Advertisement

INDvsSL; ನಾಯಕನಾದ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ದಾಖಲೆ ಮುರಿದ ಸೂರ್ಯಕುಮಾರ್

08:53 AM Jul 28, 2024 | Team Udayavani |

ಪಲ್ಲೆಕೆಲೆ: ಹೊಸ ನಾಯಕ ಸೂರ್ಯಕುಮಾರ್ (Suryakumar yadav) ಮತ್ತು ಹೊಸ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ನೇತೃತ್ವದಲ್ಲಿ ಹೊಸ ಹುರುಪಿನಲ್ಲಿ ಕಣಕ್ಕೆ ಇಳಿದಿದ್ದ ಭಾರತ ತಂಡವು ಶ್ರೀಲಂಕಾ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಪಲ್ಲೆಕೆಲೆಯಲ್ಲಿ ನಡೆದ ಸರಣಿ ಆರಂಭಿಕ ಪಂದ್ಯದಲ್ಲಿ ಸೂರ್ಯಕುಮಾರ್ ಬಳಗವು 43 ರನ್ ಅಂತರದ ಗೆಲುವು ಕಂಡಿದೆ.

Advertisement

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತು. ಒಂದು ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಲಂಕಾ ಕೊನೆಯಲ್ಲಿ ವಿಕೆಟ್ ಕಳೆದುಕೊಂಡು 19.2 ಓವರ್ ಗಳಲ್ಲಿ 170 ರನ್ ಗೆ ಆಲೌಟಾಯಿತು. ಭಾರತವು ಈ ಪಂದ್ಯದಲ್ಲಿ 43 ರನ್ ಗಳಿಂದ ಗೆಲುವು ಸಾಧಿಸಿತು.

ಪೂರ್ಣ ಪ್ರಮಾಣದ ಟಿ20 ನಾಯಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿಯೇ ಸೂರ್ಯ ಮಿಂಚಿದರು. ತನ್ನ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೂರ್ಯ 26 ಎಸೆತಗಳಲ್ಲಿ 58 ರನ್ ಗಳಿಸಿದರು. ಈ ಇನ್ನಿಂಗ್ಸ್ ನಲ್ಲಿ ಅವರು ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದರೊಂದಿಗೆ ಸೂರ್ಯಕುಮಾರ್ ದಾಖಲೆಯ ಪುಟವೊಂದರಲ್ಲಿ ತನ್ನ ಹೆಸರು ಬರೆದುಕೊಂಡರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಈಗ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 16 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಸೂರ್ಯ ಕೂಡಾ 16ನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.

Advertisement

ವಿರಾಟ್ ಕೊಹ್ಲಿ ಅವರು 125 ಪಂದ್ಯಗಳಲ್ಲಿ 16 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ ಸೂರ್ಯ ಕೇವಲ 69 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿರಾಟ್ ಗಿಂತ ಅರ್ಧಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದಾರೆ.

ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು

ಸೂರ್ಯಕುಮಾರ್ ಯಾದವ್ (ಭಾರತ) – 16 (69 ಪಂದ್ಯಗಳಲ್ಲಿ)

ವಿರಾಟ್ ಕೊಹ್ಲಿ (ಭಾರತ) – 16 (125 ಪಂದ್ಯಗಳಲ್ಲಿ)

ಸಿಕಂದರ್ ರಜಾ (ಜಿಂಬಾಬ್ವೆ) – 15 (91 ಪಂದ್ಯಗಳಲ್ಲಿ)

ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) – 14 (129 ಪಂದ್ಯಗಳಲ್ಲಿ)

ರೋಹಿತ್ ಶರ್ಮಾ (ಭಾರತ) – 14 (159 ಪಂದ್ಯಗಳಲ್ಲಿ)

Advertisement

Udayavani is now on Telegram. Click here to join our channel and stay updated with the latest news.

Next