Advertisement

ಕೈಗಾರಿಕಾ ಸಮಸ್ಯೆಗಳಿಗೆ ಸ್ಪಂದಿಸಲು ಶೀಘ್ರ ತೀರ್ಮಾನ : ಸರ್ಕಾರದ ಮುಖ್ಯ ಕಾರ್ಯದರ್ಶಿ ಭರವಸೆ

08:05 PM Jun 02, 2021 | Team Udayavani |

ಬೆಂಗಳೂರು: ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಇನ್ನು ಹಂತ ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಿ ಕೈಗಾರಿಕೆಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಬಹುದಾಗಿದೆ. ಉದ್ಯಮಗಳ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆಯೂ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಭರವಸೆ ನೀಡಿದರು.

Advertisement

ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳು, ಲಾಕ್‌ಡೌನ್‌ ನಂತರದ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಉದ್ಯಮ ವಲಯದ ಪ್ರಮುಖರೊಂದಿಗೆ ಬುಧವಾರ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೋವಿಡ್‌ ಸಂದರ್ಭದಲ್ಲಿ ಕೈಗಾರಿಕೆಗಳು ಎದುರಿಸುತ್ತಿರುವ ಸಂಕಷ್ಟ, ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಕೈಗಾರಿಕೋದ್ಯಮಿಗಳು, ನಾನಾ ವಾಣಿಜ್ಯ ಸಂಘಗಳ ಪದಾಧಿಕಾರಿಗಳು ನೀಡಿದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಉದ್ದಿಮೆದಾರರ ಬೇಡಿಕೆಗಳು ಸೂಕ್ತವಾಗಿದ್ದು, ಎಲ್ಲ ಕೈಗಾರಿಕೆಗಳು ಆರ್ಥಿಕ ನೆರವು ಕೋರುತ್ತಿಲ್ಲ. ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕೈಗಾರಿಕೆಗಳ ಪುನರಾರಂಭ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಕೋವಿಡ್ ನಿಯಂತ್ರಣ ಕುರಿತು ಸಚಿವರ ಜೊತೆ ಸಿಎಂ ಚರ್ಚೆ

ಮೇ ತಿಂಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಇನ್ನು ಹಂತ ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಿ ಆರ್ಥಿಕತೆ ಪುನರಾರಂಭಿಸುವ ಸಮಯ ಬಂದಿದೆ ಎಂದು ತಿಳಿಸಿದರು.

Advertisement

ಕೋವಿಡ್‌ ಎರಡನೇ ಅಲೆ ಎದುರಿಸಲು ಸರ್ಕಾರದೊಂದಿಗೆ ಕೈಜೋಡಿಸಿದ ಕೈಗಾರಿಕೆಗಳು, ವಾಣಿಜ್ಯ ಸಂಘಟನೆಗಳಿಗೆ ಧನ್ಯವಾದ ತಿಳಿಸಿದ ಪಿ.ರವಿಕುರ್ಮಾ, ಆಹಾರ, ಔಷಧ ವಿತರಣೆ, ಆಮ್ಲಜನಕ ಪೂರೈಕೆ, ಅಗತ್ಯ ವಸ್ತುಗಳ ಸರಬರಾಜು, ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗದಂತೆ ಕಾರ್ಯ ನಿರ್ವಹಿಸುವ ಮೂಲಕ ಎಲ್ಲ ಕೈಗಾರಿಕೆಗಳು ಸಹಕಾರ ನೀಡಿವೆ. ಮುಂದೆ ಎದುರಾಗಲಿರುವ ಮೂರನೇ ಅಲೆಯನ್ನೂ ಸಮರ್ಥವಾಗಿ ಎದುರಿಸಲು ಸರ್ಕಾರ ಶ್ರಮವಹಿಸಿ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಆ ಕಾರ್ಯಕ್ಕೂ ಉದ್ಯಮಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ, ಆಯುಕ್ತೆ ಗುಂಜನ್‌ ಕೃಷ್ಣ, ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್‌ ಪ್ರಕಾಶ್‌, ಉದ್ಯಮಿ ಟಿ.ವಿ.ಮೋಹನ್‌ ದಾಸ್‌ ಪೈ, ಫಿಕ್ಕಿ-ಕರ್ನಾಟಕ ಘಟಕದ ಅಧ್ಯಕ್ಷ ಉಲ್ಲಾಸ್‌ ಕಾಮತ್‌, ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ. ಸುಂದರ್‌, ಉಪಾಧ್ಯಕ್ಷ ಐ.ಎಸ್‌.. ಪ್ರಸಾದ್‌, ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಆಟೋಮೊಬೈಲ್‌ ಅಸೋಸಿಯೇಷನ್‌ ವತಿಯಿಂದ ಎಂ.ಪಿ. ಶ್ಯಾಮ…, ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ ಪಿ. ಸಿ. ರಾವ್‌, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್‌, ಐಟಿ ವಲಯದ ಪ್ರತಿನಿಧಿ ಪ್ರಹ್ಲಾದ್‌, ಅಸೋಚಾಮ್ ನಬಿ.ವಿ. ನಾಯ್ಡು, ಪ್ರವಾಸೋದ್ಯಮ ವಲಯದ ಪ್ರತಿನಿಧಿ ಶ್ಯಾಮರಾಜು, ಜವಳಿ ಉದ್ದಿಮೆ ವಲಯದಿಂದ ಆನಂದ್‌, ರಿಯಲ್ ಎಸ್ಟೇಟ್‌ ಉದ್ಯಮ ವತಿಯಿಂದ ಗೋವಿಂದರಾಜ್‌ ಪಾಲ್ಗೊಂಡಿದ್ದರು.

ಕೈಗಾರಿಕೆಗಳ ಪ್ರಮುಖ ಬೇಡಿಕೆ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ನೀಡಬೇಕು. ಬಾರ್‌ ಅÂಂಡ್‌ ರೆಸ್ಟೋರೆಂಟ್‌ಗಳು ಸ್ಥಗಿತಗೊಂಡಿರುವುದರಿಂದ ಮಾಸಿಕ ಪರವಾನಗಿ ಶುಲ್ಕ (75,000 ರೂ.) ಪಾವತಿಗೆ ವಿನಾಯ್ತಿ ನೀಡಬೇಕು. ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯುತ್‌ ಬಳಕೆ ಶುಲ್ಕ, ನಿಗದಿತ ಶುಲ್ಕ ಪಾವತಿಗೆ ವಿನಾಯ್ತಿ ಕೊಡಬೇಕು. ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡಿನ ಪ್ರಮುಖ ಉದ್ಯಮಗಳಿಗೆ ಅಗತ್ಯ ಉತ್ಪನ್ನಗಳ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೂರೈಕೆ ಸರಪಳಿಗೆ ಅಡ್ಡಿಯಾಗದಂತೆ ಉದ್ಯಮಗಳ ಪುನರಾರಂಭಕ್ಕೆ ಅವಕಾಶ ನೀಡಬೇಕು. ನಗರ ಪ್ರದೇಶದಲ್ಲೂ ನರೇಗಾ ಯೋಜನೆ ಜಾರಿಗೊಳಿಸಬೇಕು. ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಕಲ್ಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next