Advertisement

ಕೈಗಾರಿಕೋದ್ಯಮಿಗಳು ಉತ್ಪನ್ನದ ಪೇಟೆಂಟ್ ಹೊಂದಿ

01:25 PM Jul 22, 2019 | Suhan S |

ತುಮಕೂರು: ಸಣ್ಣ ಕೈಗಾರಿಕೋದ್ಯಮಿಗಳು ಹೊಸದಾಗಿ ಆವಿಷ್ಕರಿಸಿದ ಯಂತ್ರೋಪಕರಣಗಳ ಪೇಟೆಂಟ್ ಪಡೆದಿರಬೇಕೆಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಸಲಹೆ ನೀಡಿದರು.

Advertisement

ಗಾಜಿನಮನೆಯಲ್ಲಿ ಭಾನುವಾರ ದಕ್ಷಿಣ ಭಾರತದ ಆಗ್ರೋ ಎಕ್ಸ್‌ಪೋ ಕೃಷಿ ಮತ್ತು ಪೂರಕ ವಸ್ತುಪ್ರದರ್ಶನದ ಸಮಾರೋಪದಲ್ಲಿ ಮಾತನಾಡಿದರು.

ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನದ ಪೇಟೆಂಟ್ ಪಡೆಯದಿರುವುದು ಮಳಿಗೆಗೆ ಭೇಟಿ ನೀಡಿದಾಗ ಕಂಡುಬಂತು. ಒಂದು ದೇಶವನ್ನು ವಿಶ್ವಮಟ್ಟದಲ್ಲಿ ಪರಿಗಣಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪೇಟೆಂಟ್ ಆಗಿರುವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಉದ್ಯಮಿಗಳು ಆವಿಷ್ಕಾರ ಮಾಡಿದ ಯಂತ್ರ, ಕೈಗಾರಿಕೆ, ಉತ್ಪನ್ನಗಳಿಗೆ ತಪ್ಪದೆ ಪೇಟೆಂಟ್ ಪಡೆಯಬೇಕು ಎಂದರು.

ಪೇಟೆಂಟ್ ಪಡೆಯಲು ಅವಕಾಶ: ಹೊಸದಾಗಿ ಆವಿಷ್ಕರಿಸಿದ ಯಂತ್ರಗಳ ಡಿಜೈನ್‌, ಪ್ರಾಸೆಸ್‌, ಪ್ರಾಡಕ್ಟ್ ಗಳಿಗೆ ಪೇಟೆಂಟ್ ಪಡೆಯಲು ಅವಕಾಶವಿದ್ದು, ಎಲ್ಲರೂ ತಪ್ಪದೇ ಪೇಟೆಂಟ್ ಹೊಂದುವ ಮೂಲಕ ದೇಶವನ್ನು ಅಭಿವೃದ್ಧಿ ಹಾದಿಯಲ್ಲಿ ಸಾಗಲು ನೆರವಾಗಬೇಕು. ಇಲ್ಲದಿದ್ದಲ್ಲಿ ಬೇರೆ ರಾಜ್ಯ, ರಾಷ್ಟ್ರದವರು ನಿಮ್ಮ ಉತ್ಪನ್ನದ ಕೃತಿಸ್ವಾಮ್ಯ ಬಳಸಿ ರಾಯಲ್ಟಿ ಲಾ» ಪಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಆವಿಷ್ಕಾರ ಮಾಡುವವರಿಗೆ ವೇದಿಕೆ ಕಲ್ಪಿಸಲು ಹಾಗೂ ಅವರಿಗೆ ಉತ್ತೇಜನ ನೀಡಲು ಇಂತಹ ಕಾರ್ಯಕ್ರಮ ಸಹಕಾರಿ. ಮಾರುಕಟ್ಟೆಯಲ್ಲಿ ದೊಡ್ಡ ಕೈಗಾರಿಕೆಗಳಿಗಿಂತ ಸಣ್ಣ ಕೈಗಾರಿಕೆಗಳಿಗೆ ಅವಕಾಶಗಳು ಕಡಿಮೆ. ಈ ನಿಟ್ಟಿನಲ್ಲಿ ಸಣ್ಣ ಕೈಗಾರಿಕಾ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಒದಗಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

Advertisement

ಪ್ರೋತ್ಸಾಹಧನ ಸೌಲಭ್ಯ: ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಸಣ್ಣ ಕೈಗಾರಿಕೆಗಳಿದ್ದು, ಕೇಂದ್ರ, ರಾಜ್ಯ ಸರ್ಕಾರದಿಂದ ಸಣ್ಣ ಕೈಗಾರಿಕೆ ಹೊಸದಾಗಿ ಪ್ರಾರಂಭಿಸಲು ಹಲವಾರು ಯೋಜನೆಗಳಡಿ ಪ್ರೋತ್ಸಾಹಧನ ಸೌಲಭ್ಯ ಒದಗಿಸಲಾಗುತ್ತಿದೆ. ಹೊಸ ಹಾಗೂ ಯುವ ಕೈಗಾರಿಕೋದ್ಯಮಿಗಳು ಸರ್ಕಾರಿ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಉದ್ಯಮಿಗಳು ಸಣ್ಣ ಕೈಗಾರಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಬೃಹತ್‌ ಕೈಗಾರಿಕೆಗಳಿಗಿಂತ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆಯಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳಿಂದಲೇ ದೇಶಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿತ್ತು. ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಿದ್ದರಿಂದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗದೆ ನಶಿಸಿ ಹೋದವು ಎಂದು ಬೇಸರಿಸಿದರು.

