Advertisement

ಹದ್ದು ಮೀರುತ್ತಿರುವ ನೇಪಾಲಕ್ಕೆ ಬುದ್ಧಿ ಹೇಳುವುದ್ಯಾರು?

01:33 AM Jun 22, 2020 | Hari Prasad |

ಭಾರತವು ಕೋವಿಡ್ 19ನಿಂದಷ್ಟೇ ಅಲ್ಲದೇ, ಕೋವಿಡ್ 19 ಮೂಲವಾದ ಚೀನದೊಂದಿಗೂ ಗಡಿ ಭಾಗದಲ್ಲಿ  ಬಿಕ್ಕಟ್ಟು ಎದುರಿಸುತ್ತಿದೆ.

Advertisement

ಚೀನ ಕಾಟ ಅತಿಯಾಯಿತು ಎನ್ನುವಷ್ಟರಲ್ಲೇ ಚೀನಹಿಂಬಾಲಕನಂತೆ ವರ್ತಿಸುವ ನೇಪಾಲದ ಕಮ್ಯುನಿಸ್ಟ್‌ ಸರಕಾರವೂ ಭಾರತಕ್ಕೆ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯುಂಟು ಮಾಡುತ್ತಲೇ ಇದೆ.

ನ್ಯಾಯಯುತವಾಗಿ ಭಾರತಕ್ಕೆ ಸೇರಿದ ಪ್ರದೇಶಗಳನ್ನು ತನ್ನದೆಂದು ಸಾರಿ ನಕ್ಷೆ ಸಿದ್ಧಪಡಿಸಿರುವ ನೇಪಾಲ, ತನ್ನಲ್ಲಿ ಕೋವಿಡ್ 19 ಹೆಚ್ಚಳವಾದದ್ದಕ್ಕೂ ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ.

ಈಗ ಗಡಿಯಲ್ಲಿ ಸೇನಾ ಟೆಂಟ್‌ಗಳನ್ನು ನಿರ್ಮಿಸಿ ಅನಗತ್ಯವಾಗಿ ಭಾರತದ ಮುನಿಸಿಗೆ ಪಾತ್ರವಾಗುತ್ತಿದೆ. ಕಮ್ಯುನಿಸ್ಟ್‌  ಕೆ.ಪಿ. ಶರ್ಮಾ ಓಲಿ ಆಡಳಿತವು ಮೊದಲಿಂದಲೂ ಚೀನ ಪ್ರೇಮಿಯಾಗಿದೆಯಾದರೂ ಅದೇಕೆ ‘ಈಗ’ ಅದು ಭಾರತವನ್ನು ಕೆಣಕುತ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಇದೇ ವೇಳೆಯಲ್ಲೇ, ಬಹುಕಾಲದ ಮಿತ್ರ ಭಾರತವನ್ನು ಎದುರು ಹಾಕಿಕೊಳ್ಳಬೇಡಿ ಎಂದು ಓಲಿ ಸರಕಾರಕ್ಕೆ ಅಲ್ಲಿನ ಪ್ರತಿಪಕ್ಷಗಳು ಎಚ್ಚರಿಸುತ್ತಿವೆ.

ನೇಪಾಲದ ಎಫ್ಎಂಗಳಲ್ಲಿ ಭಾರತ ವಿರೋಧಿ ಹಾಡುಗಳು!
ಲಿಂಪಿಯಾಧುರಾ, ಕಾಲಾಪಾನಿ ಹಾಗೂ ಲಿಪುಲೇಖ್‌ಗಳನ್ನು ತನ್ನ ಪ್ರದೇಶಗಳೆಂದು ನೇಪಾಲ ನಕ್ಷೆಯನ್ನೇನೋ ಬಿಡುಗಡೆ ಮಾಡಿದೆ. ಆದರೆ ಈ ವಿಷಯದಲ್ಲಿ ಜನರ ಬೆಂಬಲವೂ ಸರಕಾರಕ್ಕೆ ಬೇಕಾಗಿದೆ.

