Advertisement
ಒಂದು ದಿನದ ಹಿಂದಷ್ಟೇ ಕಟಕ್ ಪಂದ್ಯ ಏಕಪಕ್ಷೀಯವಾಗಿ ಸಾಗಿದ್ದನ್ನು ಕಂಡಾಗ ಇಂದೋರ್‌ನಲ್ಲೂ ಟೀಮ್ ಇಂಡಿಯಾದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಬುಧವಾರ “ಬಾರಾಬತಿ ಸ್ಟೇಡಿಯಂ’ನಲ್ಲಿ ಆತಿಥೇಯ ಪಡೆ ಸರ್ವಾಂಗೀಣ ಪ್ರದರ್ಶನದ ಮೂಲಕ ಚುಟುಕು ಕ್ರಿಕೆಟಿನ ರೋಮಾಂಚನವನ್ನೆಲ್ಲ ಉಣಬಡಿಸಿತ್ತು. ಭಾರತ ಕೇವಲ 3 ವಿಕೆಟ್ ಕಳೆದುಕೊಂಡು 180 ರನ್ ಪೇರಿಸಿದರೆ, ಶ್ರೀಲಂಕಾ ಘಾತಕ ದಾಳಿಗೆ ಸಿಲುಕಿ 16 ಓವರ್‌ಗಳಲ್ಲಿ ಬರೀ 87 ರನ್ನಿಗೆ ಗಂಟುಮೂಟೆ ಕಟ್ಟಿತ್ತು. ಭಾರತದ ಗೆಲುವಿನ ಅಂತರ 93 ರನ್. ಇದು ಟಿ20 ಇತಿಹಾಸದಲ್ಲಿ ಭಾರತ ರನ್ ಅಂತರದಲ್ಲಿ ಸಾಧಿಸಿದ ಅತೀ ದೊಡ್ಡ ಗೆಲುವು. 2012ರ ವಿಶ್ವಕಪ್‌ನಲ್ಲಿ ಇಂಗ್ಲೆಂಡನ್ನು 90 ರನ್ನುಗಳಿಂದ ಮಣಿಸಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಹಾಗೆಯೇ ಶ್ರೀಲಂಕಾ ಅನುಭವಿಸಿದ ಬೃಹತ್ ಸೋಲು ಕೂಡ ಇದಾಗಿದೆ. ಕಳೆದ ವರ್ಷ ಪಲ್ಲೆಕಿಲೆಯಲ್ಲಿ ಆಸ್ಟ್ರೇಲಿಯದ ಕೈಯಲ್ಲಿ 85 ರನ್ನುಗಳಿಂದ ಸೋತ “ದಾಖಲೆ’ ಮುರಿಯಲ್ಪಟ್ಟಿತು.
ಕೊಹ್ಲಿ, ಧವನ್, ಭುವನೇಶ್ವರ್ ಗೈರಲ್ಲಿ ಕಟಕ್‌ನಲ್ಲಿ ಮೆರೆದಾಡಿದ್ದು ಭಾರತದ ಆತ್ಮವಿಶ್ವಾಸಕ್ಕೆ ಸಾಕ್ಷಿ. ರಾಹುಲ್, ರೋಹಿತ್, ಅಯ್ಯರ್, ಧೋನಿ, ಪಾಂಡೆ ಸೇರಿಕೊಂಡು ಲಂಕಾ ಬೌಲಿಂಗನ್ನು ಲೆಕ್ಕಕ್ಕಿಲ್ಲದಂತೆ ಮಾಡಿದರು. ಇನ್ನೊಂದೆಡೆ ಆತಿಥೇಯರ ದಾಳಿಗೆ ಲಂಕಾ ಬಳಿ ಉತ್ತರವೇ ಇರಲಿಲ್ಲ. ಮುಖ್ಯವಾಗಿ ಸ್ಪಿನ್ನರ್‌ಗಳಾದ ಚಾಹಲ್ (23ಕ್ಕೆ 4), ಕುಲದೀಪ್ (18ಕ್ಕೆ 2) ಅವರನ್ನು ಎದುರಿಸುವಲ್ಲಿ ಪ್ರವಾಸಿಗರು ಪೂರ್ತಿಯಾಗಿ ಎಡವಿದರು. ಪಾಂಡ್ಯ ಕೂಡ ಬೌಲಿಂಗ್ ಪರಾಕ್ರಮ ಮೆರೆದರು (29ಕ್ಕೆ 3). ಸಾಕಷ್ಟು ಮಂದಿ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳಿದ್ದರೂ ಲಂಕೆಗೆ ಫೈಟ್ ನೀಡಲಾಗಲಿಲ್ಲ. ಈ ಒತ್ತಡದಿಂದ ಒಮ್ಮೆಲೇ ಮೈಕೊಡವಿಕೊಂಡು ನಿಲ್ಲು ವುದು ಸುಲಭವಲ್ಲ. ಜತೆಗೆ, ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಇನ್ನೊಂದು ಒತ್ತಡವೂ ಪೆರೆರ ಪಡೆಯ ಮೇಲಿದೆ. ಭಾರತ ಈ ಪಂದ್ಯಕ್ಕಾಗಿ ವಿಜೇತ ಬಳಗವನ್ನೇ ಕಣ ಕ್ಕಿಳಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸಬರಾದ ಬಾಸಿಲ್ ಥಂಪಿ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಂಭವ ಇಲ್ಲ. ಲಂಕಾ ಬಲಹೀನ ಬೌಲಿಂಗ್
ಶ್ರೀಲಂಕಾದ ಬ್ಯಾಟಿಂಗ್ ಶಕ್ತಿ ಕಡಿಮೆಯೇನಲ್ಲ. ತರಂಗ, ಡಿಕ್ವೆಲ್ಲ, ಮ್ಯಾಥ್ಯೂಸ್, ಪೆರೆರ ಅವರಂಥ ಉತ್ತಮ ದರ್ಜೆಯ ಆಟಗಾರರು ತಂಡದಲ್ಲಿದ್ದಾರೆ. ಇವರಲ್ಲಿ ಇಬ್ಬರಾದರೂ ಸಿಡಿದು ನಿಂತರೆ ಇಂದೋರ್ ಪಂದ್ಯದಲ್ಲಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಆದರೆ ಪ್ರವಾಸಿಗರ ಬೌಲಿಂಗ್ ಮೇಲೆ ಭರವಸೆ ಸಾಲದು. ಚಮೀರ, ಪೆರೆರ, ಪ್ರದೀಪ್, ವಿಶ್ವ ಫೆರ್ನಾಂಡೊ, ಧನಂಜಯ ಅವರೆಲ್ಲ ಕಟಕ್‌ನಲ್ಲಿ ಭಾರೀ ದುಬಾರಿಯಾಗಿದ್ದರು. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದರೆ ಭಾರತ ಮತ್ತೂಮ್ಮೆ ದೊಡ್ಡ ಮೊತ್ತ ಪೇರಿಸುವ ಬಗ್ಗೆ ಅನುಮಾನವಿಲ್ಲ.
Related Articles
ಭಾರತ: ರೋಹಿತ್ ಶರ್ಮ (ನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಧೋನಿ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಜೈದೇವ್ ಉನದ್ಕತ್, ಯಜುವೇಂದ್ರ ಚಾಹಲ್.
Advertisement
ಶ್ರೀಲಂಕಾ: ನಿರೋಷನ್ ಡಿಕ್ವೆಲ್ಲ, ಉಪುಲ್ ತರಂಗ, ಕುಸಲ್ ಪೆರೆರ, ಮ್ಯಾಥ್ಯೂಸ್, ಅಸೇಲ ಗುಣರತ್ನೆ, ದಸುನ್ ಶಣಕ, ತಿಸರ ಪೆರೆರ (ನಾಯಕ), ಅಖೀಲ ಧನಂಜಯ, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೊ, ನುವಾನ್ ಪ್ರದೀಪ್.