ಹೊಸದಿಲ್ಲಿ : ಕೇಂದ್ರ ಸರಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಪ್ರಶಸ್ತಿಗಳನ್ನು ಗುರುವಾರ ಪ್ರದಾನ ಮಾಡಲಾಗಿದ್ದು ಇಂದೋರ್ ಮತ್ತು ಸೂರತ್ ದೇಶದ ‘ಸ್ವಚ್ಛ ನಗರಗಳು’ ಎಂದು ಜಂಟಿಯಾಗಿ ಗುರುತಿಸಲ್ಪಟ್ಟಿದ್ದು, ನವಿ ಮುಂಬೈ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.
ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್ 2023’ ರಲ್ಲಿ ‘ಉತ್ತಮ ಪ್ರದರ್ಶನ ನೀಡುವ ರಾಜ್ಯಗಳ’ ವಿಭಾಗದಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ನಂತರದ ಸ್ಥಾನದಲ್ಲಿದೆ. ಇಂದೋರ್ ಸತತ ಏಳನೇ ಬಾರಿಗೆ ಸ್ವಚ್ಛ ನಗರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಕೇಂದ್ರಗಳಿಗೆ ಮಹಾರಾಷ್ಟ್ರದ ಸಾಸ್ವಾಡ್ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಛತ್ತೀಸ್‌ಗಢದ ಪಟಾನ್ ಮತ್ತು ಮಹಾರಾಷ್ಟ್ರದ ಲೋನಾವ್ಲಾ ಈ ವಿಭಾಗದಲ್ಲಿ ಎರಡನೇ ಮತ್ತು ಮೂರನೇ ಸ್ವಚ್ಛ ನಗರಗಳಾಗಿವೆ. ವಾರಾಣಸಿ ಮತ್ತು ಪ್ರಯಾಗ್‌ರಾಜ್‌ಗಳು ಸ್ವಚ್ಛವಾದ ಗಂಗಾ ಪಟ್ಟಣಗಳೆಂದು ಗುರುತಿಸಲ್ಪಟ್ಟಿವೆ. ಮಧ್ಯಪ್ರದೇಶದ MHOW ಕಂಟೋನ್ಮೆಂಟ್ ಬೋರ್ಡ್‌ಗೆ ಸ್ವಚ್ಛವಾದ ಕಂಟೋನ್ಮೆಂಟ್ ಪಟ್ಟಣ ಎಂಬ ಪ್ರಶಸ್ತಿಯನ್ನು ನೀಡಲಾಯಿತು.
2016 ರಿಂದ ಸ್ವಚ್ಛ ಭಾರತ್ ಅರ್ಬನ್ ಮಿಷನ್ ಅಡಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ನಡೆಸುತ್ತಿರುವ ಸ್ವಚ್ಛ ಸರ್ವೇಕ್ಷಣ್, ಇದು ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಮತ್ತು ಸ್ವಚ್ಛತೆಯ ಸಮೀಕ್ಷೆಯಾಗಿದೆ. ಈ ವರ್ಷ, ಇದು ಎಂಟನೇ ವರ್ಷದ ಸಮೀಕ್ಷೆಯಾಗಿದ್ದು, ಒಟ್ಟು 3,000 ಮೌಲ್ಯಮಾಪಕರು 46 ಸೂಚಕಗಳಲ್ಲಿ 4,500 ಕ್ಕೂ ಹೆಚ್ಚು ನಗರಗಳ ಮೌಲ್ಯಮಾಪನವನ್ನು ನಡೆಸಿದ್ದರು.