Advertisement
ತೀರ್ಥಹಳ್ಳಿ- ಕಲ್ಸಂಕ ರಾ.ಹೆ. 169(ಎ) ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡು ಎರಡು ವರ್ಷಗಳು ಕಳೆದಿದೆ. ಕಲ್ಸಂಕ -ಮಣಿಪಾಲ ರಸ್ತೆಯನ್ನು ಚತುಷ್ಪಥ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುತ್ತಿದೆ. ಗುತ್ತಿಗೆದಾರರ ಟೆಂಡರ್ ಅವಧಿ ಮುಕ್ತಾಯವಾಗುತ್ತಾ ಬಂದರೂ ಇಂದ್ರಾಳಿಯ ಕೊಂಕಣ ರೈಲ್ವೇಯ ಮೇಲ್ಸೇತುವೆ ಮಾತ್ರ ಹಳೆಯ ದ್ವಿಪಥದಲ್ಲಿ ವ್ಯವಸ್ಥೆಯಲ್ಲೇ ಇದೆ. ವೇಗವಾಗಿ ಬರುವ ವಾಹನಗಳು ಕೂಡಲೇ ಅಗಲ ಕಿರಿದಾಗುವ ಸೇತುವೆಗೆ ಹೊಂದಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.
ಎರಡು ದಶಕಗಳ ಹಿಂದಿನಿಂದಲೂ ಇಂದ್ರಾಳಿ ರೈಲ್ವೇ ಸೇತುವೆ ಯೋಜನೆ ನನೆಗುದಿಗೆ ಬಿದ್ದಿದೆ. ಮಣಿಪಾಲ- ಕಲ್ಸಂಕ ರಾಜ್ಯ ಹೆದ್ದಾರಿ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಇನ್ನೊಂದು ಸೇತುವೆ ನಿರ್ಮಿಸಲು ರೈಲ್ವೇ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಡುವೆ ಪತ್ರ ವ್ಯವಹಾರ ನಡೆದಿತ್ತು. ಆದರೆ ಸೇತುವೆ ನಿರ್ಮಾಣ ಕುರಿತು ಯಾವುದೇ ರೀತಿಯಾದ ಕೆಲಸವಾಗಿರಲಿಲ್ಲ. ಸಿ.ಆರ್. ವರದಿ ಸಲ್ಲಿಕೆ
ರಾಷ್ಟ್ರೀಯ ಹೆದ್ದಾರಿ 169(ಎ) ಇಂದ್ರಾಳಿ ರೈಲ್ವೇ ಬ್ರಿಡ್ಜ್ ವಿನ್ಯಾಸವನ್ನು ಐಐಟಿ ಮದ್ರಾಸ್ ಪರಿಶೀಲನೆ ನಡೆಸಿ, ಕೆಲ ತಿಂಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಎನ್‌ಒಸಿಯನ್ನು ನೀಡಲು ಕಮಿಷನರ್ ಆಫ್ ರೈಲ್ವೇಗೆ (ಸಿಆರ್) ಕಳುಹಿಸಲಾಗಿದೆ. ಈ ವರದಿಯನ್ನು ಸಂಪೂರ್ಣಪರಿಶೀಲಿಸಿದ ಬಳಿಕ ಇಲಾಖೆ ಸೇತುವೆಯನ್ನು ನಿರ್ಮಿಸಲು ಅನುಮತಿ ಸಿಗಲಿದೆ. ಕೊಂಕಣ ರೈಲ್ವೇಯಿಂದ ಈಗಾಗಲೇ ಸೇತುವೆ ನೀಲನಕಾಶೆ ಪರಿಶೀಲಿಸಿ ಅನುಮೋದನೆಗೆ ಕಮಿಷನರ್ ಆಫ್ ರೈಲ್ವೇಗೆ ಕಳುಹಿಸಲಾಗಿದೆ ಎಂದು ಕಾರವಾರದ ಕೊಂಕಣ ರೈಲ್ವೇಯ ಆರ್‌ಆರ್‌ಎಂ ನಿಖಂ ಅವರು ಹೇಳುತ್ತಾರೆ.
Related Articles
ಇಂದ್ರಾಳಿ ಸೇತುವೆ ಬಳಿ ಈ ಹಿಂದೆ ಹಾಕಲಾದ ಡಾಮರು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಜೆಲ್ಲಿ ಕಲ್ಲುಗಳು ಮೇಲೆ ಎದ್ದಿವೆ. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರವಾಹನಗಳು ಸ್ಕಿಡ್ ಆಗುತ್ತಿದ್ದು, ಸವಾರರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ. ಹೊಸ ಸೇತುವೆ ನಿರ್ಮಾಣವಾಗುವವರೆಗೂ ಹಳೆಯ ರಸ್ತೆಯನ್ನು ಸುಸ್ಥಿತಿಯಲ್ಲಿ ಇರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
ಶೀಘ್ರ ಕಾಮಗಾರಿ ಆರಂಭಕೊಂಕಣ ರೈಲ್ವೇ ಇಂದ್ರಾಳಿ ಸೇತುವೆ ನಿರ್ಮಾಣದ ವಿನ್ಯಾಸಕ್ಕೆ ಒಪ್ಪಿಗೆ ಸೂಚಿಸುವ ಕೊನೆಯ ಹಂತಕ್ಕೆ ಬಂದಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ.
– ಕೆ. ರಘುಪತಿ ಭಟ್, ಶಾಸಕ, ಉಡುಪಿ. ಮನವಿ ಸಲ್ಲಿಸಲಾಗಿದೆ
2017ರಲ್ಲಿ ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಅನುಮತಿ ಕೋರಿ ಕೊಂಕಣ ರೈಲ್ವೇಗೆ ಮನವಿ ಸಲ್ಲಿಸಿದ್ದೇವೆ. ಅವರ ಆದೇಶದಂತೆ ಸೇತುವೆ ನೀಲ ನಕಾಶೆಯಲ್ಲಿ 5 ಬಾರಿ ಬದಲಾವಣೆ ಮಾಡಲಾಗಿದೆ. ಆದೇಶ ಸಿಕ್ಕಿದ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ.
-ಮಂಜುನಾಥ್ ನಾಯಕ್, ರಾ.ಹೆ. ಪ್ರಾಧಿಕಾರ ಎಂಜಿನಿಯರ್.