Advertisement

ವಿಜಯ ಸಂಕಲ್ಪ ರ್ಯಾಲಿಯಂದೇ ಪರೋಕ್ಷ ಫಲಿತಾಂಶ: ಶಾಸಕ ಸುನಿಲ್‌ ಕುಮಾರ್‌ ವಿಶ್ವಾಸ

09:58 PM Apr 08, 2019 | mahesh |

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎ.13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ವಿಜಯ ಸಂಕಲ್ಪ ರ್ಯಾಲಿಯಂದೇ ಬಿಜೆಪಿಯ ಪರವಾಗಿ ಪರೋಕ್ಷ ಫಲಿತಾಂಶ ಪ್ರಕಟವಾಗಲಿದೆ ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬೆಳ್ತಂಗಡಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಚುನಾವಣೆ ತಯಾರಿ ಪ್ರಕ್ರಿಯೆಗಳನ್ನು ಬಿಜೆಪಿ ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲನೇ ಹಂತದ ಮತ ಪ್ರಚಾರ ಅಭಿಯಾನ ಮುಕ್ತಾಯದ ಅನಂತರ ನಮಗೆ ವಿಶ್ವಾಸ ಬಂದಿದೆ. ನಮ್ಮ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು 2 ಲಕ್ಷ ಮತಗಳ ಅಂತರದಲ್ಲಿ ಗೆಲುವಿನ ದಾಖಲೆ ಬರೆಯಲಿದ್ದಾರೆ ಎಂದರು.

ರ್ಯಾಲಿಗೆ 1 ಲಕ್ಷ ಕಾರ್ಯಕರ್ತರು
ಎ.13 ರಂದು ಮಧ್ಯಾಹ್ನ 3.30ಕ್ಕೆ ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಯುವ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಜಿಲ್ಲೆಯಿಂದ 1 ಲಕ್ಷಕ್ಕೂ ಮಿಕ್ಕಿದ ಜನ ಸೇರುವ ವಿಶ್ವಾಸ ಇದೆ. ಈಗಾಗಲೇ ತಯಾರಿ ಪ್ರಕ್ರಿಯೆಯೂ ಆರಂಭವಾಗಿದೆ.

ದ.ಕ., ಉಡುಪಿ ಜಿಲ್ಲೆಯ ಮಟ್ಟಿಗೆ ವಿಜಯ ಸಂಕಲ್ಪ ರ್ಯಾಲಿ ವಿಶೇಷವಾದ ವೇಗ ಹಾಗೂ ಉತ್ಸಾಹ ಕೊಡುವುದಿದೆ. 1ಲಕ್ಷ ಜನ ಚೌಕೀದಾರರು ದೇಶದ ಮಹಾನ್‌ ಚೌಕೀದಾರನ ಭಾಷಣಕ್ಕೋಸ್ಕರ ಕೇಂದ್ರ ಮೈದಾನದಲ್ಲಿ ಸೇರಲಿದ್ದಾರೆ ಎಂದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಹರೀಶ್‌ ಪೂಂಜ ಮತ್ತು ತಾಲೂಕು ತಂಡದ ನೇತೃತ್ವದಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವರು. ಎ.10ರಂದು ಮನೆ ಮನೆಗೆ ಭೇಟಿ ನೀಡಿ ವಿಜಯ ಸಂಕಲ್ಪ ಯಾತ್ರೆಗೆ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.

Advertisement

ಆಡಳಿತ ವೈಖರಿಯೇ ಅಸ್ತ್ರ
ಈ ಬಾರಿಯ ಚುನಾವಣೆ ಪ್ರಮುಖ ಅಂಶವೇ ದೇಶದ ನಾಯಕತ್ವ ಯಾರು ಮುನ್ನಡೆಸಬೇಕು ಎಂಬುದಾಗಿದೆ. 5ವರ್ಷದ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ಜನಪರ ಆಡಳಿತ ನೀಡಿದ ನರೇಂದ್ರ ಮೋದಿ ಮುಂದಿನ ಬಹು ವರ್ಷಗಳ ಕಾಲ ಆಡಳಿತ ನಡೆಸ ಬೇಕೆಂಬುದು ಮತದಾರರಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದನ್ನೇ ಪ್ರಧಾನವಾಗಿಟ್ಟು ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ವೈಯಕ್ತಿಕ ಟೀಕೆ ಕಾಂಗ್ರೆಸ್‌ಗೆ ಶೋಭೆಯಲ್ಲ
ವಿಭಾಗ ಸಹಪ್ರಭಾರಿ ಪ್ರತಾಪ್‌ ಸಿಂಹ ನಾಯಕ್‌ ಮಾತನಾಡಿ, ರಾಷ್ಟ್ರೀಯ ವಿಚಾರದಲ್ಲಿ ಚರ್ಚೆ ಮಾಡದೆ ವೈಯಕ್ತಿಕ ಟೀಕೆ ಮಾಡುವ ಕಾಂಗ್ರೆಸ್‌ನ ಹತಾಶ ಮನೋಭಾವ ನಮಗೆ ಅರ್ಥವಾಗುತ್ತದೆ. 5 ಬಾರಿ ಶಾಸಕರಾಗಿ ಅನುಭವ ಹೊಂದಿದವರು ಅತ್ಯಂತ ಲಘುವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಶಾಸಕ ಹರೀಶ್‌ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೊಟ್ಯಾನ್‌, ಮುಖಂಡರಾದ ಗೋಪಾ ಲಕೃಷ್ಣ ಹೇರಳೆ, ಆನಂದ ಕೆ., ರಾಜೇಶ್‌ ಪೆರ್ಮುಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next