Advertisement

ಭಾರತ-ಅಮೆರಿಕ ವ್ಯಾಪಾರ ಮೈತ್ರಿ ಮತ್ತಷ್ಟು ಬಲಿಷ್ಠವಾಗಲಿ ಸ್ನೇಹ

02:41 AM Jul 25, 2020 | Hari Prasad |

ಇತ್ತ ಭಾರತ ಮತ್ತು ಚೀನದ ನಡುವೆ ಗಡಿ ಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಇನ್ನೊಂದೆಡೆ ಭಾರತ ಮತ್ತು ಅಮೆರಿಕ ನಡುವಿನ ಮೈತ್ರಿ ಬಲವಾಗಲಾರಂಭಿಸಿದೆ.

Advertisement

ಇತ್ತೀಚೆಗೆ ಗಾಲ್ವಾನ್‌ ಕಣಿವೆಯಲ್ಲಿ ಬಿಕ್ಕಟ್ಟು ಉತ್ತುಂಗಕ್ಕೇರಿದ್ದ ಸಮಯದಲ್ಲಿಯೇ ಅಮೆರಿಕ, ಜರ್ಮನಿಯಲ್ಲಿದ್ದ ತನ್ನ ಮೂರು ಸಮರ ನೌಕೆಗಳನ್ನು ದಕ್ಷಿಣ ಚೀನ ಭಾಗದಲ್ಲಿ ನಿಯೋಜಿಸಿದಾಗ ಇದು ಸ್ಪಷ್ಟವಾಗಿತ್ತು.

ಈಗ ಬುಧವಾರ ನಡೆದ ಇಂಡಿಯಾ ಐಡಿಯಾಸ್‌ ಶೃಂಗದಲ್ಲೂ ಸಹ ಅಮೆರಿಕ-ಭಾರತದ ನಡುವಿನ ಸಂಬಂಧವು ಮತ್ತಷ್ಟು ಬಲಿಷ್ಠಗೊಳ್ಳುವ ಸೂಚನೆ ಸಿಕ್ಕಿದೆ.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯವೆಂದು ಅಮೆರಿಕದ ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.

ಒಟ್ಟಿನಲ್ಲಿ ಹೂಡಿಕೆಗೆ ಭಾರತವು ಉತ್ತಮ ಪರ್ಯಾಯವೆಂದು ಅವರು ಸೂಚಿಸಿದ್ದಾರಾದರೂ, ತಮ್ಮ ಭಾಷಣದಲ್ಲಿ ಅವರು ಚೀನದ ಹೆಸರನ್ನೇನೂ ಉಲ್ಲೇಖೀಸಿಲ್ಲ. ಆದರೆ ಇನ್ನೊಂದೆಡೆ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪಾಂಪೆಯೋ ಮಾತ್ರ ನೇರವಾಗಿ ಚೀನದ ಮೇಲೆಯೇ ಗುರಿಯಿಟ್ಟಿದ್ದಾರೆ.

Advertisement

ಭಾರತವು ಚೀನದ ಮೇಲಿನ‌ ತನ್ನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿರುವ ಅವರು, ಭಾರತ-ಚೀನ ನಡುವೆ ಗಡಿ ಭಾಗದಲ್ಲಿನ ಬಿಕ್ಕಟ್ಟು ಚೀನದ ಕಮ್ಯುನಿಸ್ಟ್‌ ಪಾರ್ಟಿಯ ಅಸ್ವೀಕಾರಾರ್ಹ ವರ್ತನೆಗೆ ಉದಾಹರಣೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು (ಅಮೆರಿಕ-ಭಾರತ) ಜತೆಯಾಗಿ ಚೀನದಿಂದ ನಮ್ಮ ಹಿತ ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಗಡಿ ಭಾಗದಲ್ಲಿನ ಎರಡೂ ರಾಷ್ಟ್ರಗಳ ಬಿಕ್ಕಟ್ಟನ್ನು ಬದಿಗಿಟ್ಟು ನೋಡಿದರೂ ಸಹ ಇತ್ತೀಚಿನ ಕೆಲವು ಸಮಯದಿಂದ ಚೀನದ ವರ್ತನೆಯ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಪ್ರತಿರೋಧ ಎದುರಾಗುತ್ತಿದೆ. ಕೇವಲ ಗಡಿ ವಿಷಯಗಳಲ್ಲಷ್ಟೇ ಅಲ್ಲ, ವ್ಯಾಪಾರ ಸಂಬಂಧಿ ವಿಷಯಗಳಲ್ಲೂ ಚೀನದ ದುರ್ವರ್ತನೆ ಮುಂದುವರಿದೇ ಇದೆ.

