Advertisement

ಪುರಾಣ ಕತೆ: ಇಂದ್ರಪೂಜೆ

09:56 AM Jun 01, 2017 | |

ಒಮ್ಮೆ ಬೃಂದಾವನದಲ್ಲಿ ಒಂದು ಉತ್ಸವಕ್ಕೆ ಸಡಗರದಿಂದ ಸಿದ್ಧತೆಗಳಾಗುತ್ತಿದ್ದುದನ್ನು ಕೃಷ್ಣನು ಕಂಡ. ತನ್ನ ತಂದೆ ನಂದನನ್ನು “ಅಪ್ಪ ಯಾವ ಉತ್ಸವಕ್ಕೆ ಈ ಎಲ್ಲಾ ಸಡಗರ?’ ಎಂದು ಕೇಳಿದ. ನಂದನು “ಮಗೂ ಈ ಸಿದ್ಧತೆ ಎಲ್ಲ ಇಂದ್ರಪೂಜೆಗಾಗಿ. ಇಂದ್ರನು ನಮಗೆ ಕಾಲಕಾಲಕ್ಕೆ ಮಳೆಯನ್ನು ಸುರಿಸುವುದರಿಂದ ನಮಗೆ ಹುಲ್ಲು ಬೆಳೆಗಳು ಎಲ್ಲ ಲಭ್ಯವಾಗುತ್ತದೆ. ಆದುದರಿಂದ ಪ್ರತಿ ವರ್ಷವೂ ಇಂದ್ರಪೂಜೆಯನ್ನು ಮಾಡುತ್ತೇವೆ’ ಎಂದು ವಿವರಿಸಿದ.

Advertisement

ಕೃಷ್ಣನು “ಅಪ್ಪಾ ನಾವು ಇಂದ್ರನನ್ನು ಪೂಜಿಸಬೇಕು ಎಂದು ನನಗೆ ತೋರುವುದಿಲ್ಲ. ನಾವು ಮಾಡುವ ಕರ್ಮವು ಫ‌ಲವನ್ನು ಕೊಡುತ್ತದೆ. ನಮ್ಮ ಕಾರ್ಯಕ್ಕೆ ಸರಿಯಾಗಿ ಪ್ರತಿಫ‌ಲ. ಹಾಗೆಯೇ ಇಂದ್ರನೂ ಅ ಮಳೆಯನ್ನು ಸುರಿಸುವುದು. ನಿಜವಾಗಿ ನಮಗೆ ಉಪಕಾರವಾಗುವುದು ಕಾಡು, ಬೆಟ್ಟಗಳಿಂದ ಗೋವುಗಳಿಂದ. ನಾವು ಗೊಲ್ಲರು. ಕಾಡು ಬೆಟ್ಟಗಳಲ್ಲಿ ವಾಸ ಮಾಡುತ್ತೇವೆ. ನಮ್ಮ ಬದುಕಿಗೆ ಗೋವುಗಳೇ ಆಧಾರ. ಆದುದರಿಂದ ನಾವು ಕಾಡು, ಬೆಟ್ಟಗಳನ್ನು ಗೋವುಗಳನ್ನು ಪೂಜಿಸಬೇಕು.’ ಎಂದ. ನಂದನಿಗೂ ಈ ಮಾತು ಸರಿ ಎನಿಸಿತು. ಆ ವರ್ಷ ಗೋವರ್ಧನ ಗಿರಿಗೂ ಗೋವುಗಳಿಗೂ ಪೂಜೆ ಸಲ್ಲಿಸಬೇಕೆಂದು ತೀರ್ಮಾನಿಸಲಾಯಿತು. ಹೀಗೆ ಇಂದ್ರಪೂಜೆಯ ಬದಲು ಗೋವರ್ಧನ ಪೂಜೆ ನಡೆಯಿತು. ಉತ್ಸವವು ಬಹು ಸಂಭ್ರಮದಿಂದ ಜರುಗಿತು. ಗೋಪಾಲರು ಭಕ್ತಿಯಿಂದ ಗೋವರ್ಧನ ಗಿರಿಗೆ ಮತ್ತು ಗೋವುಗಳಿಗೆ ಪೂಜೆ ಮಾಡಿದರು. 

ಇಂದ್ರನಿಗೆ ಇದರಿಂದ ಕೋಪ ಬಂದಿತು. ತನಗೆ ಪೂಜೆ ತಪ್ಪಿತು ಪೂಜೆಯನ್ನು ತಪ್ಪಿಸಿದವನು ಏಳು ವರ್ಷದ ಹುಡುಗ. ಇವನ ಮಾತನ್ನು ಕೇಳಿ ಬೃಂದಾವನದವರು ತನಗೆ ಅಪಮಾನ ಮಾಡಿದರು. ಇಂದ್ರನು ಮೋಡಗಳಿಗೆ ಬೃಂದಾವನದ ಮೇಲೆ ಭಯಂಕರವಾದ ಮಳೆಯನ್ನು ಸುರಿಸುವಂತೆ ಅಪ್ಪಣೆ ಮಾಡಿದ. ಭೀಕರವಾದ ಮಳೆ ಪ್ರಾರಂಭವಾಯಿತು. ಗೋವುಗಳೆಲ್ಲ ನೆನೆದು ಗಡಗಡ ನಡುಗಿದವು. ಮಳೆಯ ಜೊತೆಗೆ ಭಯಂಕರ ಬಿರುಗಾಳಿ. ಎಲ್ಲರೂ ಕೃಷ್ಣನ ಮೊರೆ ಹೊಕ್ಕರು. ಇದು ಕೋಪಗೊಂಡ ಇಂದ್ರನ ಕೃತ್ಯ ಎಂದು ಕೃಷ್ಣನಿಗೆ ಅರ್ಥವಾಯಿತು. ಅವನು ಗೋವರ್ಧನಗಿರಿಯನ್ನೇ ತನ್ನ ಬೆರಳಲ್ಲಿ ಎತ್ತಿಹಿಡಿದ. ಅದೇ ಗೊಲ್ಲರಿಗೆ ಕೊಡೆಯಾಯಿತು. ಜನರು, ಗೋವುಗಳು, ಎಲ್ಲರೂ ಬೆಟ್ಟದ ಕೆಳಗೆ ಆಶ್ರಯ ಪಡೆದರು. ಇಂದ್ರನು ಮಳೆಯನ್ನು ಸುರಿಸಿಯೇ ಸುರಿಸಿದ. ಆದರೆ ಬೃಂದಾವನದಲ್ಲಿ ಕೆಲಸ ಕಾರ್ಯಗಳು ಎಂದಿನಂತೆ ಸಾಗಿದ್ದವು. 

ಇಂದ್ರನಿಗೆ ಜಾnನೋದಯವಾಯಿತು. ನಾಚಿಕೆಯಾಯಿತು. ಸ್ವರ್ಗದಿಂದ ಇಳಿದು ಬಂದು ಕೃಷ್ಣನ ಕ್ಷಮೆ ಕೇಳಿದ. 

ಎಲ್‌. ಎಸ್‌. ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಪುಸ್ತಕದಿಂದ)

Advertisement
Advertisement

Udayavani is now on Telegram. Click here to join our channel and stay updated with the latest news.

Next