Advertisement

ಇಂದ್ರಾಳಿ ಅಗ್ನಿ ಅವಘಡ: ಬೆಂಕಿ ನಿಯಂತ್ರಿಸಲು 3 ತಾಸು ಹೋರಾಟ

09:06 AM Jun 27, 2019 | Team Udayavani |

ಉಡುಪಿ: ಸುಟ್ಟು ಹೋಗಿರುವ ಬೈಕ್‌ಗಳು, ಬಿಡಿಭಾಗಗಳು, ಕುರ್ಚಿಗಳು, ಬೂದಿಯಾಗಿರುವ ಕಚೇರಿಯ ಇತರ ಸಾಮಗ್ರಿಗಳು, ಗಾಜಿನ ಚೂರುಗಳ ರಾಶಿ… ಕಡಿಮೆಯಾಗದ ಸುಟ್ಟ ವಾಸನೆ, ಕುತೂಹಲಿಗಳ ದಂಡು, ಎಲ್ಲ ಕಳೆದುಕೊಂಡಂಥ ನೋವಿನಲ್ಲಿ ಮಾಲಕರು, ಕೆಲಸಗಾರರು.

Advertisement

ಬೆಂಕಿ ಅವಘಡಕ್ಕೆ ತುತ್ತಾದ ಉಡುಪಿ- ಮಣಿಪಾಲ ರಸ್ತೆಯ ಇಂದ್ರಾಳಿಯ ಎಆರ್‌ಜೆ ಆರ್ಕೇಡ್‌ನ‌ಲ್ಲಿರುವ ಜೈದೇವ್‌ ಮೋಟಾರ್ ಶೋರೂಂನ ಒಳ-ಹೊರಗೆ ಸೋಮವಾರ ಬೆಳಗ್ಗೆ ಕಂಡುಬಂದ ನೋಟವಿದು. ನಗರವನ್ನೇ ಬೆಚ್ಚಿ ಬೀಳಿಸಿದ ಅಗ್ನಿ ಅವಘಡದ ಮರುದಿನವೂ ಶೋರೂಂ ಕಡೆಗೆ ಆಗಮಿಸಿ ವೀಕ್ಷಿಸುವ ಕುತೂಹಲಗಳ ಸಂಖ್ಯೆ ಹೆಚ್ಚಾಗಿಯೇ ಇತ್ತು. ಶೋರೂಂನ ಒಳಗಡೆ ಸಾರ್ವಜನಿಕರು ಹೋಗದಂತೆ ತಡೆ ಹಾಕಲಾಗಿತ್ತು.

ಎಸ್‌ಪಿ ನಿಶಾ ಜೇಮ್ಸ್‌, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಶೋರೂಂಗೆ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿ, ಮಾಲಕರಿಂದ ಹೇಳಿಕೆ ಪಡೆದುಕೊಂಡರು.

ಮಳೆ ಪ್ರಯೋಜನಕ್ಕೆ ಬರಲಿಲ್ಲ
ಅವಘಡ ನಡೆದ ಸುಮಾರು ಅರ್ಧ ತಾಸಿನಲ್ಲಿ ಮಳೆ ಸುರಿದಿದೆಯಾದರೂ ಅದು ಬೆಂಕಿ ನಂದಿಸಲು ನೆರವಾಗಲಿಲ್ಲ. ತೆರೆದ ಪ್ರದೇಶದಲ್ಲಿ ಬೆಂಕಿ ಆಗಿದ್ದರೆ ಮಳೆಯಿಂದ ಪ್ರಯೋಜನವಾಗುತ್ತಿತ್ತು ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿನಂದಿಸಲು ಪೆಟ್ರೋಲ್‌ ಪಂಪ್‌ ಸಿಬಂದಿ ಯತ್ನ
ಬೆಂಕಿ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಕೂಡಲೇ ಪಕ್ಕದ ಪೆಟ್ರೋಲ್‌ ಬಂಕ್‌ನ ಕಾರ್ಮಿಕರು ಅವರಲ್ಲಿದ್ದ 10 ಅಗ್ನಿಶಾಮಕ ಸಿಲಿಂಡರ್‌ಗಳ ಮೂಲಕ ಬೆಂಕಿ ನಂದಿಸಲು ಯತ್ನಿಸಿದ್ದರು. ಆದರೆ ಬೆಂಕಿ ಹೆಚ್ಚುತ್ತಲೇ ಹೋಯಿತು.

