ಮೈಸೂರು: ನಗರದಲ್ಲಿರುವ ಕೈಗಾರಿಕೆ ಪ್ರದೇಶಗಳಲ್ಲಿ ಸರ್ಕಾರ ಟ್ರಕ್ ಟರ್ಮಿನಲ್ನ್ನು ಸ್ಥಾಪನೆ ಮಾಡಬೇಕು ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಆಗ್ರಹಿಸಿದ್ದಾರೆ.
ನಗರದ ಹೂಟಗಳ್ಳಿ, ಕೂರ್ಗಳ್ಳಿ, ಹೆಬ್ಟಾಳ ಸೇರಿದಂತೆ ಹಲವು ಸ್ಥಳಗಳಲ್ಲಿ ಇರುವ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ದೊಡ್ಡ ಟ್ರಕ್ ಹಾಗೂ ಲಾರಿಗಳ ನಿಲುಗಡೆಯ ಸಮರ್ಪಕ ನಿರ್ವಹಣೆ ಶೂನ್ಯವಾಗಿದ್ದು, ಸಂಚಾರ ಸಮಸ್ಯೆ ಎದುರಾಗಿದೆ.
ಕಾರ್ಖಾನೆಗಳಿಂದ ವಸ್ತುಗಳನ್ನು ತೆಗೆದುಕೊಂಡು ಹೋಗುವ ಮತ್ತು ಕಾರ್ಖಾನೆಗಳಿಗೆ ಕಚ್ಚಾ ವಸ್ತು ಸೇರಿದಂತೆ ಇತರೆ ಬಿಡಿ ಭಾಗಗಳನ್ನು ತರುವ ಲಾರಿಗಳು ಮತ್ತು ಟ್ರಕ್‌ಗಳು ಸೂಕ್ತ ನಿಲ್ದಾಣವಿಲ್ಲದೇ ರಸ್ತೆ ಬದಿಯಲ್ಲಿಯೇ ನಿಲ್ಲುತ್ತಿವೆ. ಪರಿಣಾಮ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿ ಸುಗಮ ಸಂಚಾರಕ್ಕೆ ತೊಡಕಾಗಿದೆ. ದಿನಗಟ್ಟಲೇ ರಸ್ತೆ ಬದಿಯಲ್ಲಿ ಲಾರಿ ಹಾಗೂ ಟ್ರಕ್‌ಗಳನ್ನು ನಿಲ್ಲಿಸಿಕೊಂಡು ಕಾಯುವ ಚಾಲಕರು ತಮ್ಮ ನಿತ್ಯಕರ್ಮಗಳನ್ನು ಮುಗಿಸಲು ಕಷ್ಟವಾಗಿದೆ. ಇದರಿಂದ ರಸ್ತೆ ಅಕ್ಕಪಕ್ಕದ ಸ್ಥಳದಲ್ಲಿ ಮಲಮೂತ್ರ ವಿಸರ್ಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಪರಿಸರವೂ ಹಾಳಗುತ್ತಿದೆ. ಚಾಲಕರುಗಳಿಗೆ ಸ್ನಾನ ಮಾಡಲು, ನಿದ್ರೆ ಮಾಡಲು ಸಮಸ್ಯೆ ಇದೆ. ಈ ಅಂಶಗಳನ್ನು ಮನಗಂಡು ಕರ್ನಾಟಕ ರಾಜ್ಯ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ ಲಾರಿಗಳು ಹಾಗೂ ಟ್ರಕ್‌ಗಳನ್ನು ಸಮರ್ಪಕವಾಗಿ ನಿಲುಗಡೆ ಮಾಡಲು ಟ್ರಕ್ ಟರ್ಮಿನಲ್ನ್ನು ಸ್ಥಾಪಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಏನಿದು ಟ್ರಕ್ ಟರ್ಮಿನಲ್: ಕೈಗಾರಿಕ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವುದರಿಂದ ರಸ್ತೆ ಬದಿಯಲ್ಲಿ ಲಾರಿಗಳು ಮತ್ತು ಟ್ರಕ್‌ಗಳನ್ನು ನಿಲ್ಲಿಸುವುದು ತಪ್ಪುತ್ತದೆ. ಇದರಿಂದ ಚಾಲಕರು ಟ್ರಕ್ ಟರ್ಮಿನಲ್ಗೆ ಇಂತಿಷ್ಟು ಹಣ ನೀಡಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿಕೊಳ್ಳಬಹುದು. ಈ ಸ್ಥಳದಲ್ಲಿ ಶೌಚಾಲಯ, ವಸತಿ ಹಾಗೂ ಊಟದ ಸೌಲಭ್ಯವಿರುತ್ತದೆ. ಜೊತೆಗೆ ವಿಶಾಲವಾದ ಪ್ರದೇಶವಿರುವುದರಿಂದ ಚಾಲಕರುಗಳು ವಿವಿಧ ಆಟೋಟಗಳನ್ನು ಆಡಬಹುದಾಗಿದೆ.