ಬೆಂಗಳೂರು: ಗಾರ್ಮೆಂಟ್ಸ್ ಮತ್ತಿತರ ಕಾರ್ಖಾನೆಗಳಿಗೆ ಕೆಲಸಕ್ಕಾಗಿ ನಿತ್ಯ ನಗರಕ್ಕೆ ಬರುವ ಮಹಿಳೆಯರಿಗಾಗಿ “ಇಂದಿರಾ ಸಾರಿಗೆ’ ಹೆಸರಿನಲ್ಲಿ ಪ್ರತ್ಯೇಕ ಬಸ್ ಆರಂಭಿಸಲು ನಿರ್ಧರಿಸಿರುವ ಸರ್ಕಾರ, ಇದೀಗ ಕಟ್ಟಡ ಕೂಲಿ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಕಾರ್ಮಿಕ ಇಲಾಖೆಯೊಂದಿಗೆ ನೊಂದಾಯಿಸಿಕೊಂಡಿರುವ 2.5 ಲಕ್ಷ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿಯಿಂದ ಉಚಿತ “ಇಂದಿರಾ ಪಾಸು’ ವಿತರಣೆಗೆ ಮುಂದಾಗಿದೆ.
ವಿಕಾಸಸೌಧದಲ್ಲಿ ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕಟ್ಟಡ ಕಾರ್ಮಿಕರಿಗೆ ಇಂದಿರಾ ಪಾಸ್ ವಿತರಿಸಲು ಅಗತ್ಯ ಹಣವನ್ನು ಈಗಾಗಲೇ ಸಾರಿಗೆ ಸಂಸ್ಥೆಗೆ ನೀಡಲಾಗಿದ್ದು, ಮಾ.13ರಿಂದ ಪಾಸ್‌ಗಳ ವಿತರಣೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಟ್ಟಡಗಳ ನಿರ್ಮಾಣ, ರಸ್ತೆ, ಸರ್ಕಾರಿ ಯೋಜನೆಗಳ ಕಾಮಗಾರಿಗಳಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರನ್ನು ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರು ಎಂದು ನೋಂದಣಿ ಮಾಡಲಾಗಿದೆ. ಪ್ರಸ್ತುತ ಕಾರ್ಮಿಕ ಇಲಾಖೆಯಲ್ಲಿ 2.5 ಲಕ್ಷ ನೋಂದಾಯಿತ ಕಾರ್ಮಿಕರಿದ್ದು, ಅವರೆಲ್ಲರಿಗೂ ಇಂದಿರಾ ಪಾಸ್ ನೀಡಲಾಗುವುದು. ಈ ಪಾಸ್ ಹೊಂದಿರುವವರು ನಗರಾದ್ಯಂತ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದರು.
ನಗರದ ಹೊರಭಾಗಗಳಿಂದ ಗಾರ್ಮೆಂಟ್ಸ್ ಮತ್ತಿತರೆ ಕಾರ್ಖಾನೆಗಳಿಗೆ ಕೆಲಸಕ್ಕೆ ಬರುವ ಮಹಿಳೆಯರಿಗೆ ಬಿಎಂಟಿಸಿಯಿಂದ ಇಂದಿರಾ ಸಾರಿಗೆ ಹೆಸರಿನಲ್ಲಿ ಪ್ರತ್ಯೇಕ ಬಸ್ ಸೇವೆ ಆರಂಭಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇನ್ನು ಹತ್ತು ದಿನಗಳಲ್ಲಿ ಇಂದಿರಾ ಸಾರಿಗೆ ಬಸ್‌ಗಳು ಸಂಚಾರ ಆರಂಭಿಸಲಿವೆ. ಇದಲ್ಲದೆ, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಆಸನಗಳಿಗೆ ಗುಲಾಬಿ ಬಣ್ಣ ಬಳಿಯುವ ಕಾರ್ಯವೂ ಆರಂಭವಾಗಿದೆ ಎಂದು ತಿಳಿಸಿದರು.
ಬಿಎಂಟಿಸಿಯ ವಜ್ರ ಹಾಗೂ ವೋಲ್ವೊ ಬಸ್ಸುಗಳ ಪ್ರಯಾಣ ದರದಲ್ಲಿ ಶೇ.10ರಿಂದ 30ರಷ್ಟು ರಿಯಾಯಿತಿ ನೀಡಿರುವುದರಿಂದ ಪ್ರಯಾಣಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಈ ರಿಯಾಯಿತಿಯನವ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ನಿಧರಿìಸಲಾಗಿದೆ. ಅಲ್ಲದೆ, ನಗರದಲ್ಲಿ ಪರಿಸರ ಸ್ನೇಹಿ ಸಮೂಹ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡಲು ಶೀಘ್ರದಲ್ಲೇ 40 ವಿದ್ಯುತ್‌ಚಾಲಿತ ಬಸ್ಸುಗಳ ಸೇವೆ ಆರಂಭಿಸಲಾಗುವುದು ಎಂದರು.
ನಗರದಲ್ಲಿ ಸಮೂಹ ಸಾರಿಗೆ ಪ್ರೋತ್ಸಾಹಿಸುವುದರ ಜತೆಗೆ ಪರಿಸರ ಮಾಲಿನ್ಯ ತಡೆಗಟ್ಟಲು ಸಾರಿಗೆ ಇಲಾಖೆಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ದಿನ ಆಚರಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ಯವಾಗಿದ್ದರೂ ಅಂದು ಅಧಿಕಾರಿಗಳು ತಮ್ಮ ಸ್ವಂತ ವಾಹನದಲ್ಲೇ ಓಡಾಡುತ್ತಿದ್ದರು.
ಹೀಗಾಗಿ ವಿರಳ ಸಂಚಾರ ದಿನದಂದು ಅಧಿಕಾರಿಗಳು ಕೂಡ ಕಡ್ಡಾಯವಾಗಿ ಸಮೂಹ ಸಾರಿಗೆಯಲ್ಲೇ (ಬಸ್) ಪ್ರಯಾಣಿಸಬೇಕು ಎಂದು ಸೂಚಿಸಲಾಗಿದ್ದು, ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಸಚಿವರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾತ್ರಿ ವೇಳೆ ಒಂಟಿ ಮಹಿಳೆಯರು ಬಸ್ಸು ನಿಲ್ದಾಣದಲ್ಲಿ ಇಳಿದು ನಡೆದುಕೊಂಡು ಹೋಗುವುದು ಸುರಕ್ಷಿತವಲ್ಲ. ಹೀಗಾಗಿ ಒಂದು ಬಸ್ಸು ನಿಲ್ದಾಣದಿಂದ ಮತ್ತೂಂದು ಬಸ್ಸು ನಿಲ್ದಾಣದ ನಡುವೆ ಅವರ ಮನೆ ಅಥವಾ ವಿನಂತಿಸಿದ ಸ್ಥಳದಲ್ಲಿ ಬಸ್ಸು ನಿಲ್ಲಿಸಬೇಕು. ಹಗಲು ವೇಳೆಯೂ ಮಹಿಳೆಯರು ಕೋರಿಕೆ ಸಲ್ಲಿಸಿದ ಕಡೆ ಬಸ್ ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