Advertisement

ಇಂದೋರ್‌ ಟೆಸ್ಟ್‌; ಭಾರತವೇ ಫೇವರಿಟ್‌

11:59 PM Nov 13, 2019 | sudhir |

ಇಂದೋರ್‌: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು ವಶಪಡಿಸಿಕೊಂಡ ಖುಷಿಯಲ್ಲಿರುವ ಭಾರತವಿನ್ನು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಹೋರಾಟಕ್ಕೆ ಇಳಿಯಲಿದೆ. ಇಲ್ಲಿನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಗುರು ವಾರದಿಂದ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದ್ದು, ಮುಂದಿನ ಹಗಲು-ರಾತ್ರಿ ಐತಿಹಾಸಿಕ ಟೆಸ್ಟ್‌ ಪಂದ್ಯಕ್ಕೊಂದು ದಿಕ್ಸೂಚಿ ಆಗಲಿದೆ.

Advertisement

ಇದು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿಯ ಭಾಗವಾಗಿದ್ದು, ಈಗಾಗಲೇ ಐದೂ ಟೆಸ್ಟ್‌ ಗೆದ್ದು 240 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ಇನ್ನಷ್ಟು ಮೇಲೇರಲು ಈ ಸರಣಿ ನೆರವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಇದು ಬಾಂಗ್ಲಾದೇಶ ಪಾಲಿಗೆ ವಿಶ್ವ ಟೆಸ್ಟ್‌ ಕೂಟದ ಮೊದಲ ಪಂದ್ಯವಾಗಲಿದೆ.

“ರೆಡ್‌ ಚೆರ್ರಿ’ ಬಣ್ಣದ ಚೆಂಡಿನಲ್ಲಿ ನಡೆಯುವ ಈ ಮುಖಾಮುಖೀ ಈಡನ್‌ ಗಾರ್ಡನ್ಸ್‌ನ “ಪಿಂಕ್‌ ಬಾಲ್‌’ ಸಮರದ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದಿದೆ. 1-0 ಮುನ್ನಡೆಯೊಂದಿಗೆ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವುದು ಟೀಮ್‌ ಇಂಡಿಯಾದ ಗುರಿ.

ಟೀಮ್‌ ಇಂಡಿಯಾ 12ರ ಬಳಗ
ತವರಿನಲ್ಲಿ ಆಡಿದ ಕೊನೆಯ ಟೆಸ್ಟ್‌ ಸರಣಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ 3-0 ವೈಟ್‌ವಾಶ್‌ ಮಾಡಿ ಕಳುಹಿಸಿದ ಭಾರತ ಈ ಸರಣಿಯಲ್ಲೂ ನೆಚ್ಚಿನ ತಂಡವೆಂಬುದರಲ್ಲಿ ಅನುಮಾನವಿಲ್ಲ. ಹರಿಣಗಳ ಪಡೆ ಭಾರತದ ಸ್ಪಿನ್‌ ದಾಳಿಗೆ ತತ್ತರಿಸಿ ಮಕಾಡೆ ಮಲಗಿತ್ತು. ಜತೆಗೆ ಭಾರತದ ವೇಗದ ಬೌಲಿಂಗ್‌ ವಿಭಾಗ ಕೂಡ ಎಂದಿಗಿಂತ ಹೆಚ್ಚು ಹರಿತವಾಗಿತ್ತು. ಇದೇ ಬೌಲಿಂಗ್‌ ಪಡೆ ಈಗ ಬಾಂಗ್ಲಾವನ್ನೂ ಹಣಿಯುವ ಯೋಜನೆಯಲ್ಲಿದೆ. ಆದರೆ ಆಫ್ರಿಕಾಕ್ಕೆ ಹೋಲಿಸಿದರೆ ಬಾಂಗ್ಲಾ ಬ್ಯಾಟ್ಸ್‌ ಮನ್‌ಗಳು ಸ್ಪಿನ್‌ ಎಸೆತಗಳನ್ನು ಹೆಚ್ಚು ಭರವಸೆಯಿಂದ ಎದುರಿಸಬಹುದು ಎಂಬುದೊಂದು ಲೆಕ್ಕಾಚಾರ.

ಈಗಾಗಲೇ 12ರ ಬಳಗವನ್ನು ಹೆಸರಿಸಿರುವ ಭಾರತ, ತ್ರಿವಳಿ ವೇಗಿಗಳನ್ನು ದಾಳಿಗಿಳಿಸುವ ಸೂಚನೆ ನೀಡಿದೆ. ಆಗ ಶಮಿ, ಯಾದವ್‌, ಇಶಾಂತ್‌ ಅವಕಾಶ ಪಡೆಯುತ್ತಾರೆ. ಸ್ಪಿನ್‌ ವಿಭಾಗದಲ್ಲಿ ಅಶ್ವಿ‌ನ್‌, ಜಡೇಜ ಇರುತ್ತಾರೆ. ಇಬ್ಬರೂ ಆಲ್‌ರೌಂಡರ್ ಆಗಿರುವುದರಿಂದ ಲಾಭ ಹೆಚ್ಚು. ಕುಲದೀಪ್‌ ಯಾದವ್‌ ಆಡುವ ಬಳಗ ದಿಂದ ಹೊರಗುಳಿಯಬೇಕಾಗುತ್ತದೆ.

