Advertisement

ಕೈಗಾರಿಕೆ ಭೂಸ್ವಾಧೀನಕ್ಕೆ ಕಮರಿಹೋದ ಗ್ರಾಮ

09:28 PM Aug 17, 2021 | Team Udayavani |

ಪೆರ್ಮುದೆ ಗ್ರಾಮದಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವರಿಗೆ ಪುರ್ನವಸತಿ ಕಲ್ಪಿಸಬೇಕಿದೆ. ಅಲ್ಲದೇ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಬೇಕಾಗಿದೆ. ನೀರು, ಬಸ್‌ ಸಮಸ್ಯೆಯಿದ್ದು, ಇವುಗಳನ್ನು ಪರಿಹರಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಬಜಪೆ: ಸುಮಾರು 1,843.89 ಎಕರೆ ವಿಸ್ತೀರ್ಣವಿದ್ದ ಪೆರ್ಮುದೆ ಗ್ರಾಮವು ಎಂಆರ್‌ಪಿಎಲ್‌, ಎಂಎಸ್‌ಇಝಡ್‌, ಎಂಆರ್‌ಪಿಎಲ್‌ ವಿಸ್ತೃತ ಯೋಜನೆಗೆ ಭೂಸ್ವಾಧೀನದಿಂದ ಈಗ ಕೇವಲ 751.78 ಎಕರೆ ವಿಸ್ತೀರ್ಣ ಮಾತ್ರ ಉಳಿದುಕೊಂಡಿದೆ.

1987ರಲ್ಲಿ ಎಂಆರ್‌ಪಿಎಲ್‌ಗೆ ಪೆರ್ಮುದೆ ಗ್ರಾಮದ ಮುಡಾಯಿ ಪದವು ಪ್ರದೇಶದ 10 ಮನೆಗಳು ಸಹಿತ 104 ಎಕರೆ ಜಾಗ ಭೂಸ್ವಾಧೀನಗೊಂಡಿದೆ. ಬಳಿಕ 2006ರಲ್ಲಿ ಎಂಎಸ್‌ಇಝಡ್‌ಗೆ ಪೆರ್ಮುದೆ ಗ್ರಾಮದ ಚಂದ್ರಹಾಸ ನಗರ, ಬ್ಯಾರಿಪಲ್ಕೆ, ಮರ್ದನ, ಬೊಳ್ಳೊಳ್ಳಿಮಾರ್‌, ಕೊಕ್ಕರ್‌, ಮಾಗಂದಡಿ, ಮುಕ್ಕೋಡಿ, ಪಾರಾಳೆಗುತ್ತು, ಮೆಣ್ಗಲ, ಕುಂಟಪದವು, ತಂದೋಳಿಗೆ ಪಾಡಿ, ಕೊಪ್ಪಳ, ಕುದುರೊಟ್ಟು, ಪಾರೊಟ್ಟು, ಹೊಗೆಮನೆ, ಪಲ್ಕೆ, ಕಟ್ಟದ ಪಲ್ಕೆ, ಕೋಟಿಮಾರ್‌ ಕೋಡಿ ಪ್ರದೇಶದಲ್ಲಿ ಒಟ್ಟು 533.06 ಎಕರೆ ಜಾಗ ಸ್ವಾಧೀನಗೊಂಡಿದ್ದು, ಪಂಚಾಯತ್‌ನ ಆಸ್ತಿಗಳಾದ ಗ್ರಂಥಾಲಯ ಕಟ್ಟಡ, ಅಕ್ಷರ ಕರಾವಳಿ ಕಟ್ಟಡ, 2 ಅಂಗನವಾಡಿ ಕೇಂದ್ರ, ಶ್ಮಶಾನ, ಓವರ್‌ಹೆಡ್‌ಟ್ಯಾಂಕ್‌, 2 ಪ್ರಯಾಣಿಕರ ಬಸ್‌ ತಂಗುದಾಣ, ಅನುದಾನಿತ ಶಾಲೆ, ಬಜಪೆಯಿಂದ ಚಂದ್ರಹಾಸ ನಗರ ಮುಖ್ಯರಸ್ತೆಗೆ ಕೂಡುವ ಪಾರಳೆಗುತ್ತು ರಸ್ತೆ, ಮರ್ದನ ರಸ್ತೆ, ಮಾಗಂದಡಿ ರಸ್ತೆ, ಬೊಳ್ಳೊಳ್ಳಿಮಾರುಗುತ್ತು ರಸ್ತೆಗಳು, 2 ದೈವಸ್ಥಾನ, 2 ಗಡುಬಡು ಜಾಗಗಳು ಭೂಸ್ವಾಧೀನಪಡಿಸಲಾಗಿದೆ.

20-12-2016ರ ಎಂಆರ್‌ಪಿಎಲ್‌ ವಿಸ್ತೃತ ಯೋಜನೆಗಾಗಿ ನಾಲ್ಕನೇ ಹಂತದ ಭೂಸ್ವಾಧೀನದಲ್ಲಿ 446.05 ಎಕರೆ ಜಾಗಕ್ಕೆ 28(1)ಅಧಿಸೂಚನೆ ಆಗಿದೆ. ಆ ವ್ಯಾಪ್ತಿಯಲ್ಲಿ ಕುಡಿಯಾನ, ನಿಡ್ಡೇಲ್‌, ಶೇಣವ ಕೋಡಿ, ಬಲಿಪೆಗುರಿ, ತನ್ನಿಕೆರೆ, ಅಗ್ರದಕೋಡಿ, ಬಬ್ಬರಪಡ್ಪು, ಸುಬ್ಬರ ಕೋಡಿ, ಬೇಡೆಪದವು ಪ್ರದೇಶಗಳು ಬರುತ್ತವೆ. ಈ ಪ್ರದೇಶ ದಲ್ಲಿ ಕೆಲವರು ಜಾಗದ ಹಣ ಪಡೆದುಕೊಂಡಿದ್ದಾರೆ. ಕೆಲವರಿಗೆ ಇನ್ನೂ ಹಣ ಬಂದಿಲ್ಲ. ಈವರೆಗೂ ಯಾವುದೇ ಪುರ್ನವಸತಿ ಸಮಿತಿಯನ್ನು ಸರಕಾರ ರಚಿಸಿಲ್ಲ. ಪ್ಯಾಕೇಜ್‌ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. 5 ವರ್ಷಗಳಿಂದ ಇದೇ ಗೊಂದಲಗಳಿಗೆ ಕಾರಣವಾಗಿದೆ. ಈ ಅಧಿಸೂಚನೆಯಲ್ಲಿ ತನ್ನಿಕೆರೆ ರಸ್ತೆ, ಪೆಲತ್ತಡಿ ರಸ್ತೆ, ತೌಳವ ಮಠ ರಸ್ತೆ, ನಾಯಕ ಫಾರ್ಮ್ ರಸ್ತೆಗಳು ಭೂಸ್ವಾàಧಿನಕ್ಕೆ ಬರುತ್ತವೆ. ಇದರಿಂದ 2016ರಿಂದ ಈ ಪ್ರದೇಶಗಳು ಅಭಿವೃದ್ಧಿ ಕಂಡಿಲ್ಲ.

ಭೂಸ್ವಾಧೀನಗೊಂಡ ಪ್ರದೇಶಗಳು :

Advertisement

ಗಾಣದಮನೆ, ಪೆಲತ್ತಡಿ, ಮೋಂಟೊಗೋಳಿ, ನಿಡ್ಡೇಲ್‌, ಶಾಂತಳಿಕೆಯ ಸುಮಾರು 70 ಮನೆ ಗಳು ಭೂಸ್ವಾಧೀನಕ್ಕೆ ಅಧಿಸೂಚನೆ ಆಗದೆ ನಡುವೆ ಉಳಿದುಕೊಂಡಿವೆ. ಭೂಸ್ವಾಧೀನದಲ್ಲಿ ಬರುವ ಪೆಲತ್ತಡಿ ರಸ್ತೆ, ತೌಳವ ಮಠ ರಸ್ತೆಯೇ ಇದಕ್ಕೆ ಮುಖ್ಯರಸ್ತೆಯಾಗಿದೆ. ಈ ಪ್ರದೇಶದ ಅಭಿವೃದ್ಧಿ ಕಾರ್ಯ ಮಾಡಲು ಪಂಚಾಯತ್‌ಗೆ ತೊಡಕಾಗಿದೆ. ಮಾರ್ಗಗಳು ಕಚ್ಚಾ ರಸ್ತೆಗಳಾಗಿ ಉಳಿದಿವೆ. ಜನರಿಗೆ ಮೂಲಸೌಕರ್ಯ ಒದಗಿ ಸಲು ಮಾತ್ರ ಸಾಧ್ಯವಾಗಿದೆ. ರಸ್ತೆಗಳಿಗೆ ತೇಪೆ ಕಾರ್ಯ ಮಾತ್ರ ಮಾಡಲಾಗಿದೆ. ರಾಜ್ಯ ಸರಕಾರ ಭೂಸ್ವಾಧೀನ ಆದೇಶದಿಂದಾಗಿ ಸ್ಥಳೀಯವಾಗಿ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಸಾಧ್ಯವಾಗಿದೆ.

