ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಭಾರತದ ಆವಿಷ್ಕಾರಗಳು ಉತ್ತಮ ಪ್ರಮಾಣದಲ್ಲಿದ್ದು, ಆವಿಷ್ಕಾರಗಳು ದೇಶದ ಕೈಗಾರಿಕೆಗಳ ಬೆನ್ನೆಲುಬಾಗಿವೆ ಎಂದರೆ ತಪ್ಪಾಗಲಾರದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ “ಆವಿಷ್ಕಾರ ನಾವೀನ್ಯತೆ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆವಿಷ್ಕಾರಗಳು ಕೈಗಾರಿಕೆಗಳ ಪ್ರಗತಿ ಜತೆಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಿರುತ್ತವೆ. ಆದರೆ ಯಾವುದೇ ಆವಿಷ್ಕಾರವು ಮಾರುಕಟ್ಟೆ ಮತ್ತು ಸಾರ್ವಜನಿಕರಿಂದ ಸ್ವೀಕೃತ ರೀತಿಯಲ್ಲಿರಬೇಕಾದುದು ಬಹಳ ಮುಖ್ಯ ಎಂದು ತಿಳಿಸಿದರು.
ಟೊಯೊಟಾ ಕಿರ್ಲೋಸ್ಕರ್‌ನ ಉಪಾಧ್ಯಕ್ಷ ಶೇಖರ್ ವಿಶ್ವನಾಥ್ ಮಾತನಾಡಿ, ಪರಿಸರ ಮಾಲಿನ್ಯ ಪ್ರಮಾಣ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯುಚ್ಛಾಲಿತ ವಾಹನಗಳ ಬಳಕೆಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ದೇಶದ ಮೂರು ಪ್ರಮುಖ ನಗರಗಳು ವಿಶ್ವದ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿರುವುದು ಆತಂಕಕಾರಿ ಸಂಗತಿ.
ಸರ್ಕಾರಗಳು ಈಗಾಗಲೇ ವಿದ್ಯುತ್‌ಚ್ಛಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದ್ದು, ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕಿದೆ ಎಂದರು. ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್, ರಾಜ್ಯದಲ್ಲಿನ ಸಣ್ಣ, ಮಧ್ಯಮ ಕೈಗಾರಿಕೆಗಳು ಆವಿಷ್ಕಾರ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ತಲ್ಲಂ ಆರ್.ದ್ವಾರಕಾನಾಥ್, ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ತಂತ್ರಜ್ಞಾನ ಮತ್ತು ಆವಿಷ್ಕಾರ ಸಮಿತಿ ಅಧ್ಯಕ್ಷ ಉಮಾರೆಡ್ಡಿ ಉಪಸ್ಥಿತರಿದ್ದರು.