Advertisement

ಕಾಡಲಿದೆ ತಮಿಮ್‌, ಶಕಿಬ್‌ ಗೈರು
ಆರಂಭಕಾರ ತಮಿಮ್‌ ಇಕ್ಬಾಲ್‌ ಮತ್ತು ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಗೈರಿನಿಂದ ಬಾಂಗ್ಲಾಕ್ಕೆ ಭಾರೀ ಹೊಡೆತ ಬಿದ್ದಿದೆ.

ಟಿ20 ಸರಣಿಯಲ್ಲಿ ಇಂಥ ಪರಿಸ್ಥಿತಿಯನ್ನು ಹೇಗೂ ನಿಭಾಯಿಸ ಬಹುದು, ಆದರೆ 5 ದಿನಗಳ ಕಾಲ ನಿಂತು ಆಡಬೇಕಾದ ಟೆಸ್ಟ್‌ ಪಂದ್ಯಗಳಲ್ಲಿ ಅನುಭವಿಗಳ ಅನು ಪಸ್ಥಿತಿ ಸಹಜವಾಗಿಯೇ ಆತಂಕ ತಂದೊಡ್ಡುತ್ತದೆ. ಹೀಗಾಗಿ ಮುಶ್ಫಿಕರ್‌ ರಹೀಂ, ಮಹಮದುಲ್ಲ ರಿಯಾದ್‌, ನಾಯಕ ಮೊಮಿನುಲ್‌ ಹಕ್‌ ಮೇಲೆ ಹೆಚ್ಚಿನ ಭಾರ ಬೀಳುವುದು ಖಂಡಿತ.

ಭಾರತವನ್ನು ತಡೆಯಲಾದೀತೇ?
ಭಾರತದ ತ್ರಿವಳಿಗಳಾದ ವಿರಾಟ್‌ ಕೊಹ್ಲಿ (26), ಚೇತೇಶ್ವರ್‌ ಪೂಜಾರ (18) ಮತ್ತು ಅಜಿಂಕ್ಯ ರಹಾನೆ (11) ಸೇರಿಕೊಂಡು ಬರೋಬ್ಬರಿ 55 ಶತಕ ದಾಖಲಿಸಿದ್ದಾರೆ. ರೋಹಿತ್‌ ಶರ್ಮ, ಮಾಯಾಂಕ್‌ ಅಗರ್ವಾಲ್‌ ಕೂಡ ಸಲೀಸಾಗಿ ಮೂರಂಕೆಯ ಗಡಿ ದಾಟುತ್ತಿದ್ದಾರೆ.

ಇವರನ್ನು ತಡೆಯುವುದು ಮುಸ್ತಫಿಜುರ್‌ ರಹಮಾನ್‌, ತೈಜುಲ್‌ ಇಸ್ಲಾಮ್‌, ಮೆಹಿದಿ ಹಸನ್‌ ಮಿರಾಜ್‌ ಪಾಲಿಗೆ ಖಂಡಿತ ಸುಲಭವಲ್ಲ. ಅಲ್ಲದೆ ಇಂದೋರ್‌ ಟ್ರ್ಯಾಕ್‌ “ಬ್ಯಾಟಿಂಗ್‌ ಸ್ವರ್ಗ’ ಎನಿಸಿರುವುದರಿಂದ ಪ್ರಚಂಡ ಫಾರ್ಮ್ನಲ್ಲಿರುವ ಭಾರತದ ಆಟಗಾರರಿಗೆ ಬಂಪರ್‌ ಆಗಿ ಪರಿಣಮಿಸುವುದು ಖಂಡಿತ.

ಟೆಸ್ಟ್‌ ಪಂದ್ಯವನ್ನು ಗೆಲ್ಲಲು ಬೇಕಾಗಿರುವುದು ಎರಡೇ ಅರ್ಹತೆ- ನಿಂತು ಆಡುವುದು, ಎದುರಾಳಿಯ ಇಪ್ಪತ್ತೂ ವಿಕೆಟ್‌ಗಳನ್ನು ಹಾರಿಸುವುದು. ಭಾರತದ ಈ ಸಾಮರ್ಥ್ಯಕ್ಕೆ ಬಾಂಗ್ಲಾ ಸಾಟಿಯಾಗದು ಎಂದು ಭಾವಿಸ ಬಹುದಾದರೂ, ಮೊಮಿನುಲ್‌ ಪಡೆ ಅಪಾಯಕಾರಿ ಎಂಬುದನ್ನು ಮಾತ್ರ ಮರೆಯುವಂತಿಲ್ಲ.

