Advertisement

ಇಂದ್ರಧನುಷ್‌ ಸಪ್ತಾಹ ಶಿಸ್ತುಬದ್ಧ ನಡೆಸಿ

11:30 AM May 19, 2018 | |

ಬೀದರ: ಗ್ರಾಮ ಸ್ವರಾಜ್ಯ ಯೋಜನೆಯಡಿ ತೀವ್ರಗೊಂಡ ಇಂದ್ರಧನುಷ್‌ ಲಸಿಕಾ ಸಪ್ತಾಹ ಅಭಿಯಾನವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ| ಅನಿರುದ್ಧ ಶ್ರವಣ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

Advertisement

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಅಭಿಯಾನವು ಜಿಲ್ಲೆಯಲ್ಲಿ ಶಿಸ್ತುಬದ್ಧವಾಗಿ ನಡೆಯಬೇಕು. ಜಿಲ್ಲೆಯಲ್ಲಿ ಗುರುತಿಸಿದ ಆಯಾ ತಾಲೂಕಿನ ಹಳ್ಳಿಗಳಿಗೆ ಸಂಬಂಧಿಸಿದ ಕಾರ್ಯಕ್ರಮದ ಅಧಿಕಾರಿಗಳು ಕೂಡಲೇ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು. ಈ ಸಾರ್ವತ್ರಿಕ ಲಸಿಕೆಯು ಗುರುತಿಸಿದ ಎಲ್ಲ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಿಲ್ಲೆಯಲ್ಲಿ ಮೇ 23, 25 ಹಾಗೂ 26, ಜೂನ್‌ 20, 22 ಹಾಗೂ 23ರಂದು ಮತ್ತು ಜುಲೈ 18, 20 ಹಾಗೂ 21ನೇ ದಿನಾಂಕಗಳಂದು ಈ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಹಂತದ ಸರ್ಕಾರಿ ಆಸ್ಪತ್ರೆಗಳು ಮತ್ತು ಉಪ ಕೇಂದ್ರಗಳಲ್ಲಿ ಉಚಿತವಾಗಿ ಈ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಇಂದ್ರಧನುಷ್‌ ಅಭಿಯಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ಡಾ| ಅನಿಲ್‌ಕುಮಾರ ತಾಳಿಕೋಟಿ ಅವರು, ಈ ಅಭಿಯಾನವು ದೇಶದ 28 ರಾಜ್ಯಗಳಲ್ಲಿನ 530 ಜಿಲ್ಲೆಗಳಲ್ಲಿ ನಡೆಯುತ್ತಿದೆ. 

ಕರ್ನಾಟಕದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ 28 ಜಿಲ್ಲೆಗಳ 625 ಹಳ್ಳಿಗಳಲ್ಲಿ ನಡೆಯಲಿದೆ. ಔರಾದ್‌ ತಾಲೂಕಿನ 10 ಹಳ್ಳಿಗಳಲ್ಲಿ, ಬಸವಕಲ್ಯಾಣ ತಾಲೂಕಿನಲ್ಲಿ 7 ಹಳ್ಳಿಗಳಲ್ಲಿ, ಭಾಲ್ಕಿ ತಾಲೂಕಿನಲ್ಲಿ ಎರಡು ಹಳ್ಳಿಗಳಲ್ಲಿ, ಬೀದರ ತಾಲೂಕಿನಲ್ಲಿ 5 ಹಳ್ಳಿಗಳಲ್ಲಿ, ಹುಮನಾಬಾದ್‌ ತಾಲೂಕಿನಲ್ಲಿ 2 ಹಳ್ಳಿಗಳು ಸೇರಿ ಜಿಲ್ಲೆಯ ಒಟ್ಟು 26 ಹಳ್ಳಿಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಎ.ಜಬ್ಟಾರ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಈ ಅಭಿಯಾನಕ್ಕೆ ಸಹಕಾರ ನೀಡಲಿವೆ ಎಂದು ತಿಳಿಸಿದರು.

Advertisement

ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ| ಆರ್‌.ಸೆಲ್ವಮಣಿ, ಪೌರಾಯುಕ್ತ ಮನೋಹರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣ ಪಾಂಚಾಳ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉಮೇಶ,
ವೈದ್ಯಾಧಿಕಾರಿಗಳಾದ ಡಾ| ಅನಿಲ್‌ ಚಿಂತಾಮಣಿ, ಡಾ| ರಾಜಶೇಖರ ಪಾಟೀಲ, ಡಾ| ಶಿವಶಂಕರ ಬಿ., ತಾಪಂ ಅಧಿಕಾರಿಗಳು, ಆರೋಗ್ಯ ಅಧಿ ಕಾರಿಗಳು, ತಾಲೂಕು ಕ್ಷೇತ್ರ ಶಿಕ್ಷಣಾಧಿ ಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಬ್ರಿಮ್ಸ್‌ ಅಧಿಕಾರಿಗಳು ಹಾಗೂ ಇತರರು ಇದ್ದರು.

ಇಂದ್ರಧನುಷ್‌ ಅಭಿಯಾನದಲ್ಲಿ ಗರ್ಭಿಣಿಯರಿಗೆ ಟಿಟಿ ಲಸಿಕೆ (ಧನುರ್ವಾಯು), ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಪೊಲೀಯೋ, ದಡಾರ ಮತ್ತು ರುಬೆಲ್ಲಾ ಪ್ರತ್ಯೇಕ ಲಸಿಕೆ ಹಾಗೂ ಡಿಪಿಟಿ, ಹೆಪಟೈಟಿಸ್‌ ಬಿ., ಇನ್ಲುಯೆಂಜಾ ಬಿ ಸೇರಿರುವ ಪೆಂಟಾವೆಲೆಂಟ್‌ ಹಾಗೂ 5ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ ಲಸಿಕೆ ನೀಡಲಾಗುತ್ತದೆ.
 ಡಾ| ರವೀಂದ್ರ ಸಿರಸಗಿ ಕಾರ್ಯಕ್ರಮ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next