Advertisement

ಈ ಕಾರಣಕ್ಕಾಗಿಯೇ, ಜನರ ಬ್ರೇನ್‌ವಾಶ್‌ ಮಾಡಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಅದು ಹುಡುಕುತ್ತಿದೆ. ಈ ತಂತ್ರದ ಭಾಗವಾಗಿ, ರೇಡಿಯೋ ಚಾನೆಲ್‌ಗಳಲ್ಲಿ ‘ಭಾರತ ವಿರೋಧಿ’ ಹಾಡುಗಳನ್ನು  ಬಿತ್ತರಿಸಲಾರಂಭಿಸಿದೆ.

ಗಮನಾರ್ಹ ಸಂಗತಿಯೆಂದರೆ, ಈ ಚಾನೆಲ್‌ಗಳ ರೇಂಜ್‌ 3-4 ಕಿಲೋಮೀಟರ್‌ ಇರುವುದರಿಂದ, ಭಾರತದ ಗಡಿಭಾಗದ ಗ್ರಾಮಸ್ಥರೂ ದಶಕಗಳಿಂದ ನೇಪಾಳದ ರೇಡಿಯೋಗಳನ್ನು ಕೇಳುತ್ತಾ ಬಂದಿದ್ದಾರೆ.

ಧಾರ್ಚುಲಾದಲ್ಲಿನ ಬಬಿತಾ ಸನ್ವಾಲ್‌ ಎಂಬ ಶಿಕ್ಷಕಿ ಈ ಕುರಿತು ಹೇಳುವುದು ಹೀಗೆ- “ನಾನು ಸಾಮಾನ್ಯವಾಗಿ ಶಾಲೆಯಿಂದ ಮನೆಗೆ ಹಿಂದಿರುಗುವಾಗ ನೇಪಾಳದ ಎಫ್ಎಂ ಕೇಳುತ್ತಿದ್ದೆ. ಈಗ ಗಂಟೆಗೊಮ್ಮೆ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿರುವುದರಿಂದ, ಎಫ್ಎಂ ಕೇಳುವುದನ್ನೇ ನಿಲ್ಲಿಸಿದ್ದೇನೆ” ಎನ್ನುತ್ತಾರೆ.

‘ಹಮಾರಿ ಹೋ ತ್ಯೋ ಕಾಲಾಪಾನಿ”: ಹೀಗೆ ಎಫ್ಎಂಗಳಲ್ಲಿ ಭಾರತ ವಿರೋಧಿ ಹಾಡುಗಳು ಎಗ್ಗಿಲ್ಲದೆ ಪ್ರಸಾರವಾಗುತ್ತಿದೆ. ಈ ಹಾಡನ್ನು ಕೇಳಿಸಿಕೊಂಡ ಬಬಿತಾ ಸನ್ವಾಲ್‌ ಅವರ ವಿದ್ಯಾರ್ಥಿನಿ ಯೊ ಬ್ಬಳು, “ಮೇಡಂ, ನಿಜಕ್ಕೂ ಕಾಲಾಪಾನಿ ನೇಪಾಲದ್ದಾ?” ಅಂತ ಪ್ರಶ್ನಿಸಿದ್ದಳಂತೆ!

ಈಗಾಗಲೇ “ಕೆಲವು ಚಾನೆಲ್‌ಗಳೆಲ್ಲ ಲಿಂಪಿಯಾಧುರಾ, ಕಾಲಾಪಾನಿ, ಲಿಪುಲೇಖ್‌ ಹವಾಮಾನ ವರದಿ ಬಿತ್ತರಿಸಲಾರಂಭಿಸಿವೆ!” ಎನ್ನುತ್ತಾರೆ ಭಾರತದ ಗಡಿ ಗ್ರಾಮ ನಿವಾಸಿ ಕೃಷ್ಣ ಗರ್ಬಿಯಾನ್‌.

ಹಿರಿಯಣ್ಣನ ಚರ್ಚೆ: ನೇಪಾಳಿಗರು ಭಾರತವನ್ನು ಹಿರಿಯಣ್ಣ ಎಂದು ಕರೆಯುತ್ತಾ ಬಂದಿದ್ದಾರೆ. ಇದಕ್ಕೆ ತಕ್ಕಂತೆಯೇ  ಭಾರತ ನೇಪಾಲಕ್ಕೆ ಹಿರಿಯಣ್ಣನಂತೆಯೇ ಆಸರೆಯಾಗಿ ನಿಲ್ಲುತ್ತಾ ಬಂದಿದೆ.