ಅದರಲ್ಲೂ ಕೋವಿಡ್ 19 ಸಮಯದಲ್ಲಿ ವಿವಿಧ ದೇಶಗಳ ಆರ್ಥಿಕತೆಯು ದುರ್ಬಲವಾಗಿದ್ದು, ಇದರ ದುರ್ಲಾಭ ಪಡೆಯುತ್ತಿರುವ ಚೀನ ಆ ದೇಶಗಳಲ್ಲಿನ ಕಂಪೆನಿಗಳನ್ನು ಟೇಕ್‌ ಓವರ್‌ ಮಾಡಿಕೊಳ್ಳಲಾರಂಭಿಸಿದೆ, ಇಲ್ಲವೇ ಹೂಡಿಕೆಯನ್ನು ಹೆಚ್ಚಿಸುತ್ತಿದೆ. ಇನ್ನು ಕೋವಿಡ್‌ ಸಮಯದಲ್ಲಿ ವಿವಿಧ ದೇಶಗಳಿಗೆ ಅದು ಪೂರೈಸಿದ ಕಳಪೆ ಕಿಟ್‌ಗಳಿಂದಾಗಿಯೂ ಹೆಸರು ಕೆಡಿಸಿಕೊಂಡಿದೆ.

ಇನ್ನೊಂದೆಡೆ ಈ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಶ್ಲಾಘನೀಯ ದಿಕ್ಕಿನಲ್ಲಿ ಹೆಜ್ಜೆಯಿಡುತ್ತಿದೆ. ಔಷಧದಿಂದ ಹಿಡಿದು, ಅಗತ್ಯ ಸಾಮಗ್ರಿಗಳನ್ನು ವಿವಿಧ ದೇಶಗಳಿಗೆ ಸಹಾಯಾರ್ಥವಾಗಿ ನೀಡಿ ಮೆಚ್ಚುಗೆ ಗಳಿಸಿದೆ. “ಭಾರತ ಇಂದು ಅಮೆರಿಕ ಸೇರಿದಂತೆ ವಿವಿಧ ದೇಶಗಳ ಭರವಸೆ ಗಳಿಸಿದೆ’ ಎಂಬ ಅಮೆರಿಕ ವಿದೇಶಾಂಗ ಸಚಿವರ ಮಾತು ಸತ್ಯ.

ಇನ್ನೊಂದೆಡೆ ಚೀನ, ತನ್ನ ವಿಸ್ತರಣಾವಾದಿ ದುಬುìದ್ಧಿಯನ್ನು ಈ ಸಮಯದಲ್ಲೂ ಢಾಳಾಗಿಯೇ ಪ್ರದರ್ಶಿಸುತ್ತಿದೆ. ಈಗಲೂ ಒಂದೆಡೆ ಗಡಿ ಭಾಗದಲ್ಲಿ ಪೂರ್ಣವಾಗಿ ಹಿಂದೆ ಸರಿಯದೇ ತಂಟೆ ಮಾಡುತ್ತಿರುವುದು, ಇನ್ನೊಂದೆಡೆ ಈಗ ಭೂತಾನ್‌ನ ಮೇಲೆ ಅನಗತ್ಯ ಒತ್ತಡ ಹೇರಿ ಡೋಕ್ಲಾಂ ಅನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸುತ್ತಿರುವುದನ್ನೆಲ್ಲ ನೋಡಿದರೆ, ಡ್ರ್ಯಾಗನ್‌ ರಾಷ್ಟ್ರ ಅಂತಾರಾಷ್ಟ್ರೀಯ ಒತ್ತಡಗಳಿಂದ ಅಷ್ಟೊಂದು ವಿಚಲಿತವಾಗಿಲ್ಲ ಎಂದೆನಿಸುತ್ತದೆ. ಈ ಕಾರಣಕ್ಕಾಗಿಯೇ, ಚೀನಕ್ಕೆ ಆರ್ಥಿಕವಾಗಿ ಇದಿರೇಟು ನೀಡುವುದೇ ಈಗ ಜಗತ್ತಿನ ಮುಂದಿರುವ ಪ್ರಬಲ ಮಾರ್ಗ. ಈ ನಿಟ್ಟಿನಲ್ಲಿ ಅಮೆರಿಕ ಭಾರತದ ನಡುವಿನ ವ್ಯಾಪಾರ ಮೈತ್ರಿಯು ಮತ್ತಷ್ಟು ಬಲಿಷ್ಠವಾಗುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next