ಇಂದೋರ್: ನೂರು ರೂಪಾಯಿ ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿಯೇ ಇಬ್ಬರು ಕೂಲಿಯಾಳುಗಳನ್ನು ಪೊಲೀಸರೇ ಹೊಡೆದುಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಇದೀಗ ನೂರು ರೂ. ಲಂಚ ಕೊಡಲಿಲ್ಲ ಎಂದು ಮೊಟ್ಟೆ ಮಾರುತ್ತಿದ್ದ ಹುಡುಗನೊಬ್ಬನ ತಳ್ಳು ಗಾಡಿಯನ್ನು ದೂಡಿ ಅದರಲ್ಲಿದ್ದ ಮೊಟ್ಟೆಯಲ್ಲಾ ಒಡೆದು ಹೋಗಿರುವ ಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈಗಾಗಲೇ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿರುವಂತೆ, ತಳ್ಳು ಗಾಡಿಯಲ್ಲಿ ಮೊಟ್ಟೆ ಮಾರುತ್ತಿದ್ದ 14 ವರ್ಷದ ಹುಡುಗನಿಗೆ ಬೆಳಗ್ಗೆ ಪುರಸಭೆ ಅಧಿಕಾರಿಗಳು ಬಂದು ಗಾಡಿಯನ್ನು ತೆಗೆಯುವಂತೆ ಎಚ್ಚರಿಕೆ ನೀಡಿದ್ದರು. ಇಲ್ಲದಿದ್ದರೆ ನೂರು ರೂಪಾಯಿ ಲಂಚ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಹುಡುಗ ಅದಕ್ಕೆ ಒಪ್ಪದಿದ್ದಾಗ ಅಧಿಕಾರಿಗಳು ಗಾಡಿಯನ್ನು ಬುಡಮೇಲು ಮಾಡಿದ್ದರು. ಇದರಿಂದಾಗಿ ಎಲ್ಲಾ ಮೊಟ್ಟೆಗಳು ಒಡೆದು ಹೋಗಿದ್ದವು ಎಂದು ಹುಡುಗ ಆರೋಪಿಸಿದ್ದಾನೆ.
ಕೋವಿಡ್ 19 ವೈರಸ್ ನಿಂದಾಗಿ ದಿನಂಪ್ರತಿ ಮೊಟ್ಟೆ ವ್ಯಾಪಾರವೂ ಕಡಿಮೆಯಾಗಿದೆ. ಇದೀಗ ಪುರಸಭೆ ಅಧಿಕಾರಿಗಳು ಮೊಟ್ಟೆ ಒಡೆದು ಹಾಕಿದ್ದರಿಂದ ಮತ್ತಷ್ಟು ಆರ್ಥಿಕ ಹೊರೆ ಬಿದ್ದಂತಾಗಿದೆ ಎಂದು ಹುಡುಗ ಅಳಲು ತೋಡಿಕೊಂಡಿರುವುದಾಗಿ ವರದಿ ಹೇಳಿದೆ.
ಮೊಟ್ಟೆ ಗಾಡಿಯನ್ನು ಬುಡಮೇಲು ಮಾಡಿ ಮೊಟ್ಟೆಯನ್ನು ಒಡೆದು ಹಾಕಿರುವ ಈ ವಿಡಿಯೋ ಎಲ್ಲೆಡೆ ಹರಿದಾಡುವ ಮೂಲಕ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ.