Advertisement

ಇಂದಿರಾ ಹತ್ಯೆ ಸಂಭ್ರಮ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ: ಜೈಶಂಕರ್‌

11:41 PM Jun 08, 2023 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯವರ ಹತ್ಯೆಯನ್ನು ಕೆನಡಾದಲ್ಲಿ ಖಲಿಸ್ಥಾನಿಗಳು ಸಂಭ್ರಮಿಸಿರುವ ಪ್ರಕರಣದ ವಿರುದ್ಧ ಭಾರತ ಸರಕಾರ ತೀವ್ರ ಪ್ರತಿಭಟನೆ ಸಲ್ಲಿಸಿದೆ. ಕೆನಡಾ ಸರಕಾರಕ್ಕೆ ನೇರವಾಗಿಯೇ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈಶಂಕರ್‌, ಇಂಥ ಘಟನೆಗಳು ಎರಡೂ ದೇಶಗಳ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು ಎಂದಿದ್ದಾರೆ.

Advertisement

ಬುಧವಾರವಷ್ಟೆ ಆಪರೇಶನ್‌ ಬ್ಲೂಸ್ಟಾರ್‌ನ ವರ್ಷಾಚರಣೆ ನೆನಪಲ್ಲಿ ಕೆನಡಾದ ಬ್ರಾಂಪ್ಟನ್‌ನಲ್ಲಿ ಖಲಿಸ್ಥಾನಿ ಉಗ್ರರು ಇಂದಿರಾ ಹತ್ಯೆ ಕುರಿತ ಸ್ತಬ್ಧಚಿತ್ರ ಮಾದರಿಯನ್ನು 5 ಕಿ.ಮೀ.ಗಳ ವರೆಗೆ ಮೆರವಣಿಗೆ ಮಾಡಿದ್ದರು. ಈ ಬಗ್ಗೆ ಭಾರತದಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ಇದಕ್ಕೆ ಗುರುವಾರ ಸಚಿವ ಜೈಶಂಕರ್‌ ಪ್ರತಿಕ್ರಿಯೆ ನೀಡಿದ್ದು, ಇದು ಕೆನಡಾದ ಓಟ್‌ಬ್ಯಾಂಕ್‌ ರಾಜಕಾರಣ ಎಂದು ಕರೆದಿದ್ದಾರೆ. ಅಲ್ಲಿನ ಸರಕಾರ ಪ್ರತ್ಯೇಕತಾವಾದಿಗಳಿಗೆ ಆಸರೆ ನೀಡುತ್ತಿದೆ. ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುವ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಪ್ರಕರಣದ ಹಿಂದೆ ಬೇರೇನೋ ವಿಚಾರದ ನೆರಳು ಕಾಣುತ್ತಿದೆ ಎಂದು ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಹಿಂಸೆಯನ್ನು ಪ್ರತಿಪಾದಿಸುವ ಪ್ರತ್ಯೇಕತಾವಾದಿಗಳಿಗೆ, ಮೂಲಭೂತವಾದಿಗಳಿಗೆ ನಿಮ್ಮ ದೇಶದಲ್ಲಿ ವಾಸಿಸಲು ಅವಕಾಶ ನೀಡಿರುವುದು ಏಕೆ? ಇಂಥ ಬೆಳವಣಿಗೆಗಳು ನಮ್ಮ, ನಿಮ್ಮ ನಡುವಿನ ಸಂಬಂಧಕ್ಕೆ ಅಡ್ಡಗಾಲಾಗಬಹುದು ಎಂದಿದ್ದಾರೆ.

ಕಾಂಗ್ರೆಸ್‌ ಕಟು ಟೀಕೆ: ಟ್ಯಾಬ್ಲೋ ಪ್ರದರ್ಶನ ಬಗ್ಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಇಂದಿರಾ ಹತ್ಯೆಯನ್ನು ಸಂಭ್ರಮಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆನಡಾ ಸರಕಾರವನ್ನು ಆಗ್ರಹಿಸಿದೆ.

ಚೀನ, ಪಾಕ್‌ಗೂ ಖಡಕ್‌ ಸಂದೇಶ

Advertisement

ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಉದ್ವಿಗ್ನತೆ ಶಮನವಾಗದೇ ಮತ್ತು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರ ನಿಯೋಜನೆ ನಿಲ್ಲುವವರೆಗೂ ಭಾರತ-ಚೀನ ನಡುವಿನ ಸಂಬಂಧಗಳು ಸಹಜತೆಗೆ ಮರಳಬೇಕು ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದರು. “2020ರಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತದ ಗಡಿಯಲ್ಲಿ ಸೈನಿಕರನ್ನು ನಿಯೋಜಿಸುವ ಮೂಲಕ ಚೀನ ಗಡಿ ನಿರ್ವಹಣೆ ಒಪ್ಪಂದಗಳನ್ನು ಉಲ್ಲಂ ಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನ ನಡುವಿನ ಸಂಬಂಧ ಸುಧಾರಣೆಯಾಗಿಲ್ಲ’ ಎಂದರು. ಇದೇ ವೇಳೆ, “ಅಖಂಡ ಭಾರತ ಪರಿಕಲ್ಪನೆಯ ಬಗ್ಗೆ ಪಾಕಿಸ್ಥಾನಕ್ಕೆ ಅರ್ಥವಾಗುವುದಿಲ್ಲ. ಅದಕ್ಕೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ಅವಿಭಜಿತ ಭಾರತವು ಅಶೋಕ ಸಾಮ್ರಾಜ್ಯದ ವಿಸ್ತಾರವನ್ನು ತೋರಿಸುತ್ತದೆ. ಜತೆಗೆ ಜವಾಬ್ದಾರಿಯುತ ಮತ್ತು ಜನ ಆಧಾರಿತ ಆಡಳಿತದ ಪರಿಕಲ್ಪನೆಗೆ ಸಾಕ್ಷಿಯಾಗಿದೆ’ ಎಂದು ಜೈಶಂಕರ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next