ಆದರೆ, ಓಲಿ ನೇತೃತ್ವದ ಕಮ್ಯುನಿಸ್ಟ್ ನಾಯಕರಿಗೆ, ಭಾರತದ ಜತೆಗಿನ ನೇಪಾಲದ ಸಂಬಂಧವ‌ನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ, ನೇಪಾಲ ಸರಕಾರದ ವಕ್ತಾರ ಸುಶಾಂತ್‌ ವಿಗ್ನಾತ್‌, ಭಾರತವನ್ನು ಹಿರಿಯಣ್ಣ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು  ಹೇಳಿದ್ದರು.

ಹೊಸ ನಕ್ಷೆಯ ಹಿಂದೆ ಚೀನಿ ರಾಯಭಾರಿ!
ನೇಪಾಲ ಸರಕಾರ ತಂದ ಹೊಸ ನಕ್ಷೆಯ ಹಿಂದೆ, ಚೀನದ ರಾಯಭಾರಿ ಹೌ ಯಾಂಕಿ ಎಂಬ ಮಹಿಳೆ ಮಹತ್ವದ ಪಾತ್ರ ವಹಿಸಿರುವುದು ತಿಳಿದುಬಂದಿದೆ.

ಕಾಠ್ಮಂ­ಡು­ವಿ­ನಲ್ಲಿ ಚೀನದ ರಾಯಭಾರ ಕಚೇರಿಯ ನೇತೃತ್ವ ವಹಿಸಿರುವ ಹೌ ಯಾಂಕಿ, ನೇಪಾಳದಲ್ಲಿನ ಅತ್ಯಂತ ಬಲಿಷ್ಠ ವಿದೇಶಿ ರಾಯಭಾರಿ ಎಂದೂ ಗುರುತಿಸಿಕೊಂಡವರು.

ಮೂರು ವರ್ಷ ಪಾಕ್‌ನಲ್ಲಿದ್ದರು: ಈ ಹಿಂದೆ 3 ವರ್ಷ ಪಾಕಿಸ್ಥಾನದಲ್ಲಿ ಕೆಲಸ ಮಾಡಿ ಅನುಭವ ಇರುವ ಹೌ ಯಾಂಕಿ, ತಮ್ಮ ಭಾರತದ ವಿರೋಧಿ ಗುಣದಿಂದಾಗಿ ಪಾಕ್‌ನಲ್ಲೂ ಪ್ರಸಿದ್ಧಿ ಪಡೆದಿದ್ದರು. ಈಗ ನೇಪಾಲದಲ್ಲಿ ಚೀನರಾಯಭಾರಿಯಾಗಿ ಅಷ್ಟೇ ಅಲ್ಲದೇ, ಚೀನ ವಿದೇಶಾಂಗ ಸಚಿವಾಲಯದ ಏಷ್ಯನ್‌ ವ್ಯವಹಾರಗಳ ಇಲಾಖೆಯಲ್ಲೂ ದೊಡ್ಡ ಹುದ್ದೆಯಲ್ಲಿದ್ದಾರೆ.

ಓಲಿಯವರ ಕಚೇರಿಗೆ ನಿರಂತರ ಭೇಟಿ ಕೊಡುವ ಹೌ ಯಾಂಕಿ, ಕಳೆದ ವರ್ಷ ನೇಪಾಲ ದಲ್ಲಿ ‘ಜಿನ್‌ಪಿಂಗ್‌ ರಾಜಕೀಯ ವೈಖರಿ’’ಯ ಬಗ್ಗೆ ಬೃಹತ್‌ ಕಾರ್ಯಾಗಾರ ಆಯೋಜಿಸಿದ್ದರು. ನೇಪಾಲದ ಮೇಲೆ ಕಮ್ಯುನಿಸ್ಟ್‌ ಸಿದ್ಧಾಂತ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಓಲಿ-ಹೌ ಯಾಂಕಿ ಜೋಡಿಯ ನಡೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದ್ದವು.

