ಭೋಪಾಲ್: ಇದೊಂದು ಹುಬ್ಬೇರಿಸುವಂತಹ ಪ್ರಕರಣ…ಹೌದು ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ)ಯನ್ನೇ ಮನೆಯೊಳಗೆ ಕೂಡಿ ಹಾಕಿ ಕಳ್ಳತನ ಮಾಡಿರುವ ಘಟನೆ ಶನಿವಾರ ಬೆಳಗ್ಗಿನ ಜಾವ ಇಂಧೋರ್ ನಲ್ಲಿ ನಡೆದಿದೆ.
ಇಂಧೋರ್ ನ ಬಂಗಾಂಗ್ ಪ್ರದೇಶದಲ್ಲಿರುವ ಎಂಪಿಇಬಿ ಕಾಲೋನಿಯಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ರಾಜೌರಿ ಅವರ ಮನೆಗೆ ಶನಿವಾರ ಬೆಳಗ್ಗಿನ ಜಾವ 2.30ರ ಹೊತ್ತಿಗೆ ನಾಲ್ವರು ವ್ಯಕ್ತಿಗಳು ಬಂದಿದ್ದರು.
ಅವರಲ್ಲಿ ಇಬ್ಬರು ಮನೆ ಕಿಟಕಿಯ ಕಬ್ಬಿಣದ ಜಾಲರಿಯನ್ನು ಕತ್ತರಿಸಿ ಒಳಗೆ ಬಂದಿದ್ದು, ಇಬ್ಬರು ಮನೆಯ ಹೊರಗೆ ಕಾವಲು ಕಾಯಲು ನಿಂತಿದ್ದರು! ಒಳಗೆ ಬಂದವರು ಮೊದಲು ಹಿಂಬಾಗಿಲನ್ನು ತೆರೆದಿಟ್ಟಿದ್ದರು. ತದನಂತರ ಒಂದು ಕೋಣೆಯಲ್ಲಿ ರಾಜೌರಿ ಅವರ ತಾಯಿ, ತಂಗಿ ಹಾಗೂ ಇಬ್ಬರು ಮಕ್ಕಳು ಮಲಗಿರುವುದನ್ನು ಪತ್ತೆಹಚ್ಚಿದ್ದರು.
ನಂತರ ಎಸ್ಪಿ ರಾಜೌರಿ ಅವರು ಮಲಗಿದ್ದ ಕೋಣೆಯ ಹೊರಗಿನಿಂದ ಲಾಕ್ ಮಾಡಿದ್ದರು. ಇದಾದ ಮೇಲೆ ಕಳ್ಳರಿಬ್ಬರು ಎಸ್ಪಿ ಅವರ ತಂಗಿ ಮಲಗಿದ್ದ ಕೋಣೆಗೆ ತೆರಳಿ ಎಲ್ಲಾ ಜಾಲಾಡಿದ್ದರು. ಅಲ್ಲಿ ಅವರಿಗೆ ಏನೂ ಸಿಗಲಿಲ್ಲವಾಗಿತ್ತು. ಪಕ್ಕದಲ್ಲೇ ನೇತು ಹಾಕಿದ್ದ ಪ್ಯಾಂಟ್ ಪರ್ಸ್ ನೊಳಗಿದ್ದ ಹಣ ಮತ್ತು ಡೆಬಿಟ್ ಕಾರ್ಡ್ ಗಳನ್ನು ತೆಗೆದುಕೊಂಡಿದ್ದರು. ಆ ವೇಳೆ ಮನೆಯಲ್ಲಿ ಏನೋ ನಡೆಯುತ್ತಿದೆ ಎಂಬುದು ಎಸ್ಪಿಯವರಿಗೆ ಅನ್ನಿಸತೊಡಗಿ, ರೂಂನಿಂದ ಹೊರಗೆ ಬರಲು ಯತ್ನಿಸಿದಾಗ ಹೊರಗಿನಿಂದ ಲಾಕ್ ಮಾಡಿರುವುದು ಗೊತ್ತಾಗುತ್ತದೆ.
ಅಂತೂ ಕೊನೆಗೂ ಎಸ್ಪಿಯವರು ತಮ್ಮ ತಾಯಿ ಹಾಗೂ ಸಹೋದರಿಯನ್ನು ಮೊಬೈಲ್ ನಲ್ಲೇ ಸಂಪರ್ಕಿಸಿ ವಿಷಯ ತಿಳಿಸಿ ಎಚ್ಚರಿಸುತ್ತಾರೆ. ಜೊತೆಗೆ ಪೊಲೀಸರಿಗೂ ಮಾಹಿತಿ ನೀಡುತ್ತಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು, ಇದನ್ನು ಅರಿತ ಕಳ್ಳರು ಓಡಿ ಹೋಗಿದ್ದರು. ಆದರೆ ಅದರೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ನಾಲ್ವರಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಬಂಗಾಂಗ್ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಅಧಿಕಾರಿ ತಾರೇಶ್ ಸೋನಿ ತಿಳಿಸಿದ್ದಾರೆ.