ಜಕಾರ್ತಾ: ಜಕಾರ್ತಾದಿಂದ ಪ್ಯಾಂಕಾಲ್ ಪಿನಾಂಗ್ ಗೆ 188 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲಯನ್ ಏರ್ ಫ್ಲೈಟ್ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ ಸಮುದ್ರದಲ್ಲಿ ಪತನಗೊಂಡಿದ್ದು, ಇಂಡೋನೇಷ್ಯಾ ವಿಮಾನ ಪೈಲಟ್ ಆಗಿದ್ದವರು ದೆಹಲಿ ನಿವಾಸಿ ಭಾವಯೈ ಸುನೇಜಾ(31) ಅವರು. ಏಳು ವರ್ಷದ ಹಿಂದೆ ಸುನೇಜಾ ಅವರು ಇಂಡೋನೇಷ್ಯಾ ಏರ್ ಲೈನ್ಸ್ ಸಂಸ್ಥೆಗೆ ಸೇರಿದ್ದರು.
ಇಂಡೋನೇಷ್ಯಾ ವಿಮಾನದ ಕ್ಯಾಪ್ಟನ್ ಆಗಿದ್ದದ್ದು ಸುನೇಜಾ ಹಾಗೂ ಸಹ ಪೈಲಟ್ ಹಾರ್ವಿನೋ ಸೇರಿದಂತೆ ಇತರ ಆರು ಮಂದಿ ವಿಮಾನದಲ್ಲಿದ್ದರು. 31ರ ಹರೆಯದ ಕ್ಯಾಪ್ಟನ್ ಸುನೇಜಾ ಅವರು ಆರು ಸಾವಿರ ಗಂಟೆಗಳ ಕಾಲ ವಿಮಾನದ ಪೈಲಟ್ ಆಗಿ ಅನುಭವ ಹೊಂದಿದ್ದರೆ, ಸಹ ಪೈಲಟ್ ಹಾರ್ವಿನೋ 5 ಸಾವಿರ ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ್ದ ಅನುಭವ ಹೊಂದಿದ್ದರು ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 188ಪ್ರಯಾಣಿಕರಿದ್ದ ಇಂಡೋನೇಶ್ಯ ಲಯನ್ ಏರ್ ಫ್ಲೈಟ್ ಸಮುದ್ರದಲ್ಲಿ ಪತನ
ಭಾವಯೈ ಅವರು ದೆಹಲಿಯ ಮಯೂರ್ ವಿಹಾರ್ ನಿವಾಸಿ. 2011ರಲ್ಲಿ ಲಯನ್ ಏರ್ ಸಂಸ್ಥೆಯನ್ನು ಸೇರ್ಪಡೆಗೊಂಡಿದ್ದರು. ಸುನೇಜಾ ಅವರು 737 ಏರ್ ಬೋಯಿಂಗ್ ಹಾರಾಟ ನಡೆಸಿದ್ದರು. 2016ರಲ್ಲಿ ಕ್ಯಾಪ್ಟನ್ ಆಗಿ ಭಡ್ತಿ ಪಡೆದಿದ್ದರು. ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಸುನೇಜಾ ಅವರು, ಅಧಿಕಾರಿಗಳ ಬಳಿ ತನಗೆ ದೆಹಲಿಗೆ ವರ್ಗಾಯಿಸಿ ಎಂದು ಕೇಳಿಕೊಂಡಿದ್ದರಂತೆ. ಆದರೆ ವಿಧಿ ವಿಪರ್ಯಾಸ ಸುನೇಜಾ ಅವರ ಕನಸು ಭಗ್ನಗೊಂಡಂತಾಗಿದೆ.
ಇಂಡೋನೇಷ್ಯಾ ವಿಮಾನ ಸಮುದ್ರದಲ್ಲಿ ಪತನಗೊಂಡು 30ರಿಂದ 40 ಮೀಟರ್ ಆಳಕ್ಕೆ ಮುಳುಗಿತ್ತು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಡೈರೆಕ್ಟರೇಟ್ ಜನರಲ್ ಸಿಂಧು ಅವರು ನೀಡಿದ ಮಾಹಿತಿ ಪ್ರಕಾರ, ವಿಮಾನದಲ್ಲಿ 178 ವಯಸ್ಕ ಪ್ರಯಾಣಿಕರು, ಒಂದು ಮಗು ಮತ್ತು ಎರಡು ಪುಟ್ಟ ಕಂದಮ್ಮಗಳು, ಇಬ್ಬರು ಪೈಲಟ್, ಐದು ವಿಮಾನದ ಸಿಬ್ಬಂದಿಗಳು ಮುಳುಗಿ ಹೋಗಿರುವುದಾಗಿ ತಿಳಿಸಿದ್ದಾರೆ.