ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ಕೆ.ಎಲ್ ರಾಹುಲ್ ಅವರನ್ನು ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಅವರು ಹಾಡಿಹೊಗಳಿದ್ದಾರೆ. ಕೆಎಲ್ ರಾಹುಲ್ ಅವರು 101 ರನ್ ಗಳಿಸಿದ್ದಾರೆ.
ಗಾವಸ್ಕರ್ ಅವರು ರಾಹುಲ್ ಆಟವನ್ನು ಹೊಗಳಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಶತಕವು ಭಾರತೀಯ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ “ಟಾಪ್ 10″ ರಲ್ಲಿ ಒಂದಾಗಿದೆ ಎಂದಿದ್ದಾರೆ. ರಾಹುಲ್ ಕಠಿಣ ಪರಿಸ್ಥಿತಿಗಳ ನಡುವೆ ಹೋರಾಡಬೇಕಾಯಿತು, ಮೊದಲ ಮತ್ತು ಎರಡನೇ ದಿನದಂದು ಭಾರತೀಯ ತಂಡವನ್ನು ಅವರು ತೊಂದರೆಯಿಂದ ಪಾರು ಮಾಡಿದರು ಎಂದು ಹೇಳಿದರು.
ಸೆಂಚೂರಿಯನ್ ನಲ್ಲಿ ಸತತ ಎರಡು ಶತಕ ಹೊಡೆದ ಮೊದಲ ವಿದೇಶಿ ಆಟಗಾರ ಎಂಬ ಖ್ಯಾತಿಗೆ ರಾಹುಲ್ ಪಾತ್ರರಾದರು. ವೇಗಿಗಳಿಗೆ ಹೆಚ್ಚು ನೆರವು ನೀಡುತ್ತಿದ್ದ ಪಿಚ್ ನಲ್ಲಿ 92 ರನ್ ಗೆ ನಾಲ್ಕು ವಿಕೆಟ್ ಉರುಳಿದ್ದ ವೇಳೆ ಬ್ಯಾಟಿಂಗ್ ಗೆ ಆಗಮಿಸಿದ ರಾಹುಲ್ ತಂಡಕ್ಕೆ ನೆರವಾದರು. ಬಾಲಂಗೋಚಿಗಳೊಂದಿಗೆ ಸೇರಿ ಇನ್ನಿಂಗ್ಸ್ ಕಟ್ಟಿದ ಅವರು ತಂಡದ ಮೊತ್ತವನ್ನು 245ಕ್ಕೆ ಏರಿಸಲು ನೆರವಾದರು.
“ನಾನು ಎಲ್ಲಾ ಭಾರತೀಯರ ಶತಕವನ್ನು ಕಂಡಿಲ್ಲ. ಆದರೆ ನಾನು ಈ ಟೆಸ್ಟ್ ಶತಕವನ್ನು ನೋಡಿದ್ದೇನೆ, ನನ್ನ ಪುಸ್ತಕದಲ್ಲಿ, ಇತರರು ಏನು ಯೋಚಿಸುತ್ತಾರೆ ಎಂದು ನಾನು ಹೆದರುವುದಿಲ್ಲ. ನನ್ನ ಪುಸ್ತಕದಲ್ಲಿ, ಇದು ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯರ ಅಗ್ರ 10 ಶತಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ” ಎಂದು ಗಾವಸ್ಕರ್ ಬುಧವಾರ ಹೇಳಿದರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದೆ. ಕೊನೆಯ ಸರಣಿ ಆಡುತ್ತಿರುವ ಡೀನ್ ಎಲ್ಗರ್ 140 ರನ್ ಗಳಿಸಿ ಆಡುತ್ತಿದ್ದಾರೆ.