ಕುಕನೂರ: ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ ಎಂದು ತಾಲೂಕ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವುಕುಮಾರ ನಾಗಲಾಪುರ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಶಾಖಾಮಠದಲ್ಲಿ ವರುಣನ ಕೃಪೆಗಾಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಬಯಲಾಟ ಸಂಘದಿಂದ ಹಮ್ಮಿಕೊಂಡ ಇಂದ್ರಜಿತ್ ಕಾಳಗ ಎಂಬ ಬಯಲಾಟ ಮತ್ತು ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.
ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಪರಿಸರ ಪರಿವೀಕ್ಷಣೆಯಿಂದ ಅನುಕರಣೆಯಿಂದ ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂದ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದಿವೆ. ಮಳೆಗಾಗಿ ಬಯಲಾಟ ಆಡುವ ಮೂಲಕ ಶ್ರೀ ಅನ್ನದಾನೀಶ್ವರ ಬಯಲಾಟ ಕಲಾವಿದರ ಕಾರ್ಯ ಶ್ಲಾಘನೀಯವಾದದ್ದು. ಇಂತಹ ಕಾರ್ಯಕ್ಕೆ ಶ್ರೀಮಠದ ಪೂಜ್ಯರ ಮಾರ್ಗದರ್ಶನವೇ ಪ್ರೇರಣೆ ಎಂದರು.
ಹಿರಿಯರಾದ ಲಕ್ಷ್ಮಣ ಬೆದವಟ್ಟಿ ಮಾತನಾಡಿ, ಕುಕನೂರ ಹಿರಿಯ ಕಲಾವಿದರು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೆ ಆದ ಅಪಾರ ಕೊಡಗೆ ನೀಡಿದ್ದಾರೆ. ಅದರ ಹಾದಿಯಲ್ಲಿ ಅನ್ನದಾನೀಶ್ವರ ಬಯಲಾಟ ಸಂಘದವರು ನಡೆಯುತ್ತಿರುವುದು ಕುಕನೂರು ಪಟ್ಟಣಕ್ಕೆ ಹೆಮ್ಮೆಯ ವಿಷಯ ಎಂದರು.
ನೇತೃತ್ವ ವಹಿಸಿ ಮಾತನಾಡಿದ ಶ್ರೀ ಮಹಾದೇವ ದೇವರು, ಪ್ರಾಚೀನ ಕಲೆಯನ್ನು ಮಳೆಗಾಗಿ ಪ್ರದರ್ಶನ ಮಾಡುವ ಮೂಲಕ ಇಲ್ಲಿಯ ಕಲಾವಿದರು ಕಲೆಯನ್ನು ಉಳಿಸುವ ಕಾರ್ಯದ ಜೊತೆಗೆ ರೈತರ ಬದುಕನ್ನ ಹಸನಮಾಡುವ ಕಾರ್ಯ ಮಾಡಿದ್ದಾರೆ ಎಂದರು.
ಹಿರಿಯ ಕಲಾವಿದರಾದ ಕಳಕಪ್ಪ ಬೋರಣ್ಣನವರ, ರಾಮಣ್ಣ ಬಾರಕೇರ, ಹನುಮಂತಪ್ಪ ಹೊರಗಿನಮನಿ,ಲಕ್ಷ್ಮಣ ಬೆದವಟ್ಟಿ , ಯಲ್ಲಪ್ಪ ಚುಕ್ಕನಕಲ್ಲ ಅವರನ್ನ ಸನ್ಮಾನಿಸಲಾಯಿತು. ಮಹಾಂತೇಶ ಹೂಗಾರ ಮಾತನಾಡಿದರು. ಪಪಂ ಸದಸ್ಯ ಅಡವಿ ಬಸವರಾಜ ನಿರೂಪಿಸಿದರು.
ಹಿರಿಯರಾದ ಕಾಶೀಂಸಾಬ್ ತಲಕಲ್, ಗದಿಗೆಪ್ಪ ಪವಾಡಶೆಟ್ಟಿ, ಪಪಂ ಸದಸ್ಯ ಹನುಮಂತ ಹಂಪನಾಳ, ಪ್ರಶಾಂತ ಕಲ್ಮಠ, ಸಿದ್ದಣ್ಣ ಉಳಾಗಡ್ಡಿ, ಸಿದ್ದಲಿಂಗಯ್ಯ ಬಂಡಿಮಠ, ಶೇಖಪ್ಪ ಶಿರೂರ, ಲಕ್ಷ ್ಮಣ ಕಾಳಿ, ರಾಮಣ್ಣ ಬೆದವಟ್ಟಿ, ಚನ್ನಪ್ಪ ಅಂಡಿ, ನಾಗಪ್ಪ ಬಡಿಗೇರ, ಈರಪ್ಪ ಕೂಡ್ಲೂರು, ಜಗದೀಶಯ್ಯ ಕಳ್ಳಿಮಠ ಮತ್ತು ಇಟಗಿ ಗ್ರಾಮದ ಕಲಾವಿದರು ಪಾಲ್ಗೊಂಡಿದ್ದರು.