Advertisement

ಬಚಾವಾದ ಪೆಟ್ರೋಲ್‌ ಪಂಪ್‌
ಪಕ್ಕದಲ್ಲೇ ಇದ್ದ ಪೆಟ್ರೋಲ್‌ ಬಂಕ್‌ ಬೆಂಕಿ ಅವಘಡದಿಂದ ಪಾರಾಗಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ನೆಮ್ಮದಿಯನ್ನುಂಟು ಮಾಡಿದೆ. ಈ ಬಗ್ಗೆ ಸೋಮವಾರ ಬೆಳಗ್ಗೆ ಕೂಡ ಸಾರ್ವಜನಿಕರು ಸ್ಥಳದಲ್ಲಿ ಮಾತನಾಡಿಕೊಂಡರು. ಶೋರೂಂನ ಕಟ್ಟಡದ ತೀರಾ ಪಕ್ಕದಲ್ಲೇ ಇದ್ದ 20,000 ಲೀಟರ್‌ ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್‌ನ್ನು ಕಳೆದ 15 ದಿನಗಳ ಹಿಂದೆ ತೆರವು ಮಾಡಲಾಗಿತ್ತು.

ಪೆಟ್ರೋಲ್‌ ಬಂಕ್‌ನ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಆ
ಟ್ಯಾಂಕ್‌ನ್ನು ತೆಗೆಯಲಾಗಿತ್ತು. ಶೋರೂಂನ ಹಿಂಭಾಗದಲ್ಲಿ ಹಲವು ವಸತಿ ಸಂಕೀರ್ಣಗಳಿವೆ. ಬೆಂಕಿಯನ್ನು ನಿಯಂತ್ರಿಸಿದ ಪರಿಣಾಮ ಅದು ಇತರ ಕಟ್ಟಡಗಳಿಗೆ ವ್ಯಾಪಿಸಿಲ್ಲ. ಒಂದು ವೇಳೆ ಗಾಳಿ ಬಂದಿದ್ದರೆ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸುವ ಅಪಾಯವಿತ್ತು.

ಮತ್ತೆ ಚರ್ಚೆಗೆ ಗ್ರಾಸವಾದ ಕಟ್ಟಡ ನಿಯಮ
ಇಂದ್ರಾಳಿ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೂಮ್ಮೆ ಕಟ್ಟಡ ನಿರ್ಮಾಣ ನಿಯಮಗಳ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಿದೆ. ಅಗ್ನಿ ಅವಘಡ ತಡೆಯಲು/ ನಿಯಂತ್ರಿಸಲು/ ಕಾರ್ಯಾಚರಣೆಗೆ ಪೂರಕವಾಗಿ ಕಟ್ಟಡ ನಿರ್ಮಿಸಬೇಕೆಂಬ ನಿಯಮವನ್ನು ಕೆಲವು ಕಟ್ಟಡ ಮಾಲಕರು ಗಾಳಿಗೆ ತೂರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. 15 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಕಟ್ಟಡಗಳು ಕಟ್ಟಡದ ಸುತ್ತಲೂ ಕನಿಷ್ಠ 5 ಮೀಟರ್‌ ಅಗಲದ ಜಾಗವನ್ನು ಖಾಲಿ ಬಿಡಬೇಕು, ವೆಟ್‌ ರೈಸರ್‌ ಸಿಸ್ಟಂ ಅಳವಡಿಸಬೇಕು ಸೇರಿದಂತೆ ವಿವಿಧ ರೀತಿಯ ಸುರಕ್ಷಾ ನಿಯಮಗಳನ್ನು ಉಲ್ಲಂ ಸುತ್ತಿಲ್ಲ ಎನ್ನಲಾಗಿದೆ.