ದೇಶದಲ್ಲಿ ಪ್ರಸ್ತುತ ಶೇ.40ರಷ್ಟು ಸಣ್ಣ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ವಿದೇಶ ಗಳಿಗೆ ರಫ್ತು ಮಾಡುತ್ತಿರುವುದು ಉತ್ತಮ ಬೆಳ ವಣಿಗೆ. ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಗಾಂಧೀಜಿ ಕನಸನ್ನು ಯುವ ಉದ್ಯಮಿಗಳು ನನಸಾಗಿಸಬೇಕು. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ದೇಶದ ಕೈಗಾರಿಕಾ ವಲಯದ ಬೆಳವಣಿಗೆ ಸಾಧ್ಯ ಎಂದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್. ನಾಗರಾಜು, ಕಾಸಿಯಾ ಸಂಸ್ಥೆಯ ಅಧ್ಯಕ್ಷ ಆರ್‌. ರಾಜು, ಉಪಾಧ್ಯಕ್ಷ ಕೆ.ಬಿ.ಅರಸಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜ ಗೋಪಾಲ, ಖಜಾಂಚಿ ಎಸ್‌.ಎಂ. ಹುಸೇನ್‌, ಸೌತ್‌ ಆಗ್ರೋ ಎಕ್ಸ್‌ಪೋ ವೈಸ್‌ ಚೇರ್ಮನ್‌ ಬೋರೇಗೌಡ, ಸಂಚಾಲಕ ಸದಾಶಿವ ಆರ್‌. ಅಮಿನ್‌ ಇತರ‌ರಿದ್ದರು.

 

ಸಿ.ಡಿ. ಬಿಡುಗಡೆ:

ಮೊದಲನೇ ಬಾರಿ ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರದರ್ಶಕರಿಗೆ ಸ್ಟಿಲ್ಲರ್‌ ಹಾಗೂ ಪ್ರೊ ಹಾರ್ವೆಸ್ಟ್‌ ಸಂಸ್ಥೆಗೆ ಬೆಸ್ಟ್‌ ಇನ್ನೋವೇಟೀವ್‌ ಸ್ಟಾರ್ಟರ್ ಪ್ರಶಸ್ತಿ, ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ, ಕರ್ನಾಟಕ ಆಗ್ರೋ ಕೆಮಿಕಲ್, ಭೀಷ್ಮ ಮೆಟಲ್ಸ್, ಎಂಇ ಡಿಸೈನರ್, ಕವನ ಬಯೋ ಸಲ್ಯೂಷನ್ಸ್‌, ಹ್ಯಾಂಡ್‌ ಮೇಡ್‌ ಅಡ್ಡ, ಮತ್ತಿತರ ಸಂಸ್ಥೆಗಳಿಗೆ ಬೆಸ್ಟ್‌ ಪ್ರಾಡಕ್ಟ್ ಸ್ಟಾರ್ಟರ್ ಪ್ರಶಸ್ತಿ ನೀಡಲಾಯಿತು. ನಂತರ ಪ್ರದರ್ಶಕರ ಸಿ.ಡಿ. ಬಿಡುಗಡೆ ಮಾಡಲಾಯಿತು.
ಪ್ರದರ್ಶಕರಿಗೆ ಪ್ರಶಸ್ತಿ ಪ್ರದಾನ:

ವಸ್ತುಪ್ರದರ್ಶನದಲ್ಲಿ 110 ಮಳಿಗೆಗಳಲ್ಲಿ ವಿವಿಧ ಕೈಗಾರಿಕೋದ್ಯಮಿ ಪ್ರದರ್ಶಕರು ಭಾಗವಹಿಸಿದ್ದರು. ಅತ್ಯುತ್ತಮ ಪ್ರದರ್ಶಕರಿಗೆ ಪ್ರಶಸ್ತಿ ನೀಡಲಾಯಿತು. ಉತ್ತಮ ಡೆಕೋರೇಟೆಡ್‌ ಮಳಿಗೆ ಪ್ರಶಸ್ತಿ, ಉತ್ತಮ ಉತ್ಪನ್ನ ಪ್ರದರ್ಶಿಸಿದ್ದ ಡಾಲ್ಫಿನ್‌ ಇರಿಗೇಷನ್‌, ಮಾರುತಿ ಕೃಷಿ ಉದ್ಯೋಗ, ಸಿಎಫ್ಸಿಎನ್‌ ಟೆಕ್‌, ಮಹಾಲಕ್ಷ್ಮೀ ಜ್ಯೂಸ್‌ ಎಕ್ಸ್‌ಟ್ರಾಕ್ಟ್, ಬಯೋಗ್ರೀನ್‌ ಅಗ್ರಿಲಿಂಕ್‌ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next