ಮುಂಬೈ: ಸತತ ಎರಡು ಪಂದ್ಯಗಳಲ್ಲಿ ಸೋತು ವೈಟ್ ವಾಶ್ ಅವಮಾನ ತಪ್ಪಿಸಿಕೊಳ್ಳಲೇಬೇಕಾದ ಮುಂಬೈ ಪಂದ್ಯದಲ್ಲೂ ಭಾರತ ಸಂಕಷ್ಟಕ್ಕೆ ಸಿಲುಕಿದೆ. ವಾಂಖೆಡೆ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 235 ರನ್ ಗಳಿಗೆ ಕಟ್ಟಿ ಹಾಕಿದರೂ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ 86 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದ ಟಾಮ್ ಲ್ಯಾಥಂ ಪಡೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಲ್ಯಾಥಂ 24 ರನ್ ಗಳಿಸಿದರೆ, ವಿಲ್ ಯಂಗ್ 71 ರನ್ ಮಾಡಿದರು. ಬಳಿಕ ಡ್ಯಾರೆಲ್ ಮಿಚೆಲ್ 82 ರನ್ ಮಾಡಿ ತಂಡಕ್ಕೆ ಆಧಾರವಾದರು.
ಉಳಿದ ಆಟಗಾರರು ರನ್ ಕಲೆ ಹಾಕಲು ಪರದಾಡಿದರು. ಭಾರತದ ಪರ ಬಿಗು ದಾಳಿ ಸಂಘಟಿಸಿದ ರವೀಂದ್ರ ಜಡೇಜಾ ಐದು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್ ಪಡೆದರು. ಒಂದು ವಿಕೆಟ್ ಪಡೆದರೆ ಆಕಾಶ್ ದೀಪ್ ಪಾಲಾಯಿತು. ಕಿವೀಸ್ 235 ರನ್ ಗೆ ಆಲೌಟಾಯಿತು.
ಬ್ಯಾಟಿಂಗ್ ಆರಂಭಿಸಿದ ಭಾರತವು ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಆರಂಭದಲ್ಲಿ ಕಳೆದುಕೊಂಡಿತು. ರೋಹಿತ್ 18 ರನ್ ಗಳಿಸಿ ಹೆನ್ರಿಗೆ ವಿಕೆಟ್ ನೀಡಿದರು. ಬಳಿಕ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅರ್ಧಶತಕದ ಜೊತೆಯಾಟವಾಡಿದರು. ಜೈಸ್ವಾಲ್ 30 ರನ್ ಮಾಡಿದರು. ನೈಟ್ ವಾಚ್ಮ್ಯಾನ್ ಆಗಿ ಬಂದ ಮೊಹಮ್ಮದ್ ಸಿರಾಜ್ ಮೊದಲ ಬಾಲಿಗೆ ಔಟಾದರು.
ವಿರಾಟ್ ಕೊಹ್ಲಿ ಕೇವಲ ನಾಲ್ಕು ರನ್ ಗಳಿಸಿದ್ದಾಗ ರನೌಟ್ ಗೆ ಬಲಿಯಾದರು. ಒಂಟಿ ರನ್ ಕಸಿಯುವ ಭರದಲ್ಲಿ ರನೌಟಾದರು. ಕೇವಲ ಎಂಟು ಎಸೆತಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸದ್ಯ 31 ರನ್ ಗಳಿಸಿರುವ ಗಿಲ್ ಮತ್ತು ಒಂದು ರನ್ ಮಾಡಿರುವ ಪಂತ್ ಕ್ರೀಸ್ ನಲ್ಲಿದ್ದಾರೆ.