇ ರೀತಿ ಹೊಸೂರು, ಗೋಕುಲ ರಸ್ತೆ, ವೆಂಕಟೇಶ ಕಾಲೋನಿ, ದೇಶಪಾಂಡೆ ನಗರ, ರೈಲ್ವೆ ವರ್ಕ್‌ಶಾಪ್‌, ಸಿಬಿಟಿಹೀಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದು, ಈ ಎಲ್ಲ ಪ್ರದೇಶಗಳಲ್ಲಿ ಒಂದಿಲ್ಲ ಒಂದು ಸಂಪರ್ಕದ ಜತೆಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡುವುದರಲ್ಲಿ ಪಾಲ್ಗೊಂಡಿದ್ದಾನೆ.

ಕೆಲ ಮೂಲಗಳ ಪ್ರಕಾರ ಸೋಂಕಿತ ವ್ಯಕ್ತಿ ನಗರದಲ್ಲಿನ ಕೆಲವೊಂದು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಜತೆಗೆ ಈ ವ್ಯಕ್ತಿ ನಗರದ ಹಲವು ಗಣ್ಯರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದು, ಕೆಲವೊಂದು ಕಾರ್ಯಕ್ರಮ, ಆಹಾರ ಕಿಟ್‌ಗಳ ವಿತರಣೆಯಲ್ಲೂ ಅವರೊಂದಿಗೆ ಪಾಲ್ಗೊಂಡಿದ್ದ ಎಂದು ಹೇಳಲಾಗುತ್ತಿದೆ.

ಜಿಲ್ಲಾಡಳಿತಕ್ಕೆ ತಲೆನೋವು: ಧಾರವಾಡದಲ್ಲಿನ ಸೋಂಕು ಪ್ರಕರಣವನ್ನು ಸುಲಭ ರೀತಿಯಲ್ಲಿನಿಭಾಯಿಸಿದ್ದ ಜಿಲ್ಲಾಡಳಿತಕ್ಕೆ ಹುಬ್ಬಳ್ಳಿಯಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಿಸುವುದು, ಅವರ ಪರೀಕ್ಷೆ, ಕ್ವಾರಂಟೈನ್‌ ಹಾಗೂ ಕ್ವಾರಂಟೈನ್‌ ಇದ್ದವರನ್ನು ನಿಭಾಯಿಸುವುದು ಸಾಕು ಸಾಕಾಗಿತ್ತು ಎನ್ನಲಾಗುತ್ತಿದೆ. ಹುಬ್ಬಳ್ಳಿಯಲ್ಲಿನ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಗುರುತಿಸಿಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮೂವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೊರೊನಾ ಕುರಿತ ಪರೀಕ್ಷಾ ವರದಿ ನಿರೀಕ್ಷೆ 400ರ ಗಡಿಗೆ ತಲುಪಿ 100 ಗಡಿಗೆ ಇಳಿದಿದ್ದು, ಹೊಸ ಸೋಂಕು ಪ್ರಕರಣ ಪತ್ತೆಯಾಗದಿರುವುದು ಜಿಲ್ಲಾಡಳಿತಕ್ಕೆ ಒಂದು ರೀತಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎನ್ನುವಾಗಲೇ ಮತ್ತೂಂದು ಸೋಂಕು ಪ್ರಕರಣ ಪತ್ತೆ ತಲೆನೋವಾಗಿ ಪರಿಣಮಿಸಿದೆ.

ಸೋಂಕಿತ ಪಿ-589 ಸುತ್ತಾಟದ ವಿವರ ಗಮನಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೊಳಪಡಿಸುವ, ಕ್ವಾರಂಟೈನ್‌ಗೆ ಕಳುಹಿಸುವ ಅವಶ್ಯಕತೆ ಬೀಳಬಹುದಾಗಿದೆ. ಇದನ್ನು ನಿಭಾಯಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಅಣಿಯಾಗಿದೆ. ಸೋಂಕಿತನ ಜತೆಗೆ ಸಂಪರ್ಕ ಹೊಂದಿದವರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಮುಂದಾಗಬೇಕಾಗಿದೆ. ಸಂಪರ್ಕ ಶಂಕಿತವಾಗಿರುತ್ತದೆ. ಸಕಾಲಕ್ಕೆ ತಪಾಸಣೆಗೆ ಒಳಗಾದರೆ ಸೋಂಕು ಇರುವಿಕೆ-ಇಲ್ಲದಿರುವಿಕೆ ತಿಳಿಯಲಿದೆ. ಸೋಂಕು ಇಲ್ಲವೆಂದಾದಲ್ಲಿ ನೆಮ್ಮದಿಯಿಂದ ಇರಬಹುದು. ಇದೇ ಎಂದಾದಲ್ಲಿ ಸಕಾಲಿಕ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಜತೆಗೆ ಇನ್ನಷ್ಟು ಜನರಿಗೆ ಸೋಂಕುಹರಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾನವೀಯ ಜವಾಬ್ದಾರಿ ನಿಭಾಯಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next