ಕಟ್ಟಡ ನಿಯಮ ಪಾಲನೆಯಾಗಲಿ
15 ಮೀಟರ್‌ವರೆಗಿನ ಎತ್ತರದ ಕಟ್ಟಡಗಳ ಸುತ್ತ ಕನಿಷ್ಠ 5 ಮೀಟರ್‌ ಅಗಲದ ಜಾಗ ಖಾಲಿ ಬಿಡಬೇಕು. ಅದಕ್ಕಿಂತ ಎತ್ತರದ ಕಟ್ಟಡಗಳು ಅವುಗಳ‌ ಎತ್ತರಕ್ಕೆ ಅನುಗುಣವಾಗಿ ಮೂರನೇ ಒಂದು ಭಾಗ ಜಾಗ ಖಾಲಿ ಬಿಡಬೇಕು. ಇಂದ್ರಾಳಿಯ ಜೈದೇವ್‌ ಶೋರೂಂನ ಕಟ್ಟಡದ ಮುಖ್ಯರಸ್ತೆಯ ಪಕ್ಕದಲ್ಲೇ ಇತ್ತು. ಇನ್ನೊಂದು ಭಾಗದಲ್ಲಿಯೂ ರಸ್ತೆ ಇತ್ತು. ಹಾಗಾಗಿ ಅಗ್ನಿಶಾಮಕ ಸಿಬಂದಿ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು. ಒಂದು ವೇಳೆ ಒಳಭಾಗದಲ್ಲಿ ರಸ್ತೆಯೇ ಇಲ್ಲದ ಸ್ಥಳದಲ್ಲಿ ಅವಘಡ ಸಂಭವಿಸಿದ್ದರೆ ನಿಯಂತ್ರಣ ಭಾರೀ ಕಷ್ಟವಾಗುತ್ತಿತ್ತು.
– ವಸಂತ್‌ ಕುಮಾರ್‌ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ

ಮೇಲ್ದರ್ಜೆಗೇರಲಿ
ಉಡುಪಿ-ಮಣಿಪಾಲ ನಗರ ಕಟ್ಟಡ ನಿರ್ಮಾಣದಲ್ಲಿ ಇತರೆ ಮಹಾನಗರಗಳಿಗಿಂತ ತುಂಬಾ ಹಿಂದೆ ಇಲ್ಲ. ಆದರೆ ಇದಕ್ಕೆ ಪೂರಕವಾಗಿ ಅಗ್ನಿಶಾಮಕ ದಳ ಮೇಲ್ದರ್ಜೆಗೇರಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಅಗ್ನಿಶಾಮಕ ದಳ ಹೊಂದಿರುವ ಅತ್ಯಾಧುನಿಕ ಸಲಕರಣೆಗಳು ಉಡುಪಿಯಲ್ಲಿಲ್ಲ. ಉಡುಪಿಯ ಅಗ್ನಿಶಾಮಕ ದಳವನ್ನು ಮೇಲ್ದರ್ಜೆಗೇರಿಸುವ, ಸಿಬಂದಿ ಸಂಖ್ಯೆ ಹೆಚ್ಚಿಸುವ ಆವಶ್ಯಕತೆ ಇದೆ. ಅಗ್ನಿ ಶಾಮಕ ನಿಯಮಗಳು ಸೇರಿದಂತೆ ಅಗತ್ಯ ಪರವಾನಿಗೆಗಳನ್ನು ಆಯಾ ಇಲಾಖೆಗಳಿಂದ ಪಡೆದ ಅನಂತರವೇ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುತ್ತದೆ. ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲು ಅವಕಾಶವಿದೆ.
-ಆನಂದ್‌ ಸಿ.ಕಲ್ಲೋಳಿಕರ್‌, ಆಯುಕ್ತರು ಉಡುಪಿ ನಗರಸಭೆ

ಕಾರ್ಯಾಚರಣೆ
ಅಗ್ನಿ ಅವಘಡದ ಮಾಹಿತಿ ಉಡುಪಿ ಅಗ್ನಿಶಾಮಕ ದಳಕ್ಕೆ ಮೊದಲು ಸಿಕ್ಕಿದ್ದು ರಾತ್ರಿ 9.50ರ ವೇಳೆಗೆ. ಕೂಡಲೇ ಒಂದು ಅಗ್ನಿಶಾಮಕ ವಾಹನದೊಂದಿಗೆ ತೆರಳಿದ ಸಿಬಂದಿ, ಅಧಿಕಾರಿಗಳು ಬೆಂಕಿಯ ಅಗಾಧತೆ ಕಂಡು ಇನ್ನೆರಡು ಅಗ್ನಿಶಮನ ವಾಹನಗಳನ್ನು ಕರೆಸಿಕೊಂಡರು. ಸುಮಾರು ಅರ್ಧ ತಾಸಿನಲ್ಲಿ ಬೆಂಕಿ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿತು. ತಡರಾತ್ರಿ 1 ಗಂಟೆಯವರೆಗೂ ಬೆಂಕಿಯನ್ನು ಪೂರ್ಣವಾಗಿ ನಂದಿಸುವ ಕೆಲಸ ನಡೆಸಿದರು. ಅಧಿಕಾರಿಗಳು ಸೇರಿದಂತೆ 20 ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next