ಭಾರತಕ್ಕೆ ಒಲಿದಿತ್ತು 321 ರನ್‌ ಪ್ರಚಂಡ ಗೆಲುವು
ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಈವರೆಗೆ ನಡೆದದ್ದು ಒಂದೇ ಟೆಸ್ಟ್‌ ಪಂದ್ಯ. 2016ರ ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯ 3ನೇ ಪಂದ್ಯವನ್ನು ಇಲ್ಲಿ ಆಡಲಾಗಿತ್ತು. ಇದನ್ನು ವಿರಾಟ್‌ ಕೊಹ್ಲಿ ಪಡೆ 321 ರನ್ನುಗಳ ಭಾರೀ ಅಂತರದಿಂದ ಗೆದ್ದು ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡದ್ದು ಈಗ ಇತಿಹಾಸ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತದ ನಾಯಕ ವಿರಾಟ್‌ ಕೊಹ್ಲಿ ಅವರ ದ್ವಿಶತಕ (211), ಅಜಿಂಕ್ಯ ರಹಾನೆ ಅವರ ಶತಕ ಸಾಹಸದಿಂದ (188) 5ಕ್ಕೆ 557 ರನ್‌ ರಾಶಿ ಹಾಕಿತ್ತು. ಇವರಿಬ್ಬರ ಜತೆಯಾಟದಲ್ಲಿ 365 ರನ್‌ ಹರಿದು ಬಂದಿತ್ತು. ನ್ಯೂಜಿಲ್ಯಾಂಡ್‌ ಗಳಿಸಿದ್ದು 299 ರನ್‌ ಮಾತ್ರ. ಅಶ್ವಿ‌ನ್‌ 6 ವಿಕೆಟ್‌ ಹಾರಿಸಿ ಕಿವೀಸ್‌ಗೆ ಕಂಟಕವಾಗಿ ಪರಿಣಮಿಸಿದರು.

ದ್ವಿತೀಯ ಸರದಿಯಲ್ಲಿ ಚೇತೇಶ್ವರ್‌ ಪೂಜಾರ ಶತಕ ಹೊಡೆದರು (ಅಜೇಯ 101). ಭಾರತ 3ಕ್ಕೆ 216 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಗೆಲುವಿಗೆ 474 ರನ್‌ ಗುರಿ ಪಡೆದ ನ್ಯೂಜಿಲ್ಯಾಂಡ್‌ ಮತ್ತೆ ಅಶ್ವಿ‌ನ್‌ ದಾಳಿಗೆ ಸಿಲುಕಿ 153ಕ್ಕೆ ಕುಸಿಯಿತು. ಅಶ್ವಿ‌ನ್‌ 59 ರನ್‌ ವೆಚ್ಚದಲ್ಲಿ 7 ವಿಕೆಟ್‌ ಉಡಾಯಿಸಿದರು. ಪಂದ್ಯಶ್ರೇಷ್ಠ ಗೌರವವೂ ಅವರಿಗೆ ಒಲಿದು ಬಂತು.

ಇಂದೋರ್‌ನಲ್ಲಿ ಭುವನೇಶ್ವರ್‌ ಅಭ್ಯಾಸ
ಕಳೆದ ಕೆಲವು ತಿಂಗಳಿಂದ ಫಿಟ್‌ನೆಸ್‌ ಸಮಸ್ಯೆ ಅನುಭವಿಸುತ್ತಲೇ ಇರುವ ಭಾರತದ ಪ್ರಮುಖ ಬೌಲರ್‌ ಭುವನೇಶ್ವರ್‌ ಕುಮಾರ್‌ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದಾರೆ. ಆದರೆ ದೈಹಿಕ ಕ್ಷಮತೆಯನ್ನು ಮರಳಿ ಗಳಿಸುವ ಸಲುವಾಗಿ ಅವರು ಟೀಮ್‌ ಇಂಡಿಯಾ ಸದಸ್ಯರೊಂದಿಗೆ ಇಂದೋರ್‌ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂತು.

“ಇದು ಭುವನೇಶ್ವರ್‌ ಪಾಲಿಗೆ ಕೌಶಲ ಪರೀಕ್ಷೆ ಆಗಿದೆ. ಅವರು ಆದಷ್ಟು ಬೇಗ ಭಾರತ ತಂಡವನ್ನು ಕೂಡಿಕೊಳ್ಳಬೇಕೆಂಬುದೇ ಇದರ ಉದ್ದೇಶ…’ ಎಂದು ತಂಡದ ಮೂಲವೊಂದು ಹೇಳಿದೆ.

ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಮಾರ್ಗದರ್ಶನದಲ್ಲಿ ಕ್ಯಾಚಿಂಗ್‌ ಅಭ್ಯಾಸ ನಡೆಸಿದ ಭುವಿ, ಪೂರ್ತಿ ರನ್‌ಅಪ್‌ ಮೂಲಕ ಕೆಲವು ಎಸೆತಗಳನ್ನೂ ಹಾಕಿದರು. ಫಿಸಿಯೋ ನಿತಿನ್‌ ಪಟೇಲ್‌, ಟ್ರೇನರ್‌ ನಿಕ್‌ ವೆಬ್‌ ಕೂಡ ಭುವನೇಶ್ವರ್‌ ಅವರ ದೈಹಿಕ ಕ್ಷಮತೆಯನ್ನು ಕೂಲಂಕಷವಾಗಿ ಗಮನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next