ನೇಪಾಲಿ ಪುರುಷನನ್ನು ಮದುವೆಯಾದರೆ…!
ನೇಪಾಲದ ಗೃಹ ಸಚಿವ ರಾಮ್‌ ಬಹಾದ್ದೂರ್‌ ಥಾಪಾ, ತಮ್ಮ ದೇಶದ ನಾಗರಿಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಶನಿವಾರ ಘೋಷಿಸಿದ್ದಾರೆ. ಮುಖ್ಯವಾಗಿ, ಈ ಬದಲಾವಣೆ ಭಾರತೀಯರನ್ನೇ ಗುರಿಯಾಗಿಟ್ಟುಕೊಂಡು ಮಾಡಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಹೊಸ ನಿಯಮದ ಪ್ರಕಾರ, ಭಾರತೀಯ ಹೆಣ್ಣುಮಗಳೊಬ್ಬಳು, ನೇಪಾಲಿ ನಾಗರಿಕನನ್ನು ಮದುವೆಯಾದರೆ ಆಕೆ 7 ವರ್ಷದ ಅನಂತರವೇ ನೇಪಾಲದ ನಾಗರಿಕತ್ವ ಪಡೆಯಲು ಅರ್ಹಳಾಗುತ್ತಾಳೆ! ಈ ಬದಲಾವಣೆಯ ಬಗ್ಗೆ ನೇಪಾಲದ ಪ್ರತಿಪಕ್ಷಗಳೂ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಆದರೆ, ಓಲಿ ಸರಕಾರ ಮಾತ್ರ ಸಮರ್ಥಿಸಿಕೊಳ್ಳುತ್ತದೆ.

‘ಭಾರತದ ಕಾನೂನಿನಲ್ಲೂ ಇಂಥದ್ದೇ ನಿಯಮಗಳಿವೆ’’ ಎಂದು ವಾದಿಸುತ್ತಾರೆ ರಾಮ್‌ ಬಹಾದ್ದೂರ್‌ ಥಾಪಾ. ಸತ್ಯವೇನೆಂದರೆ, ಭಾರತದ ನಿಯಮ ಅನ್ಯ ರಾಷ್ಟ್ರಗಳಿಗೆ ಅನ್ವಯವಾಗುತ್ತದೆಯೇ ಹೊರತು, ನೇಪಾಲಕ್ಕಲ್ಲ. ನೇಪಾಲದ ನಾಗರಿಕರಿಗೆ ಭಾರತ ಎಲ್ಲರಿಗಿಂತ ಹೆಚ್ಚು ಆದ್ಯತೆ ಕೊಟ್ಟಿದೆ ಎನ್ನುವುದನ್ನು ಓಲಿ ಸರಕಾರ ಜಾಣತನದಿಂದ ಮರೆಮಾಚುತ್ತಿದೆ.

ರಾಷ್ಟ್ರೀಯತೆಯ ಹೆಸರಲ್ಲಿ
ನೇಪಾಳದ 52 ಪ್ರತಿಶತದಷ್ಟು ಜನಸಂಖ್ಯೆ 24 ವರ್ಷಕ್ಕೂ ಕಡಿಮೆ ವಯೋಮಾನದವರಿಂದಲೇ ಕೂಡಿದೆ. ಆದರೆ, ಈ ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳಲು ಓಲಿ ಸರಕಾರಕ್ಕೆ ಆಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ಅಲ್ಲಿ ವಿಪರೀತ ಕಾಡುತ್ತಿದ್ದು, ನೇಪಾಳಿಯರು ಈಗಲೂ ಉದ್ಯೋ­ಗ­ಕ್ಕಾಗಿ ಭಾರತವನ್ನೇ ಅವಲಂಬಿಸಿದ್ದಾರೆ. ಈಗ ಕೋವಿಡ್ 19ನಿಂದಾಗಿ ಅನೇಕರು ಭಾರತದಲ್ಲೂ ಉದ್ಯೋಗ ಕೈಜಾರಿ ನೇಪಾ­ಳಕ್ಕೆ ಹಿಂದಿರುಗುತ್ತಿದ್ದಾರೆ.