ಇತರ ಸಮಸ್ಯೆಗಳೇನು? :

  • ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಕ್ಕೆ ಹೆಚ್ಚಿನ ನೀರಿನ ಸೌಕರ್ಯನೀಡಲಾಗಿದೆ. ನಿಡ್ಡೇಲ್‌ಕೋಡಿಯಲ್ಲಿ ನೀರಿನ ಸಮಸ್ಯೆ ಇದೆ.
  • ಕುಂಟಪದವು, ಕಾಯರಕಟ್ಟೆ ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲ.
  • ಪೆರ್ಮುದೆ -ದೇವಸ್ಥಾನ ಕೋಡಿ, ಕಾಯರಕಟ್ಟೆ ರಸ್ತೆ ಸಂಚರಿಸುವ ಬಸ್‌ಬೇಕು. ಪೆರ್ಮುದೆಯ ಗಡಿ ಪ್ರದೇಶದಲ್ಲಿ ಹಾದು ಹೋಗುವ ಹುಣ್ಸೆಕಟ್ಟೆಯಿಂದ ಶಿಬರೂರು ರಸ್ತೆಯಿಂದ ಒಂದೇ ಸರಕಾರಿ ಬಸ್‌ ಓಡಾಟ ನಡೆಸುತ್ತಿದೆ.
  • 221 ನಿವೇಶನದ ಅರ್ಜಿಗಳು ಪಂ. ಬಂದಿವೆ. ಆದರೆ ಸರಕಾರಿ ಜಾಗ ಇಲ್ಲ. ಗೋಮಾಳಕ್ಕೆ ಜಾಗ ಇಲ್ಲ.
  • ಕುಂಟೆಪದವಿನಲ್ಲಿ ಶ್ಮಶಾನಕ್ಕೆ 1ಎಕರೆ, ತ್ಯಾಜ್ಯ ಘಟಕಕ್ಕೆ 2 ಎಕ್ರೆ ಜಾಗ ಕಾದಿರಿಸಲಾಗಿದೆ.
  • ತೆಂಕ ಎಕ್ಕಾರು ಉರ್ದು ಹಿ.ಪ್ರಾ. ಶಾಲೆಯ ಜಾಗ ಪೆರ್ಮುದೆ ಗ್ರಾಮಕ್ಕೆ ಬರುತ್ತದೆ. ತೆಂಕ ಎಕ್ಕಾರು ಹೆಸರು ಇರುವ ಕಾರಣ ಎಕ್ಕಾರು ಗ್ರಾ.ಪಂ. ಇದರ ಆಡಳಿತ ನೋಡಿಕೊಳ್ಳುತ್ತಿತ್ತು. ಚುನಾವಣೆ ಸಂದರ್ಭ ಎಕ್ಕಾರಿನ ಮತದಾನ ಕೇಂದ್ರಗಳು ಈ ಶಾಲೆ ಆಗಿತ್ತು. ಶಾಲಾ ಆವರಣಗೋಡೆ, ರಿಪೇರಿ ಕಾರ್ಯ ನರೇಗಾದಲ್ಲಿ ಮಾಡುವ ಬಗ್ಗೆ ಚಿಂತಿಸಿದಾಗ ಇದು ಪೆರ್ಮುದೆ ಗ್ರಾಮ ಪಂಚಾಯತ್‌ಗೆ ವ್ಯಾಪ್ತಿ ಎಂದು ಈಗ ತಿಳಿದುಬಂದಿದೆ.

 

 –ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next