ಹುಬ್ಬಳ್ಳಿ: ನಗರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾ ಸಮುಚ್ಛಯ ನಿರ್ಮಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹು-ಧಾ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಮುಕ್ತಾಯಗೊಂಡ ಈಜುಗೊಳ, ಸ್ಮಾರ್ಟ್ ಹೆಲ್ತ್, ಸ್ಮಾರ್ಟ್ ಕ್ಲಾಸ್ ಯೋಜನೆಗಳ ಉದ್ಘಾಟನೆ ಹಾಗೂ ಬೆಂಗೇರಿ ಮಾರುಕಟ್ಟೆ ನಿರ್ಮಾಣ, ಉಣಕಲ್ ಮಾರುಕಟ್ಟೆ ನಿರ್ಮಾಣ, ಬಹುವಾಹನ ನಿಲುಗಡೆ ಯೋಜನೆ, ಸ್ಮಾರ್ಟ್‌ಸಿಟಿ ಕಾಮಗಾರಿ ಪ್ಯಾಕೇಜ್, ಪುಟಾಣಿ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಾಗಲೇ ನಗರದ ಹೊರವಲಯದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ 11 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುತ್ಛಯ ನಿರ್ಮಾಣಗೊಳ್ಳಬೇಕಿದ್ದು, ಅದಕ್ಕೆ ಇನ್ನೂ 90 ಕೋಟಿ ರೂ. ಅನುದಾನ ನೀಡಿ ವಿವಿಧ ಕ್ರೀಡಾ ಸೌಲಭ್ಯಗಳನ್ನು ಹೊಂದಿದ ಮಾದರಿ ಕ್ರೀಡಾ ಸಮುಚ್ಛಯ ನಿರ್ಮಿಸಲಾಗುವುದು. ಇದೇ ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಲಿದ್ದು, 3-4 ತಿಂಗಳುಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಧಾರವಾಡದಲ್ಲಿ 15 ಕೋಟಿ ವೆಚ್ಚದಲ್ಲಿ ಈಜುಗೊಳ ನವೀಕರಣ ಹಾಗೂ ಕ್ರೀಡಾ ಸಮುತ್ಛಯ ನಿರ್ಮಾಣ ನಡೆಯುತ್ತಿದೆ. ಆದರೆ ಇನ್ನೂ 15 ಕೋಟಿ ರೂ. ನೀಡಿ ಒಟ್ಟು 30 ಕೋಟಿ ರೂ. ವೆಚ್ಚದಲ್ಲಿ ಉತ್ತಮ ಕ್ರೀಡಾ ಸಮುಚ್ಛಯ ನಿರ್ಮಿಸಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅನುದಾನದಡಿ ನೆರವು ನೀಡಲು ಹಲವು ಕಂಪನಿಗಳು ಮುಂದೆ ಬಂದಿದ್ದು, ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಹಿಂದಿನ ಸರಕಾರದಲ್ಲಿ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಈಗ ಚಾಲನೆ ನೀಡಲಾಗಿದೆ. ಕೇಂದ್ರ ಸರಕಾರ ಅಗತ್ಯ ಅನುದಾನ ನೀಡುತ್ತಿರುವುದರಿಂದ ಮೂಲಸೌಕರ್ಯಗಳ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಹಲವು ದಿನಗಳ ನಂತರ ಈಜುಗೊಳ ನವೀಕರಣಗೊಂಡಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಅನುಕೂಲತೆ ಕಲ್ಪಿಸಿಕೊಡಬೇಕು ಎಂದು ಸೂಚನೆ ನೀಡಿದರು. ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಪಾಲಿಕೆ ಮಾಜಿ ಸದಸ್ಯರಾದ ವೀರಣ್ಣ ಸವಡಿ, ಸುಧೀರ ಸರಾಫ, ರಾಜಣ್ಣ ಕೊರವಿ, ಡಿ.ಕೆ. ಚವ್ಹಾಣ, ಮಹೇಶ ಬುರ್ಲಿ, ಶಿವು ಮೆಣಸಿನಕಾಯಿ, ಶಿವಾನಂದ ಮುತ್ತಣ್ಣವರ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಇದ್ದರು.
3.03 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆಯ ಈಜುಗೊಳ ನವೀಕರಿಸಲಾಗಿದೆ. ಚಿಟಗುಪ್ಪಿ ಆಸ್ಪತ್ರೆಯಲ್ಲಿ 3.06 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಹೆಲ್ತ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಲ್ಯಾಮಿಂಗ್ಟನ್ ಶಾಲೆಯಲ್ಲಿ 1.17 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸ್ಕೂಲ್ ಯೋಜನೆ ಅನುಷ್ಠಾನ ಮಾಡಲಾಗಿದೆ. ಬೆಂಗೇರಿ ಮಾರುಕಟ್ಟೆಯನ್ನು 6.08 ಕೋಟಿ ಹಾಗೂ ಉಣಕಲ್ ಮಾರುಕಟ್ಟೆಯನ್ನು 2.09 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
–ಶಕೀಲ್ ಅಹ್ಮದ್, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