ಒಟ್ಟಲ್ಲಿ ತಮಗೆ ದಾರಿ ತೋರಿಸಲು ವಿಫ‌ಲವಾಗುತ್ತಿರುವ ಓಲಿ ಸರಕಾರದ ವಿರುದ್ಧ ನೇಪಾಳಿಗರಲ್ಲಿ ಅಸಮಾಧಾನ ಭುಗಿಲೇಳುತ್ತಿದೆ. ಓಲಿ ‘ಭಾರತದ ವಿರೋಧಿ’ ಮಂತ್ರ ಜಪಿಸುತ್ತಾ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈಗ ನೇಪಾಳದಲ್ಲಿ ಕೋವಿಡ್ 19 ಹೆಚ್ಚಾಗಿದ್ದಕ್ಕೂ ಭಾರತವೇ ಕಾರಣ ಎನ್ನುವ ಅವರು, ‘ಚೀನದ ವೈರಸ್‌ಗಿಂತಲೂ ಭಾರತದ ವೈರಸ್‌ ಅಪಾಯಕಾರಿ” ಎಂದು ಭಾರತವನ್ನು ಟೀಕಿಸುತ್ತಲೇ, ಚೀನಕ್ಕೆ ಪೂಸಿ ಹೊಡೆಯುವುದನ್ನು ಮಾತ್ರ ಮರೆಯುವುದಿಲ್ಲ.

2015ರ ಬಿಕ್ಕಟ್ಟಿನ ನೆಪದಲ್ಲಿ
2015ರಲ್ಲಿ ನೇಪಾಲ ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿದಾಗ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನೇಪಾಲದಲ್ಲಿರುವ ಮಧೇ­­ಸಿಯರೊಂದಿಗೆ (ಭಾರತೀಯ ಮೂ­ಲದ ಜನ) ಅಲ್ಲಿನ ಸಂವಿಧಾನ ತಾರತಮ್ಯ ಮಾಡುತ್ತದೆ ಎನ್ನುವುದು ಭಾರತದ ಅಸಮಾ­ಧಾನಕ್ಕೆ ಕಾರಣವಾಗಿತ್ತು.

ಪ್ರತ್ಯುತ್ತರವಾಗಿ ನಮ್ಮ ದೇಶ ನೇಪಾಲದ ವಿರುದ್ಧ ಅಘೋ­ಷಿತ ನಾಕಾ ಬಂದಿ ಹಾಕಿಬಿಟ್ಟಿತು. ಇದರಿಂದ, ಆ ದೇಶದಲ್ಲಿ ಅಗತ್ಯ ವಸ್ತುಗಳ ಭಾರೀ ಕೊರತೆ ಎದುರಾಯಿತು. ಆಗ ನೇಪಾಲದ ಸಹಾಯ ಮಾಡುವ ನೆಪದಲ್ಲಿ ಮುಂದೆ ಬಂದ ಚೀನ ಆ ರಾಷ್ಟ್ರದೊಂದಿಗೆ ಹಲವು ಒಪ್ಪಂದ ಮಾಡಿಕೊಂಡಿತು. ತನ್ನ ಬಂದರುಗಳನ್ನು ಬಳಸಿಕೊಳ್ಳಲೂ ನೇಪಾಲಕ್ಕೆ ಅನುಮತಿ ನೀಡಿತು. ಬಿಆರ್‌ಐ ಕಾರ್ಯ ಕ್ರಮದಲ್ಲೂ ಸೇರಿಕೊಂಡಿತು.

ವಿರೋಧಿಸಿದರೆ ಭಾರತದ ಏಜೆಂಟ್‌!
ತಮ್ಮನ್ನು ವಿರೋಧಿಸುವವರನ್ನೆಲ್ಲ ಕಮ್ಯುನಿಸ್ಟ್‌ ನಾಯಕರು ‘ಭಾರತದ ಏಜೆಂಟ್‌’ ಎಂದೋ ಅಥವಾ ‘ಭಾರತದ ವಿಸ್ತರಣಾವಾದಿ ಉದ್ದೇಶಕ್ಕೆ ಕುಮ್ಮಕ್ಕು ಕೊಡುವವರು’ ಎಂದೋ ಕರೆದು ಸುಮ್ಮನಾಗಿಸುತ್ತಾರೆ. ದಶಕಗಳ ಹಿಂದೆ ಪ್ರಧಾನಿ ಜಿಪಿ ಕೊಯಿರಾಲಾ ಅವರನ್ನೂ ‘ಭಾರತದ ಏಜೆಂಟ್‌’ ಎಂದು ಹಂಗಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next