ಕನ್ನಡದಲ್ಲಿ ಸುಮಾರು 9 ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈಗ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಇಲ್ಲಿಯವರೆಗೆ ಸ್ಯಾಂಡಲ್‌ವುಡ್ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಇಂದ್ರಜಿತ್ ಲಂಕೇಶ್, ಇದೇ ಮೊದಲ ಬಾರಿಗೆ ಹಾಲಿವುಡ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಹೌದು, ಆಸ್ಕರ್ ನಾಮ ನಿರ್ದೇಶಿತ ಖ್ಯಾತ ಹಾಲಿವುಡ್ ನಟಿಯ ಮಹಿಳಾ ಪ್ರಧಾನ ಚಿತ್ರಕ್ಕೆ ಇಂದ್ರಜಿತ್ ನಿರ್ದೇಶನ ಮಾಡಲಿದ್ದು, ಮೊರಾಕ್ಕೊದಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದೆಯಂತೆ.
ಈಗಾಗಲೇ ನಟ, ನಟಿಯರ ಆಯ್ಕೆಯಾಗಿದ್ದು, ಈ ಮೂಲಕ ಹಾಲಿವುಡ್ ಚಿತ್ರ ನಿರ್ದೇಶಿಸಿದ ಮೊಟ್ಟ ಮೊದಲ ಕನ್ನಡಿಗ ಎಂಬ ಹೆಮ್ಮೆಯನ್ನು ಮುಡಿಗೇರಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ ಇಂದ್ರಜಿತ್. ಇನ್ನು ಇಂಥದ್ದೊಂದು ಸಾಹಸಕ್ಕೆ ಅಣಿಯಾಗುತ್ತಿರುವುದರ ಬಗ್ಗೆ ಮಾತನಾಡುವ ಇಂದ್ರಜಿತ್ ಲಂಕೇಶ್, “ಈ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರು ಹಾಲಿವುಡ್‌ನವರೇ ಆಗಿರುತ್ತಾರೆ. ಮುಸ್ಲಿಂ ಸಮುದಾಯದಲ್ಲಿ ಇಂದಿಗೂ ಆಚರಣೆಯಲ್ಲಿರುವ ಸಂಪ್ರದಾಯವೊಂದು ಮುಸ್ಲಿಂ ಮಹಿಳೆಯರ ಬದುಕನ್ನು ನಲುಗಿಸುತ್ತಿದೆ.
ನಾನು ನಿರ್ದೇಶಿಸುತ್ತಿರುವ “ಶಕೀಲಾ’ ಚಿತ್ರವನ್ನು ನೋಡಿದ ತಂತ್ರಜ್ಞರೊಬ್ಬರು ಮುಸ್ಲಿಂ ಮಹಿಳೆಯರು ಅನುಭವಿಸುವ ನೋವಿನ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದರು. ಆ ಕಥೆಯನ್ನು ಮಹಿಳೆಯೊಬ್ಬರು ಬರೆದಿದ್ದಾರೆ. ಅದನ್ನು ಕೇಳಿದ ಬಳಿಕ ಅದೇ ಕಥೆಯನ್ನು ಚಿತ್ರ ಮಾಡುವ ಯೋಚನೆ ಬಂತು. ನಂತರ ಆ ಕಥೆಗೆ ತಕ್ಕಂತೆ ಚಿತ್ರಕಥೆ ಹೆಣೆಯಲಾಯಿತು. ಇದೊಂದು ಜಾಗತಿಕ ಕಥಾ ವಸ್ತುವಾಗಿರುವುದರಿಂದ, ಎಲ್ಲಾ ಕಡೆಗೂ ಅನ್ವಯವಾಗುತ್ತದೆ. ಹಾಗಾಗಿ ಇದನ್ನು ಇದನ್ನು ಹಾಲಿವುಡ್‌ನಲ್ಲಿ ನಿರ್ಮಿಸಿ ವಿಶ್ವದಾದ್ಯಂತ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ.
ಆದರೆ ತಮ್ಮ ಹೊಸ ಹಾಲಿವುಡ್ ಚಿತ್ರದ ಹೆಸರು, ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಗುಟ್ಟು ಬಿಟ್ಟುಕೊಡದ ಇಂದ್ರಜಿತ್ ಲಂಕೇಶ್, “ಶೀಘ್ರದಲ್ಲಿಯೇ ಈ ಚಿತ್ರದ ಕೆಲಸಕ್ಕಾಗಿ ಲಾಸ್ ಏಂಜಲೀಸ್‌ಗೆ ತೆರಳಲಿದ್ದು, ಅಲ್ಲಿಯೇ ಚಿತ್ರದ ಹೆಸರು ನಟ, ನಟಿಯರು, ತಂತ್ರಜ್ಞರ ಕುರಿತು ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತೇನೆ’ ಎಂದಿದ್ದಾರೆ. ಅಂದಹಾಗೆ, ಸದ್ಯ ಇಂದ್ರಜಿತ್ ಲಂಕೇಶ್ ನಿರ್ದೇಶನದ “ಶಕೀಲಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ಸೆನ್ಸಾರ್ ಮಂಡಳಿಯ ಮುಂದಿದೆ. ಸೆನ್ಸಾರ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ “ಶಕೀಲಾ’ ಚಿತ್ರದ ಪ್ರಚಾರ ಕಾರ್ಯ ಶುರುವಾಗಲಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳ ಅಂತ್ಯಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.