ಮೈಸೂರು: ಕೋವಿಡ್ 19 ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ ಪರಿಣಾಮ ಮೈಸೂರಿನ ಚೆಲುವಾಂಬ ಹೆರಿಗೆ ಆಸ್ಪತ್ರೆಯನ್ನು 24 ಗಂಟೆ ಸೀಲ್‌ಡೌನ್ ಮಾಡಲಾಗಿದ್ದು, ಆಸ್ಪತ್ರೆ ಸುತ್ತಲೂ ಸ್ಯಾನಿಟೈಸ್ ಮಾಡಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ ಕೋವಿಡ್-19 ನಿಯಮಾನುಸಾರ ಸ್ವಾಬ್ ಟೆಸ್ಟ್ ಕಡ್ಡಾಯವಾಗಿದೆ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಆಕೆಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಆದರೆ ಪರೀಕ್ಷಾ ವರದಿ ಬರುವ ಮೊದಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಿಣಿ ಸ್ಥಿತಿ ಅವಲೋಕಿಸಿದ ವೈದ್ಯರ ತಂಡ ಹೆರಿಗೆ ಕೊಠಡಿಗೆ ಕರೆದೊಯ್ದು ಚಿಕಿತ್ಸೆ ಆರಂಭಿಸಿದ್ದಾರೆ. ಕಳೆದ ರಾತ್ರಿ 9.15ಕ್ಕೆ ಆ ಗರ್ಭಿಣಿಗೆ ಹೆರಿಗೆ ಆಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ತಾಯಿ ಮತ್ತು ಮಗುವಿನ ಆರೋಗ್ಯ ಪರಿಶೀಲಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿಯೇ ಆ ಗರ್ಭಿಣಿಯಿಂದ ಸಂಗ್ರಹಿಸಿದ್ದ
ಗಂಟಲು ದ್ರವದ ಸ್ಯಾಂಪಲ್ ವರದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕೂಡಲೆ ಎಚ್ಚೆತ್ತುಕೊಂಡ ಆಸ್ಪತ್ರೆಯ ವೈದ್ಯರು ಇತರೆ ರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಸುರಕ್ಷಿತ ಕೊಠಡಿಗೆ ಸ್ಥಳಾಂತರ ಮಾಡಿದ್ದಾರೆ. ಅಲ್ಲದೆ ಸೋಂಕು ದೃಢಪಟ್ಟ ಮಹಿಳೆ ಮತ್ತು ಆಕೆಯ ನವಜಾತ ಶಿಶುವನ್ನು ಮಧ್ಯರಾತ್ರಿ 12.30ರ ವೇಳೆಗೆ ಆ್ಯಂಬುಲೆನ್ಸ್‌ನಲ್ಲಿ ಅಗತ್ಯ ಸುರಕ್ಷತಾ ಕ್ರಮದೊಂದಿಗೆ ಜಯಲಕ್ಷ್ಮೀಪುರಂನಲ್ಲಿರುವ “ಕೋವಿಡ್ ಹೆರಿಗೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಸೋಂಕಿತ ಮಹಿಳೆ ಇದ್ದ ಕಾರಣ ಚೆಲುವಾಂಬ ಆಸ್ಪತ್ರೆಗೆ ವೈರಾಣು ನಾಶ ಮಾಡುವ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿ 24 ಗಂಟೆ ಸೀಲ್‌ಡೌನ್ ಮಾಡಲಾಗಿದೆ. ಬೇರೆ ಬೇರೆ ತಾಲೂಕು ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಹೆರಿಗೆಗಾಗಿ ಬಂದವರನ್ನು ಜಯನಗರ, ನಜ‚ರ್‌ಬಾದ್ ಸೇರಿದಂತೆ ವಿವಿಧ ಹೆರಿಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ನಗರ ಪಾಲಿಕೆ ಅಭಯ ತಂಡದ ಸಿಬ್ಬಂದಿ ರಾಸಾಯನಿಕ ದ್ರಾವಣ ಸಿಂಪಡಿಸಿದರು.
ಕೋವಿಡ್-ಹೆರಿಗೆ ಆಸ್ಪತ್ರೆ: ಮೈಸೂರು ಜಿಲ್ಲಾಡಳಿತ ಕೋವಿಡ್ 19 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲೆಂದೇ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆ ಮೀಸಲಿಡಲಾಗಿದೆ.